ಹಿರೇಬಾಗೇವಾಡಿ: ಕಿಸಾನ್ ಸಮ್ಮಾನ್‌ಗಾಗಿ ಕಚೇರಿಗಳಲ್ಲಿ ನೂಕುನುಗ್ಗಲು!

ಹಿರೇಬಾಗೇವಾಡಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರೈತರ ಖಾತೆಗಳಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಆರು ಸಾವಿರ ರೂಪಾಯಿ ಜಮಾ ಮಾಡುವುದಾಗಿ ಘೋಷಿಸುತ್ತಲೇ ರೈತರು ತಮ್ಮ ಹೊಲಗಳ ದಾಖಲೆಗಳನ್ನು ಪಡೆಯಲು ಗ್ರಾಮ ಲೆಕ್ಕಾಧಿಕಾರಿ (ತಲಾಠಿ) ಗಳ ಕಾರ್ಯಾಲಯಕ್ಕೆ ಮುಗಿಬಿದ್ದಿದ್ದಾರೆ.

ಐದು ಎಕರೆಗಿಂತ ಕಡಿಮೆ ಭೂಮಿ ಇರುವ ಸಣ್ಣ ಹಿಡುವಳಿದಾರ ರೈತರಿಗೆ ಕೇಂದ್ರ ಸರ್ಕಾರ ಕೊಡ ಮಾಡಿದ ಆರು ಸಾವಿರ ರೂಪಾಯಿ ಪಡೆಯಲು ಸುತ್ತಲಿನ ಗ್ರಾಮಗಳ ರೈತರು ತಲಾಠಿಗಳಿಂದ ತಮ್ಮ ಹೊಲದ ಖಾತೆ ಉತಾರಾ ಪಡೆಯಲು ಕಾರ್ಯಾಲಯಕ್ಕೆ ಬಂದಿದ್ದು, ರೈತರ ದಟ್ಟಣೆ ಹೆಚ್ಚಿದೆ. ಹೀಗಾಗಿ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಈಗ ಬಿಡುವಿಲ್ಲದ ಕೆಲಸ ಇದೆ.

ಅಲ್ಲಿಂದ ಪಡೆದ ಮಾಹಿತಿಯನ್ನು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ, ನೆಮ್ಮದಿ ಕೇಂದ್ರ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಆನ್‌ಲೈಲ್ ಮೂಲಕ ಭರ್ತಿ ಮಾಡಲಾಗುತ್ತದೆ. ಮಾಹಿತಿ ನೋಂದಣಿಗಾಗಿ ಅವಧಿ ನಿಗದಿ ಇಲ್ಲದಿದ್ದರೂ ರೈತರು ನಾಮುಂದು ತಾಮುಂದು ಎಂದು ಮಾಹಿತಿಗಾಗಿ ಮುಗಿ ಬಿದ್ದಿದ್ದಾರೆ. ಇದಕ್ಕಾಗಿ ರೈತರು ಬೆಳಗಾಗುತ್ತಲೇ ತಲಾಠಿ ಕಾರ್ಯಾಲಯದ ಮುಂದೆ ಸಿಬ್ಬಂದಿಯ ದಾರಿ ಕಾಯುತ್ತಿದ್ದಾರೆ.