ಕಿರಣ್​ ರಿಜ್ಜು ನೀಡಿದ್ದ ಫಿಟ್​ನೆಸ್ ಚಾಲೆಂಜ್​ ಸ್ವೀಕರಿಸಿದ ಸಲ್ಲು: ಸೈಕ್ಲಿಂಗ್​, ವರ್ಕೌಟ್​ ವಿಡಿಯೋ ಬಿಡುಗಡೆ

ನವದೆಹಲಿ: ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್​ ಸಿಂಗ್​ ರಾಥೋಡ್​ ಅವರು ಪ್ರಾರಂಭಿಸಿದ, ‘ಹಮ್​ ಫಿಟ್​ ತೋ ಇಂಡಿಯಾ ಫಿಟ್’​ ಅಭಿಯಾನ ಈಗಾಗಲೇ ತುಂಬ ಪ್ರಸಿದ್ಧವಾಗಿದೆ. ವಿರಾಟ್​ ಕೊಹ್ಲಿ, ಪ್ರಧಾನಿ ಮೋದಿ ಮತ್ತಿತರ ಸಿಲಿಬ್ರಿಟಿಗಳು ಈ ಸವಾಲು ಸ್ವೀಕರಿಸಿ ತಮ್ಮ ಫಿಟ್​ನೆಸ್​ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್​ ಮಾಡಿದ್ದರು.

ಗೃಹ ಖಾತೆ ರಾಜ್ಯ ಸಚಿವ ಕಿರಣ್​ ರಿಜ್ಜು ಈ ಫಿಟ್​ನೆಸ್ ಚಾಲೆಂಜ್​ನ್ನು ನಟ ಸಲ್ಮಾನ್​ ಖಾನ್​ಗೆ ನೀಡಿದ್ದರು. ಆದರೆ ಆಗ ಸಮಯ ಇಲ್ಲದೆ ಇರುವುದರಿಂದ ಸಲ್ಲು ಶನಿವಾರ ಆ ಸವಾಲನ್ನು ಸ್ವೀಕರಿಸಿ ತಮ್ಮ ಫಿಟ್​ನೆಸ್​ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿದ್ದಾರೆ.

ಸಲ್ಲು ತಮ್ಮ ಸವಾಲನ್ನು ಸ್ವೀಕರಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ಕಿರಣ್​ ರಿಜ್ಜು, ಸಲ್ಮಾನ್​ ಖಾನ್​ ಭಾಯ್​, ನಿಮ್ಮ ಫಿಟ್​ ನೆಸ್​ ವಿಡಿಯೋ ಎಲ್ಲರಿಗೂ ಇಷ್ಟವಾಗಲಿದೆ. ನನ್ನ ಚಾಲೆಂಜ್​ ಸ್ವೀಕರಿಸಿದ್ದಕ್ಕೆ ಧನ್ಯವಾದಗಳು ಎಂದು ಟ್ವೀಟ್​ ಮಾಡಿದ್ದಾರೆ.

ಸಲ್ಮಾನ್​ ಖಾನ್​ ತಮ್ಮ ಸೈಕ್ಲಿಂಗ್​ ಹಾಗೂ ವರ್ಕೌಟ್​ ಮಾಡುತ್ತಿರುವ 25 ಸೆಕೆಂಡ್​ಗಳ ವಿಡಿಯೋವನ್ನು ಅಪ್​ಲೋಡ್​ ಮಾಡಿದ್ದಾರೆ. ರಾಜವರ್ಧನ್​ ಸಿಂಗ್​ ಪ್ರಾರಂಭಿಸಿದ ‘ಹಮ್​ ಫಿಟ್​ ತೋ ಇಂಡಿಯಾ ಫಿಟ್​’ ಒಂದು ಉತ್ತಮ ಅಭಿಯಾನ. ನನಗೆ ಕಿರಣ್​ ರಿಜ್ಜು ಅವರು ಈ ಹಾಕಿದ ಸವಾಲು ಸ್ವೀಕರಿಸಿದ್ದೇನೆ ಎಂದಿದ್ದಾರೆ.