More

    ಭಾರತಕ್ಕೆ ಇಂದು ಕಿವೀಸ್ ಟಿ20 ಟೆಸ್ಟ್

    ಆಕ್ಲೆಂಡ್: ಸತತ ಸೋಲುಗಳ ಹಿನ್ನಡೆಯಲ್ಲಿರುವ ಆತಿಥೇಯ ನ್ಯೂಜಿಲೆಂಡ್ ಹಾಗೂ ಪ್ರವಾಸಿ ಆಸ್ಟ್ರೇಲಿಯಾ ತಂಡವನ್ನು ತವರಿನಲ್ಲಿ ನಡೆದ ಏಕದಿನ ಸರಣಿಯಲ್ಲಿ ಬಗ್ಗುಬಡಿದಿರುವ ಭಾರತ ತಂಡ ಶುಕ್ರವಾರದಿಂದ ಆರಂಭವಾಗಲಿರುವ 41 ದಿನಗಳ ದ್ವಿಪಕ್ಷೀಯ ಸರಣಿಯ ಹೋರಾಟದಲ್ಲಿ ಕಾದಾಡಲಿವೆ. ಈ ದ್ವಿಪಕ್ಷೀಯ ಸರಣಿಯ ಮೊದಲ ಹಂತವಾಗಿ ಐದು ಪಂದ್ಯಗಳ ಟಿ20 ಸರಣಿಗೆ ಶುಕ್ರವಾರ ಚಾಲನೆ ಸಿಗಲಿದ್ದು, ಪ್ರವಾಸಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಈಡನ್ ಪಾರ್ಕ್ ಮೈದಾನದಲ್ಲಿ ಎದುರಾಗಲಿವೆ.

    ನ್ಯೂಜಿಲೆಂಡ್ ತಂಡ ಸದ್ಯದ ಮಟ್ಟಿಗೆ ದಯನೀಯ ಸ್ಥಿತಿಯಲ್ಲಿದೆ. ಆಸ್ಟ್ರೇಲಿಯಾ ವಿರುದ್ಧದ ಕಳೆದ ಟೆಸ್ಟ್ ಸರಣಿಯಲ್ಲಿ ವೈಟ್​ವಾಷ್ ಅವಮಾನ ಕಂಡಿದ್ದ ನ್ಯೂಜಿಲೆಂಡ್, ಇಂಗ್ಲೆಂಡ್ ವಿರುದ್ಧ ನಡೆದ ಟಿ20 ಸರಣಿಯಲ್ಲೂ 2-3 ರಿಂದ ಸೋಲು ಕಂಡಿತ್ತು. ಐದು ಪಂದ್ಯಗಳ ಟಿ20 ಸರಣಿಯ ಒಂದು ಹಂತದಲ್ಲಿ 2-1 ಮುನ್ನಡೆಯಲ್ಲಿದ್ದ ನ್ಯೂಜಿಲೆಂಡ್ ನಂತರದ ಎರಡೂ ಪಂದ್ಯಗಳನ್ನು ಸೋತು ಆಂಗ್ಲರ ತಂಡಕ್ಕೆ ಶರಣಾಗಿತ್ತು. ಆಕ್ಲೆಂಡ್​ನಲ್ಲಿಯೇ ನಡೆದಿದ್ದ ಕೊನೆಯ ಟಿ20 ಪಂದ್ಯದಲ್ಲಿ ತಂಡ ಸೂಪರ್ ಓವರ್​ನಲ್ಲಿ ಮುಗ್ಗರಿಸಿ ನಿರಾಸೆ ಎದುರಿಸಿತ್ತು. ಹಿಂದಿನ ಕೆಲ ಸರಣಿಯಿಂದ ಇಂಥ ಫಲಿತಾಂಶಗಳನ್ನು ಎದುರಿಸಿರುವ ನ್ಯೂಜಿಲೆಂಡ್ ಈಗ ತವರಿನಲ್ಲಿಯೇ ಬಲಿಷ್ಠ ಭಾರತ ತಂಡವನ್ನು ಎದುರಿಸುವ ಸವಾಲು ಪಡೆದುಕೊಂಡಿದೆ. ಇದರ ನಡುವೆ ತಂಡದ ಪ್ರಮುಖ ವೇಗಿಗಳಾದ ಟ್ರೆಂಟ್ ಬೌಲ್ಟ್, ಮ್ಯಾಟ್ ಹೆನ್ರಿ ಹಾಗೂ ಲಾಕಿ ಫರ್ಗ್ಯುಸನ್ ಗಾಯಗೊಂಡಿರುವುದು ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. ಕಳೆದ ವರ್ಷ ಭಾರತವನ್ನು ಟಿ20 ಸರಣಿಯಲ್ಲಿ 2-1 ರಿಂದ ಮಣಿಸಿರುವುದೊಂದೇ ನ್ಯೂಜಿಲೆಂಡ್ ಪಾಲಿನ ಆಶಾದಾಯಕ ಸಂಗತಿ ಎನಿಸಿದೆ.

    ಈ ವರ್ಷಾಂತ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ದೃಷ್ಟಿಯಿಂದಲೂ ಎರಡೂ ತಂಡ ಆಡಲಿರುವ ಪ್ರಮುಖ ಸರಣಿ ಇದಾಗಿದೆ. ವಿಶ್ವಕಪ್​ವರೆಗೆ ಉಭಯ ತಂಡಗಳು ತಲಾ 20 ಪಂದ್ಯಗಳು ಆಡಲಿರುವ ಕಾರಣ, ಸಿದ್ಧತೆಯ ದೃಷ್ಟಿಯಲ್ಲಿ ಈ ಸರಣಿ ಮಹತ್ವವಾಗಿ ಕಂಡಿದೆ.

    ಭಾರತ ತಂಡ ಕೂಡ ಶಿಖರ್ ಧವನ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್ ಹಾಗೂ ದೀಪಕ್ ಚಹರ್ ಇಲ್ಲದೆ ಟ್ರಾನ್ಸ್ ಟಾಸ್ಮನ್ ದೇಶಕ್ಕೆ ಆಗಮಿಸಿದೆ. ಆದರೆ, ತಂಡದ ಮೀಸಲು ಪಡೆ ಕೂಡ ಬಲಿಷ್ಠವಾಗಿರುವ ಕಾರಣ ಕಿವೀಸ್​ಗೆ ಸವಾಲೊಡ್ಡುವ ನಿರೀಕ್ಷೆ ಇಡಬಹುದು. ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ 2-0 ಹಾಗೂ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯನ್ನು 2-1 ರಿಂದ ಗೆದ್ದಿದ್ದು ಇದಕ್ಕೆ ಸಾಕ್ಷಿ.

    ಟೀಮ್ ನ್ಯೂಸ್

    ಭಾರತ: ಭಾರತ ತಂಡದ ಕೊನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಐದು ಬೌಲಿಂಗ್ ಆಯ್ಕೆಗಳೊಂದಿಗೆ ಆಡಿತ್ತು. ಆದರೆ, ದೊಡ್ಡ ಮೊತ್ತ ದಾಖಲಾಗುವ ಈಡನ್ ಪಾರ್ಕ್ ಪಿಚ್​ನಲ್ಲಿ ಮತ್ತೊಬ್ಬ ಬೌಲರ್​ಅನ್ನು ತಂಡಕ್ಕೆ ಆಯ್ಕೆ ಮಾಡಬೇಕಾದ ಸವಾಲನ್ನು ಹೊಂದಿದೆ. ಟಿ20 ಮಾದರಿಯಲ್ಲೂ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ ಎಂದು ವಿರಾಟ್ ಕೊಹ್ಲಿ ಹೇಳಿದ್ದು, ಇದರಿಂದಾಗಿ ಮತ್ತೊಬ್ಬ ಬ್ಯಾಟ್ಸ್​ಮನ್​ಅನ್ನು ಆಡಿಸಲು ಸಾಧ್ಯವಾಗಲಿದೆ. ಹಾಗೇನಾದರೂ ಆದಲ್ಲಿ 5ನೇ ಕ್ರಮಾಂಕದಲ್ಲಿ ಮನೀಷ್ ಪಾಂಡೆ ಹಾಗೂ 6 ಮತ್ತು 7ನೇ ಕ್ರಮಾಂಕದ ಇಬ್ಬರು ಆಲ್ರೌಂಡರ್ ಸ್ಥಾನಕ್ಕಾಗಿ ಜಡೇಜಾ, ಶಿವಂ ದುಬೆ ಹಾಗೂ ವಾಷಿಂಗ್ಟನ್ ಸುಂದರ್ ನಡುವೆ ಪೈಪೋಟಿ ಏರ್ಪಡಲಿದೆ.

    ಸಂಭಾವ್ಯ ತಂಡ: ರೋಹಿತ್ ಶರ್ಮ, ಕೆಎಲ್ ರಾಹುಲ್ (ವಿ.ಕೀ), ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ಶಿವಂ ದುಬೆ, ವಾಷಿಂಗ್ಟನ್ ಸುಂದರ್/ರವೀಂದ್ರ ಜಡೇಜಾ, ಕುಲದೀಪ್ ಯಾದವ್/ಯಜುವೇಂದ್ರ ಚಾಹಲ್, ಮೊಹಮದ್ ಶಮಿ, ನವದೀಪ್ ಸೈನಿ, ಜಸ್​ಪ್ರೀತ್ ಬುಮ್ರಾ.

    ನ್ಯೂಜಿಲೆಂಡ್: ಪ್ರಮುಖ ಆಟಗಾರರು ಗಾಯಾಳುವಾಗಿರುವ ಕಾರಣ, ತಂಡದಲ್ಲಿರುವ ಹೊಸ ಆಟಗಾರರಿಗೆ ಸಿಕ್ಕ ದೊಡ್ಡ ಅವಕಾಶ ಇದು ಎಂದು ತಂಡದ ಅನುಭವಿ ಬ್ಯಾಟ್ಸ್​ಮನ್ ರಾಸ್ ಟೇಲರ್ ಹೇಳಿದ್ದಾರೆ. ಕೇನ್ ವಿಲಿಯಮ್ಸನ್ ಟಿ20 ತಂಡಕ್ಕೆ ಮರಳಿರುವ ಕಾರಣ ತಂಡದ ಅಗ್ರ ಹಾಗೂ ಮಧ್ಯಮ ಕ್ರಮಾಂಕ ಬಲಿಷ್ಠವಾಗಿರುವಂತೆ ಕಾಣುತ್ತಿದೆ. 6ನೇ ಕ್ರಮಾಂಕದಲ್ಲಿ ಕಾಲಿನ್ ಡಿ ಗ್ರಾಂಡ್​ಹೊಮ್ ಹಾಗೂ ಡೇರಿಲ್ ಮಿಚೆಲ್ ನಡುವೆ ಒಬ್ಬರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.

    ಸಂಭಾವ್ಯ ತಂಡ: ಮಾರ್ಟಿನ್ ಗುಪ್ಟಿಲ್, ಕಾಲಿನ್ ಮನ್ರೊ, ಟಿಮ್ ಸೀಫರ್ಟ್ (ವಿ.ಕೀ), ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಕಾಲಿನ್ ಡಿ ಗ್ರಾಂಡ್​ಹೊಮ್​ಡೇರಿಲ್ ಮಿಚೆಲ್, ಮಿಚೆಲ್ ಸ್ನಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ಸ್ಕಾಟ್ ಕಗಿಲಿನ್, ಹ್ಯಾಮಿಶ್ ಬೆನ್ನೆಟ್.

    ಪಿಚ್ ರಿಪೋರ್ಟ್

    ಈಡನ್ ಪಾರ್ಕ್ ಪಿಚ್ ವೇಗದ ಬೌಲಿಂಗ್ ಹಾಗೂ ಬೌನ್ಸ್​ಗೆ ನೆರವೀಯಲಿದ್ದು, ಬ್ಯಾಟ್ಸ್​ಮನ್ ಕೂಡ ಸುಲಭವಾಗಿ ದೊಡ್ಡ ಮೊತ್ತವನ್ನು ಇಲ್ಲಿ ಗಳಿಸಬಹುದು. ಎರಡೂ ತಂಡಗಳಲ್ಲೂ ಉತ್ತಮ ವೇಗದ ಬೌಲರ್​ಗಳು ಇರುವ ಕಾರಣ, ಬ್ಯಾಟ್ಸ್​ಮನ್​ಗಳು ಕೆಲ ಕಾಲ ಪರದಾಡಬಹುದು. ಇಂಗ್ಲೆಂಡ್-ನ್ಯೂಜಿಲೆಂಡ್ ವಿರುದ್ಧ ಈ ಮೈದಾನದಲ್ಲಿ ನಡೆದ ಕಳೆದ ಟಿ20 ಪಂದ್ಯ, ಅಲ್ಪ ಮೊತ್ತದ್ದಾಗಿದ್ದರೂ, ಸೂಪರ್ ಓವರ್ ನಡೆಯುವ ಮೂಲಕ ರೋಚಕತೆ ಉಳಿಸಿಕೊಂಡಿತ್ತು. 2ನೇ ಇನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡುವ ತಂಡಕ್ಕೆ ಜಯದ ಹೆಚ್ಚಿನ ಅವಕಾಶವಿದೆ.

    ಮಳೆ ಇಲ್ಲ, ಗಾಳಿಯ ಸಮಸ್ಯೆ

    ಭಾರತದ ಸ್ಥಳಗಳಿಗೆ ಹೋಲಿಸಿದರೆ, ನ್ಯೂಜಿಲೆಂಡ್​ನ ಬಹುತೇಕ ಮೈದಾನಗಳಲ್ಲಿ ಮಳೆಯೊಂದಿಗೆ ಗಾಳಿಯ ಸಮಸ್ಯೆ ಅಧಿಕವಾಗಿದೆ. ಆಕ್ಲೆಂಡ್ ಟಿ20ಗೆ ಮಳೆಯ ಸಾಧ್ಯತೆ ಕಡಿಮೆ ಇದ್ದರೂ, ಮೋಡಕವಿದ ವಾತಾವರಣ ಇರಲಿದೆ. ಗಾಳಿಯಿಂದಾಗಿ ಭಾರತದ ಬೌಲರ್​ಗಳು ಹಾಗೂ ಬ್ಯಾಟ್ಸ್​ಮನ್​ಗಳು ಸಮಸ್ಯೆ ಎದುರಿಸಲಿದ್ದಾರೆ.

    ಸೇಡಿನ ಉದ್ದೇಶವಿಲ್ಲ

    ಏಕದಿನ ವಿಶ್ವಕಪ್​ನ ಸೆಮಿಫೈನಲ್​ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 18 ರನ್​ಗಳಿಂದ ಸೋಲು ಕಂಡು ಆಘಾತಕಾರಿ ನಿರ್ಗಮನ ಕಂಡಿತ್ತು. ಈ ಸರಣಿಯ ವೇಳೆ ಸೇಡು ತೀರಿಸಿಕೊಳ್ಳುವ ಉದ್ದೇಶದೊಂದಿಗೆ ಭಾರತ ಕಣಕ್ಕಿಳಿಯಲಿದೆಯೇ ಎನ್ನುವ ಮಾಧ್ಯಮದ ಪ್ರಶ್ನೆಗೆ ಕೊಹ್ಲಿ ನೀಡಿದ ಉತ್ತರ ಮೆಚ್ಚುಗೆಗೆ ಪಾತ್ರವಾಯಿತು. ‘ನಾವು ಸೇಡು ತೀರಿಸಿಕೊಳ್ಳಲು ಯೋಚಿಸಿದರೂ, ನ್ಯೂಜಿಲೆಂಡ್ ತಂಡದ ಆಟಗಾರರು ನಮಗೆ ಸೇಡು ತೀರಿಸಿಕೊಳ್ಳುವ ವಲಯದಲ್ಲಿ ಕಾಣಿಸುವುದಿಲ್ಲ. ಈ ಆಟಗಾರರೊಂದಿಗೆ ನಾವು ಉತ್ತಮ ಹೊಂದಾಣಿಕೆ ಹೊಂದಿದ್ದೇವೆ. ಆದರೆ, ಮೈದಾನದಲ್ಲಿ ಸ್ಮರ್ಧಾತ್ಮಕವಾಗಿ ಇರುವುದನ್ನು ಬಯಸುತ್ತೇವೆ. ಇಂಗ್ಲೆಂಡ್​ನಲ್ಲೂ ನಾನು ಈ ಹಿಂದೆ ಇದೇ ಮಾತನ್ನು ಹೇಳಿದ್ದೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ನ್ಯೂಜಿಲೆಂಡ್ ತಂಡವೇ ಇತರ ತಂಡಗಳಿಗೆ ಮಾದರಿ’ ಎಂದರು.

    ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಈಡನ್ ಪಾರ್ಕ್ ಮೈದಾನದಲ್ಲಿ ಒಮ್ಮೆ ಎದುರಾಗಿದ್ದು, ಭಾರತ 7 ವಿಕೆಟ್​ಗಳಿಂದ ಜಯ ಸಾಧಿಸಿದೆ. 2019ರ ಫೆ.8 ರಂದು ನಡೆದಿದ್ದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 8 ವಿಕೆಟ್​ಗೆ 158 ರನ್ ಬಾರಿಸಿದ್ದರೆ, ರೋಹಿತ್ ಶರ್ಮ ಅರ್ಧಶತಕದ ನೆರವಿನಿಂದ ಭಾರತ 18.5 ಓವರ್​ಗಳಲ್ಲಿ 3 ವಿಕೆಟ್​ಗೆ 162 ರನ್ ಬಾರಿಸಿ ಗೆಲುವು ಕಂಡಿತ್ತು.

    ನಮ್ಮ ಗಮನವಿರುವುದು ವಿಶ್ವಕಪ್​ನ ಸಿದ್ಧತೆಯ ಮೇಲೆ. ಆಸ್ಟ್ರೇಲಿಯಾದಲ್ಲಿ ವಿಶ್ವಕಪ್ ಆಡುವ ವೇಳೆ ಕೆಲವೊಂದು ಭಿನ್ನ ಸಂಯೋಜನೆಗಳು ಬೇಕಾಗುತ್ತವೆ. ಭಾರತ ವಿರುದ್ಧದ ಸರಣಿ ನ್ಯೂಜಿಲೆಂಡ್ ತಂಡದ ಮೀಸಲು ಬಲದ ಶಕ್ತಿಯನ್ನು ಪರೀಕ್ಷೆ ಮಾಡುವುದು ಖಚಿತ.

    | ರಾಸ್ ಟೇಲರ್ ಕಿವೀಸ್ ಆಟಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts