ಕೆಕೆಆರ್ ಗೆಲ್ಲಿಸಿದ ರಸೇಲ್‌ ಆರ್ಭಟ

ಕೋಲ್ಕತ: ಲೀಗ್ ಹಂತದಲ್ಲೇ ಹೊರಬೀಳುವ ಆತಂಕದಲ್ಲಿದ್ದ ಕೋಲ್ಕತ ನೈಟ್​ರೈಡರ್ಸ್ ತಂಡ ಸತತ 6 ಸೋಲುಗಳ ಬಳಿಕ ಕೊನೆಗೂ ಗೆಲುವಿನ ನಗೆ ಬೀರಿತು. ಆಂಡ್ರೆ ರಸೆಲ್ (80*ರನ್, 40 ಎಸೆತ, 6 ಬೌಂಡರಿ, 8 ಸಿಕ್ಸರ್, 25ಕ್ಕೆ 2 ವಿಕೆಟ್) ಆಲ್ರೌಂಡ್ ನಿರ್ವಹಣೆ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವನ್ನು 34 ರನ್​ಗಳಿಂದ ಸೋಲಿಸಿತು. ಇದರೊಂದಿಗೆ ಲೀಗ್​ನಲ್ಲಿ 5ನೇ ಜಯ ದಾಖಲಿಸಿದ ದಿನೇಶ್ ಕಾರ್ತಿಕ್ ಬಳಗ ಪ್ಲೇಆಫ್ ಆಸೆಯನ್ನು ಜೀವಂತವಾಗಿಟ್ಟಿಕೊಂಡಿತು. ಈ ಮೂಲಕ ಮುಂಬೈ ವಿರುದ್ಧ ಸತತ 7 ಸೋಲುಗಳ ಬಳಿಕ ಕೆಕೆಆರ್ ಗೆಲುವು ಕಂಡಿತು.

ಈಡನ್ ಗಾರ್ಡನ್ಸ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್, ರಸೆಲ್ ಜತೆಗೆ ಶುಭಮಾನ್ ಗಿಲ್ (76 ರನ್, 45 ಎಸೆತ, 6 ಬೌಂಡರಿ, 4 ಸಿಕ್ಸರ್) ಹಾಗೂ ಕ್ರಿಸ್ ಲ್ಯಾನ್ (54 ರನ್, 29 ಎಸೆತ, 8 ಬೌಂಡರಿ, 2 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ನೆರವಿನಿಂದ 2 ವಿಕೆಟ್​ಗೆ 232 ರನ್​ಗಳಿಸಿತು. ಪ್ರತಿಯಾಗಿ ಹಾರ್ದಿಕ್ ಪಾಂಡ್ಯ (91ರನ್, 34 ಎಸೆತ, 6 ಬೌಂಡರಿ, 9 ಸಿಕ್ಸರ್) ಏಕಾಂಗಿ ಹೋರಾಟದ ನಡುವೆಯೂ ಮುಂಬೈ 7 ವಿಕೆಟ್​ಗೆ 198 ರನ್ ಗಳಿಸಲಷ್ಟೇ ಶಕ್ತವಾಯಿತು.

ಮುಂಬೈಗೆ ಆರಂಭಿಕ ಶಾಕ್: ಬೃಹತ್ ಮೊತ್ತ ಬೆನ್ನಟ್ಟಿದ ಮುಂಬೈಗೆ ಸುನೀಲ್ ನಾರಾಯಣ್ (44ಕ್ಕೆ 2) ಹಾಗೂ ಆಂಡ್ರೆ ರಸೆಲ್ ಆರಂಭಿಕ ಆಘಾತ ನೀಡಿದರು. ಕ್ವಿಂಟನ್ ಡಿಕಾಕ್ (0) ಖಾತೆ ತೆರೆಯದೆ ನಿರ್ಗಮಿಸಿದರೆ, ರೋಹಿತ್ ಶರ್ಮ (12), ಲೆವಿಸ್ (15), ಸೂರ್ಯಕುಮಾರ್ (26) ಮಧ್ಯಮ ಕ್ರಮಾಂಕದಲ್ಲಿ ಕೈಕೊಟ್ಟ ಪರಿಣಾದ ಮುಂಬೈ ತಂಡ ದಿಢೀರ್ ಕುಸಿತ ಕಂಡಿತು. 58 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡ ಮುಂಬೈ ಸೋಲಿನ ಸುಳಿಯಲ್ಲಿ ಸಿಲುಕಿತು.

ಹಾರ್ದಿಕ್ ಹೋರಾಟ ವ್ಯರ್ಥ: ಅಗ್ರ ಕ್ರಮಾಂಕದ ಬ್ಯಾಟ್ಸ್​ಮನ್​ಗಳ ವೈಫಲ್ಯದಿಂದಾಗಿ ಸೋಲಿನತ್ತ ಮುಖಮಾಡಿದ ಮುಂಬೈಗೆ ಹಾರ್ದಿಕ್ ಪಾಂಡ್ಯ ಹಾಗೂ ಕೈರಾನ್ ಪೊಲ್ಲಾರ್ಡ್(20) ಜೋಡಿ ಬಿರುಸಿನ ಬ್ಯಾಟಿಂಗ್ ಮೂಲಕ ಕೆಲಕಾಲ ಹೋರಾಟ ಜೀವಂತವಿಟ್ಟಿತು. ಈ ಜೋಡಿ 5ನೇ ವಿಕೆಟ್​ಗೆ ಬಿರುಸಿನ 63 ರನ್ ಪೇರಿಸಿ ಬೇರ್ಪಟ್ಟಿತು. ಬಳಿಕ ಸಹೋದರ ಕೃನಾಲ್ ಜತೆಗೂಡಿ ಬಿರುಸಿನ ಬ್ಯಾಟಿಂಗ್ ಮುಂದುವರಿಸಿದ ಹಾರ್ದಿಕ್ 6ನೇ ವಿಕೆಟ್​ಗೆ 64 ರನ್ ಸೇರಿಸಿ ಮುಂಬೈ ಪಾಳಯದಲ್ಲಿ ಗೆಲುವಿನ ಆಸೆ ಚಿಗುರಿಸಿದರು. ಪ್ರತಿ ಓವರ್​ಗೆ 13ರಂತೆ ರನ್ ಪೇರಿಸುವ ಸವಾಲಿದ್ದರೂ ಹಾರ್ದಿಕ್ ಹೋರಾಟ ಮುಂದುವರಿಸಿದರು. ಆದರೆ ಗುರ್ನಿ ಎಸೆತದಲ್ಲಿ ಹಾರ್ದಿಕ್, ರಸೆಲ್​ಗೆ ಕ್ಯಾಚ್ ನೀಡಿದರು. ಇದರೊಂದಿಗೆ ಮುಂಬೈ ಸವಾಲು ಕೂಡ ಅಂತ್ಯಗೊಂಡಿತು. -ಏಜೆನ್ಸೀಸ್

ಲ್ಯಾನ್-ಗಿಲ್ ಬಿರುಸಿನ ಆರಂಭ

ಕ್ರಿಸ್ ಲ್ಯಾನ್ ಹಾಗೂ 19ರ ಹರೆಯದ ಶುಭಮಾನ್ ಗಿಲ್ ಜೋಡಿ 57 ಎಸೆತಗಳಲ್ಲಿ 96 ರನ್ ಕೂಡಿಸಿ ಕೆಕೆಆರ್​ಗೆ ಉತ್ತಮ ಆರಂಭ ಒದಗಿಸಿತು. ಬರೀಂದರ್ ಸ್ರಾನ್ ಎಸೆದ ಮೊದಲ ಓವರ್​ನಲ್ಲೇ 2 ಬೌಂಡರಿ, 1 ಸಿಕ್ಸರ್ ಒಳ ಗೊಂಡಂತೆ 14 ರನ್ ಸಿಡಿಸಿದ ಗಿಲ್ ಸ್ಪೋಟಕ ಬ್ಯಾಟಿಂಗ್​ಗೆ ಚಾಲನೆ ನೀಡಿದರು. 18 ರನ್​ಗಳಿಸಿದ್ದ ವೇಳೆ ಮಾಲಿಂಗ ಎಸೆತದಲ್ಲಿ ಪೊಲ್ಲಾರ್ಡ್​ರಿಂದ ಜೀವದಾನ ಪಡೆದ ಲ್ಯಾನ್, 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಬೆನ್ನಲ್ಲೇ ರಾಹುಲ್ ಚಹರ್ ಎಸೆತದಲ್ಲಿ ಲೆವಿಸ್ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು.

ಆಂಡ್ರೆ ರಸೆಲ್ ಆರ್ಭಟಕ್ಕೆ ಮುಂಬೈ ತತ್ತರ

ಲ್ಯಾನ್ ನಿರ್ಗಮನದ ಬಳಿಕ 3ನೇ ಕ್ರಮಾಂಕಕ್ಕೆ ಬಡ್ತಿ ಪಡೆದ ಆಂಡ್ರೆ ರಸೆಲ್, ಗಿಲ್ ಜತೆಗೂಡಿ ಎಂದಿನ ಸ್ಪೋಟಕ ಬ್ಯಾಟಿಂಗ್ ಮುಂದುವರಿಸಿದರು. ಗಿಲ್-ರಸೆಲ್ ಜೋಡಿಯ ಅಬ್ಬರದಿಂದಾಗಿ ಕೆಕೆಆರ್, 15ನೇ ಓವರ್ ಮುಕ್ತಾಯಕ್ಕೆ 150ರ ಗಡಿ ದಾಟಿತು. ಈ ವೇಳೆ 2ನೇ ವಿಕೆಟ್​ಗೆ 61 ರನ್ ಪೇರಿಸಿ ಗಿಲ್ ಔಟಾದರು. ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿದ್ದ ಲೆವಿಸ್​ಗೆ ಕ್ಯಾಚ್ ನೀಡಿ ಗಿಲ್ ಔಟಾದರು. ಬಳಿಕ ಬಿರುಸಿನ ಬ್ಯಾಟಿಂಗ್ ಮುಂದವರಿಸಿದ ರಸೆಲ್, ನಾಯಕ ದಿನೇಶ್ ಕಾರ್ತಿಕ್ (15*) ಜತೆಗೂಡಿ ರನ್​ವೇಗವನ್ನು ಮತ್ತಷ್ಟು ಹೆಚ್ಚಿಸಿದರು. ಅಂತಿಮ 3 ಓವರ್​ಗಳಲ್ಲಿ 55 ರನ್ ಕಲೆಹಾಕಿದ ಈ ಜೋಡಿ 29 ಎಸೆತಗಳಲ್ಲಿ 74 ರನ್ ಜತೆಯಾಟವಾಡಿತು.

ಕೆಕೆಆರ್: 2 ವಿಕೆಟ್​ಗೆ 232

ಶುಭಮಾನ್ ಗಿಲ್ ಸಿ ಲೆವಿಸ್ ಬಿ ಹಾರ್ದಿಕ್ 76

ಕ್ರಿಸ್ ಲ್ಯಾನ್ ಸಿ ಲೆವಿಸ್ ಬಿ ರಾಹುಲ್ ಚಹರ್ 54

ಆಂಡ್ರೆ ರಸೆಲ್ ಅಜೇಯ 80

ದಿನೇಶ್ ಕಾರ್ತಿಕ್ ಔಟಾಗದೆ 15

ಇತರ: 7, ವಿಕೆಟ್ ಪತನ: 1-96, 2-158. ಬೌಲಿಂಗ್: ಬರಿಂದರ್ ಸ್ರಾನ್ 2-0-27-0, ಕೃನಾಲ್ ಪಾಂಡ್ಯ 3-0-27-0, ಲಸಿತ್ ಮಾಲಿಂಗ 4-0-48-0, ಬುಮ್ರಾ 4-0-44-0, ರಾಹುಲ್ ಚಹರ್ 4-0-54-1, ಹಾರ್ದಿಕ್ ಪಾಂಡ್ಯ 3-0-31-1.

ಮುಂಬೈ ಇಂಡಿಯನ್ಸ್: 7 ವಿಕೆಟ್​ಗೆ 198

ಕ್ವಿಂಟನ್ ಡಿಕಾಕ್ ಸಿ ರಸೆಲ್ ಬಿ ನಾರಾಯಣ್ 0

ರೋಹಿತ್ ಶರ್ಮ ಎಲ್​ಬಿಡಬ್ಲ್ಯು ಬಿ ಗುರ್ನಿ 12

ಎವಿನ್ ಲೆವಿಸ್ ಸಿ ಕಾರ್ತಿಕ್ ಬಿ ರಸೆಲ್ 15

ಸೂರ್ಯ ಸಿ ಕಾರ್ತಿಕ್ ಬಿ ರಸೆಲ್ 26

ಪೊಲ್ಲಾರ್ಡ್ ಸಿ ರಾಣಾ ಬಿ ನಾರಾಯಣ್ 20

ಹಾರ್ದಿಕ್ ಪಾಂಡ್ಯ ಸಿ ರಸೆಲ್ ಬಿ ಗುರ್ನಿ 91

ಕೃನಾಲ್ ಪಾಂಡ್ಯ ಸಿ ಮತ್ತು ಬಿ ಚಾವ್ಲಾ 24

ಬರೀಂದರ್ ಸ್ರಾನ್ ಔಟಾಗದೆ 3

ರಾಹುಲ್ ಚಹರ್ ಔಟಾಗದೆ 1

ಇತರ: 6, ವಿಕೆಟ್ ಪತನ: 1-9, 2-21, 3-41, 4-58, 5-121, 6-185, 7-196. ಬೌಲಿಂಗ್: ಸಂದೀಪ್ ವಾರಿಯರ್ 4-0-29-0, ಸುನೀಲ್ ನಾರಾಯಣ್ 4-0-44-2, ಹ್ಯಾರಿ ಗುರ್ನಿ 4-0-37-2, ಆಂಡ್ರೆ ರಸೆಲ್ 4-0-25-2, ಪೀಯುಷ್ ಚಾವ್ಲಾ 4-0-57-1.