ಧವನ್ ಅಬ್ಬರಕ್ಕೆ ಬೆದರಿದ ನೈಟ್​ರೈಡರ್ಸ್

ಕೋಲ್ಕತ: ಅನುಭವಿ ಎಡಗೈ ಬ್ಯಾಟ್ಸ್​ಮನ್ ಶಿಖರ್ ಧವನ್ (97*ರನ್, 63 ಎಸೆತ, 11 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್-12ರಲ್ಲಿ ಕೋಲ್ಕತ ನೈಟ್​ರೈಡರ್ಸ್ ತಂಡವನ್ನು 7 ವಿಕೆಟ್​ಗಳಿಂದ ಮಣಿಸಿತು. ಇದರೊಂದಿಗೆ ಪ್ರಸಕ್ತ ಟೂರ್ನಿಯಲ್ಲಿ ಕೆಕೆಆರ್ ವಿರುದ್ಧ ಆಡಿದ ಎರಡೂ ಪಂದ್ಯಗಳಲ್ಲೂ ಜಯ ದಾಖಲಿಸಿದ ಡೆಲ್ಲಿ ತಂಡ ಒಟ್ಟಾರೆ 4ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿತು. ಈಡನ್ ಗಾರ್ಡನ್ಸ್ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ ಶುಭಮಾನ್ ಗಿಲ್ (65ರನ್, 39 ಎಸೆತ, 7 ಬೌಂಡರಿ, 2 ಸಿಕ್ಸರ್) ಮತ್ತು ವೆಸ್ಟ್ ಇಂಡೀಸ್​ನ ದೈತ್ಯ ಬ್ಯಾಟ್ಸ್​ಮನ್ ಆಂಡ್ರೆ ರಸೆಲ್ (45ರನ್, 21 ಎಸೆತ, 3 ಬೌಂಡರಿ, 4 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ಫಲವಾಗಿ 7 ವಿಕೆಟ್​ಗೆ 178 ರನ್​ಗಳಿಸಿತು. ಪ್ರತಿಯಾಗಿ ಡೆಲ್ಲಿ ತಂಡ ಧವನ್ ಹಾಗೂ ರಿಷಭ್ ಪಂತ್ (46ರನ್, 31 ಎಸೆತ, 4 ಬೌಂಡರಿ, 2 ಸಿಕ್ಸರ್) ಜೋಡಿ 3ನೇ ವಿಕೆಟ್​ಗೆ ಪೇರಿಸಿದ 105 ರನ್​ಗಳ ನೆರವಿನಿಂದ 18.5 ಓವರ್​ಗಳಲ್ಲಿ 3 ವಿಕೆಟ್​ಗೆ 180 ರನ್​ಗಳಿಸಿ ಗೆಲುವಿನ ನಗೆ ಬೀರಿತು.

ಧವನ್-ರಿಷಭ್ ಭರ್ಜರಿ ಬ್ಯಾಟಿಂಗ್: ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಡೆಲ್ಲಿ ತಂಡ ಉತ್ತಮ ಆರಂಭ ಪಡೆಯಲು ಯಶಸ್ವಿಯಾಯಿತು. ಯುವ ಬ್ಯಾಟ್ಸ್ ಮನ್ ಪೃಥ್ವಿ ಷಾ (14) ಹಾಗೂ ಅನುಭವಿ ಶಿಖರ್ ಧವನ್ ಜೋಡಿ ಆರಂಭದಲ್ಲೇ ಬಿರುಸಿನ ಬ್ಯಾಟಿಂಗ್ ನಡೆಸಿತು. ಆದರೆ, ಕನ್ನಡಿಗ ಪ್ರಸಿದ್ಧ ಕೃಷ್ಣ, ಪೃಥ್ವಿ ಷಾಗೆ ಕಡಿವಾಣ ಹಾಕಿದರು. ಧವನ್ ಬಿರುಸಿನ ಬ್ಯಾಟಿಂಗ್ ಮುಂದಾದರೂ ಮತ್ತೊಂದು ತುದಿಯಲ್ಲಿದ್ದ ನಾಯಕ ಶ್ರೇಯಸ್ ಅಯ್ಯರ್ (6) ಹೆಚ್ಚು ಹೊತ್ತು ನಿಲ್ಲಲಿಲ್ಲ. ಅಲ್ಪ ಅಂತರದಲ್ಲಿ 2 ವಿಕೆಟ್ ಕಳೆದುಕೊಂಡರೂ ಡೆಲ್ಲಿ ತಂಡ ಉತ್ತಮ ರನ್​ಗಳಿಕೆ ಕಾಯ್ದುಕೊಂಡಿತು. ಶ್ರೇಯಸ್ ಅಯ್ಯರ್ ನಿರ್ಗಮನದ ಬಳಿಕ ಆರಂಭಿಕ ಶಿಖರ್ ಧವನ್ ಜತೆಯಾದ ವಿಕೆಟ್ಕೀಪರ್-ಬ್ಯಾಟ್ಸ್ ಮನ್ ರಿಷಭ್ ಪಂತ್ ಜೋಡಿ ಆತಿಥೇಯ ಕೆಕೆಆರ್ ಬೌಲರ್​ಗಳನ್ನು ಕಂಗೆಡಿಸಿತು. ಯಾವುದೇ ಹಂತದಲ್ಲೂ ಅಪಾಯವಾಗದಂತೆ ನೋಡಿಕೊಂಡ ಈ ಜೋಡಿ ರನ್​ವೇಗವನ್ನು ಹೆಚ್ಚಿಸುತ್ತಾ ಸಾಗಿತು. ಈ ಜೋಡಿ ಬೇರ್ಪಡಿಸಲು ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ ಪದೇಪದೇ 7 ಬೌಲರ್​ಗಳ ನಡುವೆ ಚೆಂಡು ಹಂಚಿದರೂ ಪ್ರಯೋಜನವಾಗಲಿಲ್ಲ. ಡೆಲ್ಲಿ ತಂಡ ಗೆಲುವಿನಂಚಿನಲ್ಲಿದ್ದ ವೇಳೆ ನಿತೀಶ್ ರಾಣಾ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾದ ರಿಷಭ್ ಬೌಂಡರಿ ಲೈನ್​ನಲ್ಲಿದ್ದ ಕುಲದೀಪ್ ಯಾದವ್​ಗೆ ಕ್ಯಾಚ್ ನೀಡಿದರು. -ಏಜೆನ್ಸೀಸ್

ಧವನ್ ಶತಕ ತಪ್ಪಿಸಿದ ಕಾಲಿನ್ ಇನ್​ಗ್ರಾಮ್

ಡೆಲ್ಲಿ ತಂಡ ಜಯ ದಾಖಲಿಸಲು 6 ರನ್ ಬಾಕಿಯಿದ್ದಾಗ ಧವನ್ ಶತಕ ಪೂರೈಸಲು ಕೇವಲ 3 ರನ್​ಗಳಷ್ಟೇ ಅವಶ್ಯಕತೆ ಇತ್ತು. 19ನೇ ಓವರ್ ಎಸೆದ ಪೀಯುಷ್ ಚಾವ್ಲಾ ಎಸೆತದಲ್ಲಿ ರನ್​ಗಳಿಸಿ ಧವನ್, ಕಾಲಿನ್ ಇನ್​ಗ್ರಾಮ್ೆ ಕ್ರೀಸ್ ಬಿಟ್ಟುಕೊಟ್ಟರು. ಆದರೆ, ಇನ್​ಗ್ರಾಮ್ ಸಿಂಗಲ್ಸ್ ತೆಗೆಯುವ ಬದಲಿಗೆ ಸಿಕ್ಸರ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೆಕೆಆರ್ ವಿರುದ್ಧದ ಹಿಂದಿನ ಮುಖಾಮುಖಿಯಲ್ಲಿ ಪೃಥ್ವಿ ಷಾ ಶತಕದ ಆಸೆಗಾಗಿ ನಿಧಾನಗತಿ ಯಲ್ಲಿ ಆಡಿದ್ದರಿಂದ ಕೊನೆಗೆ ಟೈ ಕಂಡಿದ್ದ ಡೆಲ್ಲಿ, ಅದರಿಂದ ಪಾಠ ಕಲಿತು ಶತಕಕ್ಕಿಂತ ಪಂದ್ಯವನ್ನು ಬೇಗನೆ ಮುಗಿಸಲು ಆದ್ಯತೆ ನೀಡಿತು.

ಕೆಕೆಆರ್ ಮೊತ್ತ ಹಿಗ್ಗಿಸಿದ ವೆಸ್ಟ್ ಇಂಡೀಸ್ ಜೋಡಿ

ಶುಭಮಾನ್ ಗಿಲ್ ನಿರ್ಗಮನದ ಬಳಿಕ ಬಂದ ವೆಸ್ಟ್ ಇಂಡೀಸ್​ನ ಮತ್ತೋರ್ವ ಬ್ಯಾಟ್ಸ್​ಮನ್ ಕಾಲೋಸ್ ಬ್ರಾಥ್​ವೇಟ್ (6), ಆಂಡ್ರೆ ರಸೆಲ್​ಗೆ ಅಗತ್ಯ ಸಾಥ್ ನೀಡಿದರು. ಡೆಲ್ಲಿ ಬೌಲರ್​ಗಳ ಸಂಘಟಿತ ಯತ್ನದ ಫಲವಾಗಿ ಸಾಧಾರಣ ಮೊತ್ತದತ್ತ ಸಾಗುತ್ತಿದ್ದ ತಂಡದ ಮೊತ್ತವನ್ನು ಹಿಗ್ಗಿಸಿದರು. ರಸೆಲ್ ಕಣದಲ್ಲಿರುವವರೆಗೂ ಪ್ರತಿ ಓವರ್​ಗೆ ಸರಾಸರಿ 10-12ರಂತೆ ಕಲೆಹಾಕಿ ಮಾರಿಸ್ ಎಸೆತದಲ್ಲಿ ಕವರ್​ನಲ್ಲಿದ್ದ ರಬಾಡಗೆ ಕ್ಯಾಚ್ ನೀಡಿದರು. ಕೊನೇ ಓವರ್​ನಲ್ಲಿ ಪೀಯುಷ್ ಚಾವ್ಲಾ (14) 10 ರನ್ ಸಿಡಿಸಿದರು.

ಡೆಲ್ಲಿ ಡಗ್​ಔಟ್​ನಲ್ಲಿ ಸೌರವ್ ಗಂಗೂಲಿ!

ಸ್ವಹಿತಾಸಕ್ತಿ ಸಂಘರ್ಷದ ಸುಳಿಗೆ ಸಿಲುಕಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಲಹೆಗಾರ ಸೌರವ್ ಗಂಗೂಲಿ ಈಡನ್ ಗಾರ್ಡನ್ಸ್ ಮೈದಾನದ ಪ್ರವಾಸಿ ತಂಡದ ಡಗ್​ಔಟ್​ನಲ್ಲಿ ಕುಳಿತು ಗಮನಸೆಳೆದರು. ಗಂಗೂಲಿ ಪಂದ್ಯ ಆರಂಭಕ್ಕೂ ಮುನ್ನ ಡೆಲ್ಲಿ ಆಟಗಾರರಿಗೆ ಟಿಪ್ಸ್ ಕೂಡ ನೀಡಿದರು. ಬಂಗಾಳ ಕ್ರಿಕೆಟ್ ಸಂಸ್ಥೆಯ (ಸಿಎಬಿ) ಅಧ್ಯಕ್ಷರೂ ಆಗಿರುವ ಗಂಗೂಲಿ ಪಿಚ್ ಕ್ಯುರೇಟರ್​ಗಳ ಮೇಲೆ ಪರಿಣಾಮ ಬೀರುತ್ತಾರೆ ಎಂದು ಆರೋಪಿಸಿ ಕೋಲ್ಕತದ ಕ್ರಿಕೆಟ್ ಅಭಿಮಾನಿಗಳು ಬಿಸಿಸಿಐ ಒಂಬುಡ್ಸ್​ಮನ್​ಗೆ ಪತ್ರ ಬರೆದಿದ್ದರು.

ಹೊರಗುಳಿದ ನಾರಾಯಣ್, ಲ್ಯಾನ್

ಆತಿಥೇಯ ಕೆಕೆಆರ್ ತಂಡ ಮೂರು ಹಾಗೂ ಡೆಲ್ಲಿ ಏಕೈಕ ಬದಲಾವಣೆ ಮಾಡಿಕೊಂಡಿತು. ಲಾಕಿ ಫರ್ಗ್ಯೂಸನ್, ಜೋಯಿ ಡೆನ್ಲಿ ಹಾಗೂ ಕಾಲೋಸ್ ಬ್ರಾಥ್​ವೇಟ್ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡರೆ, ಸುನೀಲ್ ನಾರಾಯಣ್, ಹ್ಯಾರಿ ಗುರ್ನಿ, ಕ್ರಿಸ್ ಲ್ಯಾನ್ ಹೊರಗುಳಿದರು. ಡೆಲ್ಲಿ ಪರ ಸಂದೀಪ್ ಲಮಿಚನ್ನೆ ಬದಲಿಗೆ ಕೀಮೊ ಪೌಲ್ ಕಣಕ್ಕಿಳಿದರು.

ನೈಟ್​ರೈಡರ್ಸ್​ಗೆ ಶುಭಮಾನ್ ಆಸರೆ

ಡೆಲ್ಲಿ ತಂಡದ ವೇಗಿ ಇಶಾಂತ್ ಶರ್ಮ (21ಕ್ಕೆ1) ಇನಿಂಗ್ಸ್​ನ ಮೊದಲ ಎಸೆತದಲ್ಲೇ ಆತಿಥೇಯ ಕೆಕೆಆರ್ ತಂಡಕ್ಕೆ ಶಾಕ್ ಕೊಟ್ಟರು. ಐಪಿಎಲ್​ನ ಪದಾರ್ಪಣೆ ಪಂದ್ಯವಾಡಿದ ಇಂಗ್ಲೆಂಡ್​ನ ಜೋಯಿ ಡೆನ್ಲಿ (0) ಎದುರಿಸಿದ ಮೊದಲ ಎಸೆತದಲ್ಲೇ ಬೌಲ್ಡ್ ಆದರು. ಬಳಿಕ, ಆರಂಭಿಕ ಶುಭಮಾನ್ ಗಿಲ್ ಹಾಗೂ ಕನ್ನಡಿಗ ರಾಬಿನ್ ಉತ್ತಪ್ಪ (28ರನ್, 30 ಎಸೆತ, 4 ಬೌಂಡರಿ, 1 ಸಿಕ್ಸರ್) ತಂಡಕ್ಕೆ ಚೇತರಿಕೆ ನೀಡಲು ಯತ್ನಿಸಿದರು. ಈ ಜೋಡಿ 2ನೇ ವಿಕೆಟ್​ಗೆ 63 ರನ್ ಪೇರಿಸಿ ಬೇರ್ಪಟ್ಟಿತು. ಕಗಿಸೊ ರಬಾಡ ಎಸೆತದಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ ಹಿಡಿದ ಅದ್ಭುತ ಕ್ಯಾಚ್​ಗೆ ಉತ್ತಪ್ಪ ಬಲಿಯಾದರು. ಮಧ್ಯಮ ಕ್ರಮಾಂಕದಿಂದ ಆರಂಭಿಕನಾಗಿ ಬಡ್ತಿ ಪಡೆದು ಆಡಿದ 19ರ ಹರೆಯದ ಶುಭಮಾನ್ ಗಿಲ್ ಆಕರ್ಷಕ ಬ್ಯಾಟಿಂಗ್ ಮೂಲಕ ಗಮನಸೆಳೆದರು. ಡೆಲ್ಲಿ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಿದ ಗಿಲ್, ನಿತಿನ್ ರಾಣಾ (11) ಜತೆಗೂಡಿ 3ನೇ ವಿಕೆಟ್​ಗೆ 30 ರನ್ ಕಲೆಹಾಕಿದರೆ, ಅನುಭವಿ ಆಂಡ್ರೆ ರಸೆಲ್ ಜತೆಗೆ 4ನೇ ವಿಕೆಟ್​ಗೆ 22 ರನ್ ಸೇರಿಸಿದರು. ಜತೆಗೆ ಐಪಿಎಲ್​ನಲ್ಲಿ 2ನೇ ಅರ್ಧಶತಕ ಪೂರೈಸಿದರು. ಇದರ ಬೆನ್ನಲ್ಲೇ ಕೀಮೊ ಪೌಲ್ ಎಸೆತದಲ್ಲಿ ಅಕ್ಷರ್ ಪಟೇಲ್​ಗೆ ಕ್ಯಾಚ್ ನೀಡಿ ಔಟಾದರು. ಬಳಿಕ ಬಂದ ದಿನೇಶ್ ಕಾರ್ತಿಕ್ ಹೆಚ್ಚು ಹೊತ್ತು ನಿಲ್ಲಲಿಲ್ಲ.

ಧವನ್ ಟಿ20 ಕ್ರಿಕೆಟ್​ನಲ್ಲಿ ಜೀವನಶ್ರೇಷ್ಠ ವೈಯಕ್ತಿಕ ರನ್ ಗಳಿಸಿದರು. ಅಜೇಯ 95 ರನ್ ಅವರ ಹಿಂದಿನ ಗರಿಷ್ಠ ರನ್.

Leave a Reply

Your email address will not be published. Required fields are marked *