More

    ಬೆಕ್ಕು ಅಡ್ಡ ಬಂದರೆ ಕೆಲ ಹೊತ್ತು ನಿಲ್ಲುತ್ತೇವೆ, ಮೆಟ್ರೋಗೇ ಅಡ್ಡ ಬಂದರೆ; ನಾಲ್ಕು ದಿನಗಳಿಂದ ಅಲ್ಲೆ ಇದ್ದ ಬೆಕ್ಕಿಗೆ ಏನಾಯಿತು?

    ತಿರುವನಂತಪುರ: ಎಲ್ಲಿಗಾದರೂ ಹೊರಟಾಗ ಬೆಕ್ಕು ಅಡ್ಡ ಬಂದರೆ ಸ್ವಲ್ಪ ಹೊತ್ತು ನಿಂತು ಹೋಗುವುದು ವಾಡಿಕೆ. ಆದರೆ ತಿರುವನಂತಪುರದಲ್ಲಿ ಮೆಟ್ರೋಗೆ ಬೆಕ್ಕು ಅಡ್ಡ ಬಂದಾಗ ಏನು ಮಾಡಬೇಕು ಹೇಳಿ?

    ಇಲ್ಲಿನ ಮೆಟ್ರೋ ನಿಲ್ದಾಣದ 25 ಮೀಟರ್​ ಎತ್ತರದ ಕಂಬದ ಮೇಲೆ ಭಾನುವಾರ ಬೆಕ್ಕೊಂದು ನಿಂತಿದ್ದು ಕೆಲ ಕಾಲ ಆತಂಕ ಸೃಷ್ಟಿಸಿತ್ತು. ಆಗ ಅಗ್ನಿ ಶಾಮಕ ದಳ ಮತ್ತು ಬೆಕ್ಕಿನ ನಡುವೆ ಕಣ್ಣಾಮುಚ್ಚಾಲೆ ಆಟ ನಡೆದಿತ್ತು.

    ಆತಂಕವಿದ್ದದ್ದು ಕಂಬದ ಮೇಲೆ ನಿಂತಿದ್ದ ಬೆಕ್ಕು ಆಕಸ್ಮಾತ್​ ಮೆಟ್ರೋ ಹಳಿಗೆ ಬಂದರೆ ಎಂದು. ಹೈ ಟೆನ್ಷನ್​ ವಿದ್ಯುತ್​ ಪ್ರವಹಿಸುವ ಹಳಿ ಮೇಲೆ ಬೆಕ್ಕು ಬಂದರೆ ಗತಿ ಏನು? ಅದಕ್ಕಾಗಿ ಅಲ್ಲಿನ ಮೆಟ್ರೋ ಸಿಬ್ಬಂದಿ ಕೆಲ ಹೊತ್ತು ರೈಲು ಸೇವೆ ನಿಲ್ಲಿಸಲು ತಯಾರಾಗಿದ್ದರು. ಆದರೆ ಬೆಕ್ಕಿನ ಅದೃಷ್ಟ ಚೆನ್ನಾಗಿತ್ತು, ಹಾಗೆ ಆಗಲಿಲ್ಲ. ಅಷ್ಟರೊಳಗೆ ಅಗ್ನಿಶಾಮಕ ದಳದವರು ಬೆಕ್ಕನ್ನು ರಕ್ಷಿಸಿದ್ದಾರೆ.

    ಬೆಕ್ಕಿನ ಮಿಯಾಂವ್​ ಸದ್ದು ಕೇಳಿಸುತ್ತಿದ್ದ ಆ ಸ್ಥಳದಲ್ಲಿ ಕೆಲ ದಿನಗಳಿಂದ ಬೆಕ್ಕು ಇರುವುದನ್ನು ಸ್ಥಳಿಯರು ಗಮನಿಸಿದ್ದರು. ಅದರ ರಕ್ಷಣೆಗೆ ಕೆಲವರು ಮುಂದಾದರೂ ಕೂಡ ಸಾಧ್ಯವಾಗಿರಲಿಲ್ಲ. ಅಲ್ಲಿನ ಕಂಬದ ಮೂಲೆಗೆ ಹೋಗಿ ತಪ್ಪಿಸಿಕೊಳ್ಳುತ್ತಿತ್ತು.

    ಅಗ್ನಿ ಶಾಮಕ ದಳದವರು ದೊಡ್ಡ ಏಣಿಗಳನ್ನು ತಂದು ಕಾರ್ಯಾಚರಣೆ ಆರಂಭಿಸಿದರು. ಆದರೆ ಬೆಕ್ಕು ಇದ್ದಕ್ಕಿದ್ದಂತೆ ಮಾಯವಾಗಿತ್ತು. ಅಲ್ಲಿನ ಇಬ್ಬರು ಅಧಿಕಾರಿಗಳು ಮೊಣಕಾಲುಗಳ ಮೇಲೆ ಕುಳಿತು ಎರಡು ಗಂಟೆಗಳ ಕಾಲ ಎತ್ತರದ ಕಂಬದ ಮೇಲೆ ಹೋಗುವಂತೆ ಮಾಡಿದರು.

    ಕೊನೆಗೆ 2 ಗಂಟೆ 45 ನಿಮಿಷಗಳ ಕಾರ್ಯಾಚರಣೆ ನಡೆಸಿ ಬೆಕ್ಕು ಕಂಬದ ಮೇಲಿಂದ ನೆಗೆಯುವಂತೆ ಮಾಡಲಾಯಿತು. ಅದಕ್ಕಾಗಿ ಸುತ್ತ ಬಲೆಯನ್ನು ಹರಡಲಾಗಿತ್ತು. ಬೆಕ್ಕು ನೆಗೆದಾಗ ನೆಲಕ್ಕೆ ಬೀಳದಿರಲಿ ಎಂದು ಈ ವ್ಯವಸ್ಥೆ. ಹಾಗಾಗಿ ಬೆಕ್ಕಿಗೆ ಹಾನಿಯಾಗಿಲ್ಲ.

    ತಕ್ಷಣ ಆ ಬೆಕ್ಕನ್ನು ಹಿಡಿದು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ನೀಡಲಾಯಿತು. ಪಶು ವೈದ್ಯರು ಇದು ನಾಲ್ಕು ದಿನಗಳಿಂದ ಉಪವಾಸವಿದೆ ಎಂದು ಮಾಹಿತಿ ನೀಡಿದ್ದಾರೆ. ಬೆಕ್ಕಿಗೆ ಹಾಲನ್ನು ನೀಡಲಾಗಿದೆ.

    “ಎಲ್ಲ ಜೀವವೂ ಪ್ರಾಮುಖ್ಯವೇ ನಮಗೆ. ನಾವು ನಮ್ಮ ಸಿಬ್ಬಂದಿಗೆ ಎಲ್ಲ ಸಲಕರಣೆಗಳನ್ನು ಕೊಟ್ಟಿದ್ದು, ವಿದ್ಯುತ್​ ಬಗ್ಗೆ ಎಚ್ಚರಿಕೆ ವಹಿಸಿದ್ದೆವು. ಅಗ್ನಿ ಶಾಮಕ ದಳದ ಸಿಬ್ಬಂದಿ, ಮೆಟ್ರೋದ ಐವರು ಅಧಿಕಾರಿಗಳು ಮತ್ತು ಪ್ರಾಣಿ ಪ್ರಿಯರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು” ಎಂದು ಕೇರಳ ಮೆಟ್ರೋ ಟ್ವೀಟ್​ ಮಾಡಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts