ಗೋಪಾಲಕೃಷ್ಣ ಪಾದೂರು
ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನೆಗೆ ಉಡುಪಿ ಜಿಲ್ಲೆಯಲ್ಲಿ ನೋಂದಾಯಿಸಿಕೊಂಡಿರುವ ರೈತರಲ್ಲಿ ಆರ್ಧದಷ್ಟು ಫಲಾನುಭವಿಗಳಿಗೆ ಮಾತ್ರ ಹಣ ಪಾವತಿಯಾಗಿದೆ. ಜಿಲ್ಲೆಯಲ್ಲಿ 1,31,829 ರೈತರು ನೋಂದಣಿ ಮಾಡಿಕೊಂಡಿದ್ದು, 67 ಸಾವಿರ ರೈತರ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿದೆ.
ಮೊದಲ ಕಂತಿನಲ್ಲಿ 65,070 ರೈತರು ಯೋಜನೆ ಲಾಭ ಪಡೆದಿದ್ದಾರೆ. 2ನೇ ಕಂತಿನಲ್ಲಿ 2,574 ಮಂದಿಗೆ ಹಣ ಪಾವತಿ ಮಾಡಲಾಗಿದೆ. ಜಿಲ್ಲೆಯಲ್ಲಿ ಕುಂದಾಪುರದಲ್ಲಿ ಅತೀ ಹೆಚ್ಚು 38,375 ಮಂದಿ ನೋಂದಣಿ ಮಾಡಿದ್ದು, ಉಳಿದಂತೆ ಉಡುಪಿ ತಾಲೂಕಿನಲ್ಲಿ 12,708, ಕಾಪು ತಾಲೂಕಿನಲ್ಲಿ 13,349, ಕಾರ್ಕಳದಲ್ಲಿ 22770, ಬ್ರಹ್ಮಾವರದಲ್ಲಿ 19729, ಬೈಂದೂರು ತಾಲೂಕಿನಲ್ಲಿ 17307, ಹೆಬ್ರಿಯಲ್ಲಿ 7591 ಮಂದಿ ಆರ್ಜಿ ಸಲ್ಲಿಸಿದ್ದಾರೆ. ಇವುಗಳಲ್ಲಿ 125752 ಅರ್ಜಿಗಳು ಸ್ವೀಕೃತವಾಗಿವೆ. ಭೂಮಿ ತಂತ್ರಾಂಶದಲ್ಲಿ ಪರಿಶೀಲನೆ ನಡೆಸಿದಾಗ 378 ಸಂಶಯಾತ್ಮಕ ಪ್ರಕರಣ ಕಂಡುಬಂದಿದ್ದು, ವಿವಿಧ ಕಾರಣಗಳಿಗಾಗಿ ಒಟ್ಟು 2,355 ಆರ್ಜಿಗಳನ್ನು ಪಾವತಿ ಬಾಕಿಗೆ ತಡೆಹಿಡಿಯಲಾಗಿದೆ. ಉಳಿದ ಆರ್ಜಿಗಳು ಪರಿಶೀಲನೆಯ ಹಂತದಲ್ಲಿವೆ.
ಸ್ಥಿತಿಗತಿ ಸ್ವಯಂ ಪರಿಶೀಲನೆ: ಪಿಎಂ ಕಿಸಾನ್ ಯೋಜನೆಯಲ್ಲಿ ನೋಂದಾಯಿಸಿಕೊಂಡಿರುವ ರೈತರು ತಮ್ಮ ಆರ್ಜಿಯ ಸ್ಥಿತಿಗತಿಯನ್ನು ಸ್ವಯಂ ಪರಿಶೀಲಿಸಿಕೊಳ್ಳಬಹುದು.fruitspmk.karnataka.gov.in ಅಂತರ್ಜಾಲ ತಾಣದಲ್ಲಿ ಫಲಾನುಭವಿಯು ಆಧಾರ್ ಸಂಖ್ಯೆ ಅಥವಾ ಪಿಎಂಕೆಐಡಿ ಹಾಕಿದರೆ ಅರ್ಜಿ ಯಾವ ಹಂತದಲ್ಲಿದೆ ಎಂಬುದು ತಿಳಿಯುತ್ತದೆ. ಅರ್ಜಿ ಸ್ವೀಕೃತವಾಗಿದ್ದರೆ ಆಧಾರ್ ಸಂಖ್ಯೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತದೆ.
ಹಿಡುವಳಿದಾರರ ಸಂಖ್ಯೆ ಕುಸಿತ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಭೂಪರಿವರ್ತನೆ ಮತ್ತು ಕೃಷಿಯಿಂದ ಯುವಜನತೆ ದೂರ ಸರಿಯುತ್ತಿರುವುದರಿಂದ ಕೃಷಿ ಹಿಡುವಳಿದಾರರ ಸಂಖ್ಯೆ ನಿರಂತರ ಕುಸಿಯುತ್ತಿದೆ. 2010-11ರ ಕೃಷಿ ಗಣತಿಯಂತೆ ಜಿಲ್ಲೆಯಲ್ಲಿ 450 ಮಂದಿಯಿದ್ದ ದೊಡ್ಡ ಹಿಡುವಳಿದಾರರ ಸಂಖ್ಯೆ 2016-17ರಲ್ಲಿ 326ಕ್ಕೆ ಕುಸಿದಿದೆ. ಸಣ್ಣ ಹಿಡುವಳಿದಾರರ ಸಂಖ್ಯೆ 25,316ರಿಂದ 23,362ಕ್ಕೆ, ಅರೆ ಮಧ್ಯಮ ಹಿಡುವಳಿದಾರರ ಸಂಖ್ಯೆ 11,856ರಿಂದ 10,996ಕ್ಕೆ, ಮಧ್ಯಮ ಹಿಡುವಳಿದಾರರ ಸಂಖ್ಯೆ 4,113 ರಿಂದ 3541ಕ್ಕೆ ಇಳಿದಿದೆ.
ದ.ಕ.ಜಿಲ್ಲೆಯಲ್ಲಿ 1.33 ಲಕ್ಷ ಅರ್ಜಿ: ದ.ಕ.ಜಿಲ್ಲೆಯಲ್ಲಿ ಪಿಎಂ ಕಿಸಾನ್ ಯೋಜನೆಗೆ 1,33,530 ಅರ್ಜಿ ಸಲ್ಲಿಕೆಯಾಗಿದ್ದು, 90,030 ಫಲಾನುಭವಿಗಳಿಗೆ ಹಣ ಪಾವತಿ ಆಗಿದೆ. ಪುತ್ತೂರು ತಾಲೂಕಿನಲ್ಲಿ 17,359, ಕಡಬದಲ್ಲಿ 16,981, ಬಂಟ್ವಾಳದಲ್ಲಿ 29,761, ಬೆಳ್ತಂಗಡಿಯಲ್ಲಿ 31,819, ಮಂಗಳೂರಿನಲ್ಲಿ 14,566, ಮೂಡುಬಿದಿರೆಯಲ್ಲಿ 7,791, ಸುಳ್ಯದಲ್ಲಿ 15,243 ಮಂದಿ ನೋಂದಾಯಿಸಿಕೊಂಡಿದ್ದಾರೆ. ಇವುಗಳಲ್ಲಿ 1,27,231 ಮಂದಿ ಅರ್ಜಿ ಸ್ವೀಕೃತವಾಗಿದೆ.
ರೈತರು ಗ್ರಾಮ ಲೆಕ್ಕಾಧಿಕಾರಿ, ಬಾಪೂಜಿ ಕೇಂದ್ರ, ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಕೃಷಿ ಇಲಾಖೆ ಆನ್ಲೈನ್ನಲ್ಲಿ ದಾಖಲಾದ ಅರ್ಜಿಗಳನ್ನು ಪರಿಶೀಲಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡುತ್ತದೆ. ಕೇಂದ್ರದಿಂದ ನೇರವಾಗಿ ಫಲಾನುಭವಿ ರೈತರ ಖಾತೆಗೆ ಹಣ ಜಮೆಯಾಗುತ್ತದೆ. ಮುಖ್ಯವಾಗಿ ಪಹಣಿಪತ್ರದಲ್ಲಿ ಕೃಷಿ ಭೂಮಿ ಎಂದು ದಾಖಲಾಗಿರಬೇಕು. ಇಲ್ಲದಿದ್ದರೆ ಅರ್ಜಿ ವಜಾ.
– ಕೆಂಪೇಗೌಡ ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಉಡುಪಿ