ಕೆಕೆಆರ್​ಗೆ ಸೋಲಿನ ಸಿಕ್ಸರ್!: ರಾಜಸ್ಥಾನ ರಾಯಲ್ಸ್​ಗೆ 3 ವಿಕೆಟ್ ಜಯ, ಕಾರ್ತಿಕ್ ಆಟ ವ್ಯರ್ಥ

ಕೋಲ್ಕತ: ಅಂತಿಮ ಕ್ಷಣದವರೆಗೂ ಹೋರಾಡಿದರೂ ಗೆಲುವನ್ನು ಒಲಿಸಿಕೊಳ್ಳಲು ವಿಫಲವಾದ ಎರಡು ಬಾರಿಯ ಚಾಂಪಿಯನ್ ಕೋಲ್ಕತ ನೈಟ್ ರೈಡರ್ಸ್ ತಂಡ ಸತತ 6ನೇ ಸೋಲಿಗೆ ಶರಣಾಯಿತು. ರಾಜಸ್ಥಾನ ರಾಯಲ್ಸ್ ತಂಡದ ಯುವ ಆಲ್ರೌಂಡರ್ 17 ವರ್ಷದ ರಿಯಾನ್ ಪರಾಗ್ (47ರನ್, 31 ಎಸೆತ, 5 ಬೌಂಡರಿ, 2 ಸಿಕ್ಸರ್) ಹಾಗೂ ಜೋಫ್ರಾ ಆರ್ಚರ್ (27* ರನ್, 12 ಎಸೆತ, 2 ಬೌಂಡರಿ, 2 ಸಿಕ್ಸರ್) ಜೋಡಿಯ ಪ್ರತಿ ಹೋರಾಟದಿಂದಾಗಿ ಕೆಕೆಆರ್ 3 ವಿಕೆಟ್​ಗಳಿಂದ ಸೋಲು ಕಂಡಿತು. ಇದರೊಂದಿಗೆ ಕೆಕೆಆರ್ ಪ್ಲೇ-ಆಫ್ ಹಾದಿ ಕಠಿಣಗೊಂಡರೆ, ರಾಜಸ್ಥಾನ ಟೂರ್ನಿಯಲ್ಲಿ ತನ್ನ ಅವಕಾಶವನ್ನು ಮುಕ್ತವಾಗಿರಿಸಿಕೊಂಡಿತು.

ಈಡನ್ ಗಾರ್ಡನ್ಸ್ ಮೈದಾನದಲ್ಲಿ ಗುರುವಾರ ನಡೆದ ಐಪಿಎಲ್-12ರ ಪಂದ್ಯದಲ್ಲಿ ನಾಯಕ ದಿನೇಶ್ ಕಾರ್ತಿಕ್ (97* ರನ್, 50 ಎಸೆತ, 7 ಬೌಂಡರಿ, 9 ಸಿಕ್ಸರ್) ಏಕಾಂಗಿ ಹೋರಾಟದ ಫಲವಾಗಿ ಕೆಕೆಆರ್ 6 ವಿಕೆಟ್​ಗೆ 175 ರನ್​ಗಳಿಸಿದರೆ, ಪ್ರತಿಯಾಗಿ ರಾಜಸ್ಥಾನ ತಂಡ 19.2 ಓವರ್​ಗಳಲ್ಲಿ 7 ವಿಕೆಟ್​ಗೆ 177 ರನ್​ಗಳಿಸಿ ಜಯದ ನಗೆ ಬೀರಿತು.

ಕೆಕೆಆರ್ ನೀಡಿದ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಮಾಜಿ ನಾಯಕ ಅಜಿಂಕ್ಯ ರಹಾನೆ (34 ರನ್, 21ಎಸೆತ, 5 ಬೌಂಡರಿ, 1 ಸಿಕ್ಸರ್) ಹಾಗೂ ಸಂಜು ಸ್ಯಾಮ್ಸನ್ (22ರನ್, 15 ಎಸೆತ, 2 ಸಿಕ್ಸರ್) ಜೋಡಿ ಆರಂಭದಲ್ಲೇ ಅಬ್ಬರಿಸಿತು. ಆರಂಭದ 4 ಓವರ್​ಗಳಲ್ಲಿ ಸರಾಸರಿ 10 ರಂತೆ ರನ್ ಪೇರಿಸಿತು. ಈ ಜೋಡಿ ಎದುರಿಸಿದ 32 ಎಸೆತಗಳಲ್ಲಿ 53 ರನ್ ಕಲೆಹಾಕಿ ಉತ್ತಮ ಆರಂಭ ನೀಡಿತು. ರಹಾನೆ ಅವರನ್ನು ಎಲ್​ಬಿ ಬಲೆಗೆ ಬೀಳಿಸಿದ ಸುನೀಲ್ ನಾರಾಯಣ್ ರಾಯಲ್ಸ್ ಕುಸಿತಕ್ಕೂ ಮುನ್ನುಡಿ ಬರೆದರು. ಇದೇ ವೇಳೆ ನಾರಾಯಣ್ ಜತೆ ಚೆಂಡು ಹಂಚಿಕೊಂಡ ಪೀಯುಷ್ ಚಾವ್ಲಾ ಮತ್ತೊಂದು ತುದಿಯಿಂದ ರಾಯಲ್ಸ್​ಗೆ ಕಡಿವಾಣ ಹೇರಿದರು. ರಹಾನೆ ನಿರ್ಗಮನದ ಬಳಿಕ ಸಂಜು ಸ್ಯಾಮ್ಸನ್ ಕೂಡ ಬೌಲ್ಡ್ ಆದರು. ನಾಯಕ ಸ್ಟೀವನ್ ಸ್ಮಿತ್ (2) ನಿರಾಸೆ ಕಂಡರು. 10 ರನ್​ಗಳ ಅಂತರದಲ್ಲಿ ಅಗ್ರಕ್ರಮಾಂಕದ 3 ವಿಕೆಟ್ ಕಳೆದುಕೊಂಡ ರಾಜಸ್ಥಾನ ಆಘಾತದಿಂದ ತತ್ತರಿಸಿತು. ಬಳಿಕ ಬೆನ್ ಸ್ಟೋಕ್ಸ್ (11) ಹಾಗೂ ಸ್ಟುವರ್ಟ್ ಬಿನ್ನಿ (11) ಜೋಡಿಗೆ ಡಗೌಟ್ ದಾರಿ ತೋರಿದ ಚಾವ್ಲಾ ಕೆಕೆಆರ್ ತೆಕ್ಕೆಗೆ ಪಂದ್ಯ ಕೊಂಡೊಯ್ದರು.

ಚೊಚ್ಚಲ ಶತಕದಿಂದ ಕಾರ್ತಿಕ್ ವಂಚಿತ

ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ತಾಳ್ಮೆ ಕಳೆದುಕೊಳ್ಳದ ದಿನೇಶ್ ಕಾರ್ತಿಕ್ ರನ್ ಹಿಗ್ಗಿಸುತ್ತಾ ಸಾಗಿದರು. ಕಾಲೋಸ್ ಬ್ರಾಥ್​ವೇಟ್ (5) ವೈಫಲ್ಯರಾದರೆ, ಬಿರುಸಿನ ಬ್ಯಾಟಿಂಗ್ ಮೂಲಕ ಕಾರ್ತಿಕ್ ತಂಡದ ಮೊತ್ತವನ್ನು 170ರ ಗಡಿ ದಾಟಿಸಿದರು. ಯುವ ಬ್ಯಾಟ್ಸ್ ಮನ್ ರಿಂಕು ಸಿಂಗ್ (3*) ಹಾಗೂ ಕಾರ್ತಿಕ್ 7ನೇ ವಿಕೆಟ್​ಗೆ ಎದುರಿಸಿದ 16 ಎಸೆತಗಳಲ್ಲಿ 44ರನ್ ಗಳಿಸಿದರು. ಅಂತಿಮ 2 ಓವರ್​ಗಳಲ್ಲಿ ಕಾರ್ತಿಕ್-ರಿಂಕು ಜೋಡಿ ಕ್ರಮವಾಗಿ 16 ಹಾಗೂ 18 ರನ್ ಕಸಿಯಿತು. ಕೊನೇ ಎಸೆತದಲ್ಲಿ ಕಾರ್ತಿಕ್ ಶತಕ ಪೂರೈಸಲು 4 ರನ್ ಅಗತ್ಯವಿದ್ದರೂ ಕೇವಲ 1 ರನ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಕೇವಲ 3 ರನ್​ಗಳಿಂದ ಐಪಿಎಲ್​ನ ಚೊಚ್ಚಲ ಶತಕದಿಂದ ವಂಚಿತರಾದರು.

ದಿನೇಶ್ ಕಾರ್ತಿಕ್ ಹೋರಾಟದ ಆಟ

ಸತತ 5 ಸೋಲಿನ ಆಘಾತದಲ್ಲಿದ್ದ ಕೆಕೆಆರ್ ತಂಡ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಕ್ರಿಸ್ ಲ್ಯಾನ್​ರನ್ನು ಮೊದಲ ಓವರ್​ನಲ್ಲಿಯೇ ಔಟ್ ಮಾಡಿದ ವರುಣ್ ಆರನ್ ರಾಜಸ್ಥಾನಕ್ಕೆ ಮೇಲುಗೈ ನೀಡಿದರು. ಆರಂಭಿಕನಾಗಿ ಬಡ್ತಿ ಪಡೆದ ಯುವ ಬ್ಯಾಟ್ಸ್​ಮನ್ ಶುಭ್​ವಾನ್ ಗಿಲ್ (14) ಹಾಗೂ ನಿತೀಶ್ ರಾಣಾ (21) ಜೋಡಿ ಕೆಲಕಾಲ ಸಿಡಿದರೂ ಹೆಚ್ಚು ಹೊತ್ತು ನಿಲ್ಲಲಿಲ್ಲ. ಗಿಲ್ ಕೂಡ ವರುಣ್ ಆರನ್ ಎಸೆತದಲ್ಲಿ ಬೌಲ್ಡ್ ಆದರು. ಇವರ ಬೆನ್ನಹಿಂದೆಯೇ ರಾಣಾ ಕೂಡ ಶ್ರೇಯಸ್ ಗೋಪಾಲ್​ಗೆ ವಿಕೆಟ್ ಒಪ್ಪಿಸಿದರು. 42 ರನ್​ಗಳಿಗೆ ಕೆಕೆಆರ್ 3 ವಿಕೆಟ್ ಕಳೆದುಕೊಂಡಿತ್ತು. ಬಳಿಕ ದಿನೇಶ್ ಕಾರ್ತಿಕ್ ಇನಿಂಗ್ಸ್​ಗೆ ಜೀವ ತುಂಬಿದರು. ಸುನೀಲ್ ನಾರಾಯಣ್ (11) ಜತೆಗೂಡಿ ಕುಸಿಯುತ್ತಿದ್ದ ಇನಿಂಗ್ಸ್ ಕಟ್ಟಲು ಯತ್ನಿಸಿದರು. ಈ ಜೋಡಿ 4ನೇ ವಿಕೆಟ್​ಗೆ 38 ರನ್ ಪೇರಿಸಿ ಬೇರ್ಪಟ್ಟಿತು. ನಾರಾಯಣ್ ನಿರ್ಗಮನದ ಬಳಿಕ ಕ್ರೀಸ್​ಗಿಳಿದ ಆಂಡ್ರೆ ರಸೆಲ್ (14) ಎರಡು ಜೀವದಾನ ಪಡೆದರೂ, ದೊಡ್ಡ ಮೊತ್ತ ಪೇರಿಸಲು ವಿಫಲರಾದರು. 5ನೇ ವಿಕೆಟ್​ಗೆ ಕಾರ್ತಿಕ್-ರಸೆಲ್ ಜೋಡಿ ಉಪಯುಕ್ತ 49 ರನ್ ಕಲೆಹಾಕಿತು.

ಗಮನಸೆಳೆದ ರಿಯಾನ್ ಪರಾಗ್

ಅಗ್ರಕ್ರಮಾಂಕದ ಬ್ಯಾಟ್ಸ್​ಮನ್​ಗಳು ನಿರ್ಗಮನದಿಂದಾಗಿ ಸಂಕಷ್ಟದಲ್ಲಿದ್ದ ರಾಜಸ್ಥಾನ ತಂಡಕ್ಕೆ ರಿಯಾನ್ ಪರಾಗ್ ಹಾಗೂ ಕರ್ನಾಟಕದ ಶ್ರೇಯಸ್ ಗೋಪಾಲ್ (18ರನ್, 9ಎಸೆತ, 4 ಬೌಂಡರಿ) ಜೋಡಿ ಬಿರುಸಿನ ಬ್ಯಾಟಿಂಗ್ ತೋರುವ ಮೂಲಕ ತಂಡದ ಪಾಳಯದಲ್ಲಿ ಗೆಲುವಿನ ಆಸೆ ಚಿಗುರಿಸಿದರು. 6ನೇ ವಿಕೆಟ್ ಬಿರುಸಿನ 25 ರನ್ ಕಲೆಹಾಕಿ ಶ್ರೇಯಸ್ ಗೋಪಾಲ್ ನಿರ್ಗಮಿಸಿದರು. ಅನುಭವಿ ಬ್ಯಾಟ್ಸ್​ಮನ್​ಗಳು ನಿರ್ಗಮಿಸಿದರೂ ಎದೆಗುಂದದ ರಿಯಾನ್ ಹಾಗೂ ಜೋಫ್ರ ಆರ್ಚರ್ ಕೆಕೆಆರ್ ದಾಳಿಯನ್ನು ಸಮರ್ಥವಾಗಿ ಎದುರಿಸುವ ಮೂಲಕ ಗೆಲುವು ಕಸಿದರು. ಅಂತಿಮ ಓವರ್​ಗಳಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಈ ಜೋಡಿ 7ನೇ ವಿಕೆಟ್ 44 ರನ್​ಗಳಿಸಿತು. ರಿಯಾನ್, ರಸೆಲ್ ಎಸೆತದಲ್ಲಿ ಹಿಟ್​ವಿಕೆಟ್ ಆಗುವ ಮೂಲಕ ಪಂದ್ಯ ಮತ್ತಷ್ಟು ರೋಚಕತೆ ಕಾಯ್ದುಕೊಂಡಿತು. ಅಂತಿಮ ಓವರ್​ನಲ್ಲಿ ರಾಜಸ್ಥಾನ ಜಯ ದಾಖಲಿಸಲು 9 ರನ್​ಗಳ ಅವಶ್ಯಕತೆ ಇತ್ತು. ಪ್ರಸಿದ್ಧ ಕೃಷ್ಣ ಎಸೆದ ಆರಂಭಿಕ 2 ಎಸೆತಗಳನ್ನು ಕ್ರಮವಾಗಿ ಬೌಂಡರಿ ಹಾಗೂ ಸಿಕ್ಸರ್​ಗೆ ಅಟ್ಟಿದ ಆರ್ಚರ್ 4 ಎಸೆತಗಳು ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು.

97 ಇದು ದಿನೇಶ್ ಕಾರ್ತಿಕ್​ರ ಜೀವನಶ್ರೇಷ್ಠ ಟಿ20 ಮೊತ್ತ. ಇದಕ್ಕೂ ಮುನ್ನ ಆಂಧ್ರ ವಿರುದ್ಧ ಸಿಕಂದರಾಬಾದ್​ನಲ್ಲಿ ತಮಿಳುನಾಡು ತಂಡದ ಪರವಾಗಿ 90 ರನ್ ಬಾರಿಸಿದ್ದು ಅವರ ಗರಿಷ್ಠ ಮೊತ್ತವಾಗಿತ್ತು. 2013ರ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ಪರವಾಗಿ ಡೆಲ್ಲಿ ಡೇರ್​ಡೆವಿಲ್ಸ್ ವಿರುದ್ಧ 86 ರನ್ ಬಾರಿಸಿದ್ದು ಅವರ ಗರಿಷ್ಠವೆನಿಸಿತ್ತು.

ಮುಂದಿನ ಪಂದ್ಯಗಳು

·ಕೆಕೆಆರ್​ಗೆ ಮುಂಬೈ ಎದುರಾಳಿ

·ಯಾವಾಗ: ಏ.28

·ಎಲ್ಲಿ: ಕೋಲ್ಕತ

·ರಾಜಸ್ಥಾನಕ್ಕೆ ಸನ್​ರೈಸರ್ಸ್

ಎದುರಾಳಿ

·ಯಾವಾಗ: ಏ. 27

·ಎಲ್ಲಿ: ಜೈಪುರ