ಶಬರಿಮಲೆಯ ಮೇಲೆ ಏಕೆ ವಕ್ರದೃಷ್ಟಿ?

| ಡಾ. ಎಸ್​. ಆರ್​. ಲೀಲಾ

ಕಳೆದ ಸೆಪ್ಟೆಂಬರ್ ತಿಂಗಳ ಕಡೆಯವಾರ ದೇಶದಲ್ಲೆಲ್ಲ ಸುಪ್ರೀಂಕೋರ್ಟ್​ನದ್ದೇ ಸದ್ದು. ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಎಷ್ಟೋ ವಿವಾದಗಳು, ಮೊಕದ್ದಮೆಗಳು ಮುಡಿವು ಕಂಡವು. ಕೆಲವಂತೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದವು. ಸಲಿಂಗಕಾಮವನ್ನು ಅಪರಾಧ ಕಾಯ್ದೆಯಿಂದ ಬೇರ್ಪಡಿಸಿ ಅದಕ್ಕೊಂದು ಕಾನೂನಿನ ಮಾನ್ಯತೆ ನೀಡಿದ್ದನ್ನು ಆ ಸಮುದಾಯದವರು ಹಬ್ಬದಂತೆ ಆಚರಿಸಿ ಸಂಭ್ರಮಿಸಿದರು. ಉಳಿದ ಕೆಲವು ಮಹತ್ವದ ತೀರ್ಪಗಳಿಗೆ ಇಂತಹುದೆ ಸಂಭ್ರಮಾಚರಣೆಯ ಅವಕಾಶವಾಗಲಿಲ್ಲ. ರಾಮಜನ್ಮಭೂಮಿ, ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಾನುಮತಿ, ನಕ್ಸಲ್ ನಗರಬಂಟರ ಗೃಹಬಂಧನ ಮುಂತಾದವುಗಳ ಬಗ್ಗೆ ಸವೋಚ್ಚ ನ್ಯಾಯಾಲಯ ತನ್ನ ಅಭಿಪ್ರಾಯವನ್ನು ದೇಶದ ಮುಂದಿರಿಸಿದೆ.

ಹಾಗಂತ ಕೋರ್ಟ್ ತೀರ್ಪು ಎಲ್ಲರಿಗೂ ಒಪ್ಪಿಗೆ ಆಗಬೇಕೆಂದಿಲ್ಲ. ಈ ಹಿನ್ನೆಲೆಯಲ್ಲಿ ಒಂದು ಮಹತ್ವದ ತೀರ್ಪಿನ ಕುರಿತು ಇಲ್ಲಿ ಪರಿಶೀಲಿಸಬಹುದು. ಪ್ರತಿಯೊಂದು ಪ್ರಾಚೀನ ರೂಢಿ ಸಂಪ್ರದಾಯದ ಹಿಂದೆ ಸಾಮಾಜಿಕ, ಸಾಂಸ್ಕೃತಿಕ, ಐತಿಹಾಸಿಕ ಆಯಾಮಗಳಿರುತ್ತದೆ. ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶದ ಬಗ್ಗೆ “Right to Pray’ ಎಲ್ಲರಿಗೂ ಪ್ರಾರ್ಥಿಸುವ ಹಕ್ಕಿದೆ, ಸ್ತ್ರೀಪುರುಷರೆಂಬ ಭೇದ ಸಲ್ಲದು ಎಂಬ ತೀರ್ಪು ಹೊರಬಿದ್ದಿದೆ.  Right to Food, Right to Education ರೀತಿಯಲ್ಲೇ Right to Pray ಕೂಡ ಒಂದು ಎಂಬ ತೀರಾ ಸರಳ ರೀತಿಯ ತರ್ಕ ಇಲ್ಲಿ ಕಾಣುತ್ತದೆ.

ಶಬರಿಮಲೆಯಲ್ಲಿರುವ ದೇವತೆ ಅಯ್ಯಪ್ಪ. ಕುಮಾರ, ನೈಷ್ಠಿಕಬ್ರಹ್ಮಚಾರಿ. ಪ್ರತಿಯೊಂದು ದೇವಾಲಯಕ್ಕೂ ಒಂದು ಸ್ಥಳ ಮಹಾತ್ಮೆ ಇರುತ್ತದೆ. ದೇವತೆಗಳ ರೂಪ, ಸ್ವರೂಪ, ಪೂಜಾವಿಧಾನಗಳು ಹಾಗೂ ವಿಧಿನಿಷೇಧಗಳಿರುತ್ತವೆ. ಪುರಾಣಸಾಹಿತ್ಯದಲ್ಲಿ, ಆಗಮಶಾಸ್ತ್ರಗಳಲ್ಲಿ, ತಂತ್ರಶಾಸ್ತ್ರಗಳಲ್ಲಿ ಆಯಾ ದೇವತೆಗಳಿಗೆ ಸಂಬಂಧಪಟ್ಟ ವಿವರಗಳು ಕಂಡುಬರುತ್ತವೆ. ಈ ಮೂಲಗ್ರಂಥಗಳನ್ನು ಆ ದೇವಾಲಯದ ಸಂವಿಧಾನ ಎನ್ನಬಹುದು. ಶಬರಿಮಲೆಗೆ ‘ಭೂತನಾಥ ಉಪಖ್ಯಾನ’ ಎಂಬ ಧಾರ್ವಿುಕ ಕೃತಿಯೆ ಸಂವಿಧಾನ.

ಈ ದೇಶಕ್ಕೆ ಒಂದು ಸಂವಿಧಾನ ಇದೆ. 1950ರಲ್ಲಿ ಅದನ್ನು ಅಳವಡಿಸಿದ್ದು, 68 ವರ್ಷಗಳಷ್ಟು ಹಳೆಯದು. ದೇವಾಲಯಗಳಲ್ಲಿ ನೂರಾರು, ಸಾವಿರಾರು ವರ್ಷಗಳಿಂದ ಚಾಲ್ತಿಯಲ್ಲಿರುವ ಆಯಾ ಸಂವಿಧಾನವನ್ನನುಸರಿಸಿಯೆ ಎಲ್ಲ ಕ್ರಿಯಾಕಲಾಪಗಳು ನಡೆಯುತ್ತವೆ. ವೈದಿಕ ದೇವಾಲಯಗಳು, ತಾಂತ್ರಿಕ ದೇವಾಲಯಗಳು ಅನೇಕ ವಿವರಗಳಲ್ಲಿ ಭಿನ್ನವಾಗಿರುತ್ತವೆ. ಅಯ್ಯಪ್ಪ ದೇವಾಲಯ ತಾಂತ್ರಿಕ ಪದ್ಧತಿಯನ್ನನುಸರಿಸುವ ದೇವಸ್ಥಾನ. ದೇವತೆಗಳಿಗಿರುವಂತೆಯೇ ಪೂಜಿಸುವ ಅರ್ಚಕರಿಗೆ, ಕಲಾಪಗಳಲ್ಲಿ ಭಾಗವಹಿಸುವ ನೃತ್ಯ, ಗೀತ, ವಾದ್ಯಗಳ ಸೇವೆ ಮಾಡುವ ಕಲಾವಿದರಿಗೆ, ವೇದ ಪಾರಾಯಣ, ಪುರಾಣವಾಚನ, ವ್ಯಾಖ್ಯಾನ ಮಾಡುವವರಿಗೆ ನಿಯಮಗಳಿರುತ್ತವೆ. ಇವುಗಳನ್ನು ಯಾರು ನಡೆಸಿಕೊಡಬೇಕು, ಹೇಗೆ ನಡೆಸಬೇಕು, ಎಷ್ಟು ಸಮಯ ತೆಗೆದುಕೊಳ್ಳಬೇಕು ಇತ್ಯಾದಿ ಕಟ್ಟುಪಾಡುಗಳು ಹೆಜ್ಜೆಹೆಜ್ಜೆಗೂ ಇರುತ್ತವೆ. ಇದೇ ಮಾದರಿಯಲ್ಲಿ ದೇವಾಲಯಕ್ಕೆ ಬರುವ ಭಕ್ತರಿಗೂ ವಿಧಿನಿಷೇಧಗಳಿರುತ್ತವೆ.

ಹಿಂದೂಧರ್ಮದಲ್ಲಿರುವ ದೊಡ್ಡ ದೇವತಾಗಣದಲ್ಲಿ ಅಯ್ಯಪ್ಪ ಅಥವಾ ಭಗವಾನ್ ಕುಮಾರನದು ಬಹುಪ್ರಾಚೀನವಾದ ದೇವತಾ ಸ್ವರೂಪ.

ನಮ್ಮ ದೇಶದ ಪ್ರಾಚೀನ ಪ್ರಮುಖ ನಾಟಕಕಾರರಲ್ಲಿ ಕಾಳಿದಾಸನ ಹೆಸರು ಮೊದಲು ಕಾಣುತ್ತದೆ. ಈ ಮಹಾಕವಿಯ ಮೂರು ನಾಟಕಗಳಲ್ಲಿ ‘ವಿಕ್ರಮೋರ್ವಶೀಯಂ’ ಎಂಬುದೂ ಒಂದು. ಪ್ರತಿಷ್ಠಾನದ (ಇಂದಿನ ಪ್ರಯಾಗ, ಅಲಹಾಬಾದ್) ಮಹಾಪರಾಕ್ರಮಿಯಾದ ಸ್ಪುರದ್ರೂಪಿ ರಾಜ ಪುರೂರವ ಮತ್ತು ಸ್ವರ್ಗಸುಂದರಿ ಊರ್ವಶಿಯರ ಪ್ರಣಯಕಥೆ ಇದರ ವಸ್ತು. ಇವರಿಬ್ಬರೂ ಆಕಸ್ಮಿಕ ಭೇಟಿಯಾಗಿ, ಗಾಂಧರ್ವ ವಿಧಿಯಿಂದ ಮದುವೆ ನಡೆದು ತಮಗೆ ಅರ್ಹವೆನಿಸಿದ ಗಂಧಮಾದನ ಪರ್ವತಪ್ರದೇಶದಲ್ಲಿ ವಿಹಾರಕ್ಕೆ ತೆರಳುತ್ತಾರೆ. ಅಲ್ಲಿ ಯಾವುದೋ ಕಾರಣಕ್ಕೆ ಪತಿಯ ಮೇಲೆ ಕೋಪಗೊಂಡ ಊರ್ವಶಿ ಅವನಿಗೆ ಬುದ್ಧಿಕಲಿಸಲೆಂದು ಬಿರಬಿರನೆ ನಡೆದು ಅವನ ಕಣ್ಣೋಟದಿಂದ ದೂರವಾಗಿ ಬಿಡುತ್ತಾಳೆ. ಅಪ್ಸರೆಯ ಪ್ರೇಮಪಾಶದಲ್ಲಿ ಬಂದಿಯಾಗಿದ್ದ ಪುರೂರವ ಅವಳನ್ನು ಕಾಣದೆ ಸಿಕ್ಕ ಸಿಕ್ಕ ಪಶುಪಕ್ಷಿ ಪ್ರಾಣಿಗಳನ್ನೆಲ್ಲ ‘ನನ್ನ ಮನದನ್ನೆಯನ್ನು ಕಂಡಿರೆ’ ಎಂದು ಕೇಳುತ್ತಾನೆ. ಎಲ್ಲೂ ಆಕೆ ಸಿಗದೆ, ಯಾರೂ ಆಕೆಯ ಬಗ್ಗೆ ತಿಳಿಸದ್ದರಿಂದ ಹತಾಶನಾಗುತ್ತಾನೆ. ಈ ಸ್ಥಿತಿಯಲ್ಲಿ ಒಂದು ಬಳ್ಳಿ ಅವನನ್ನು ಆಕರ್ಷಿಸುತ್ತದೆ. ಮಳೆಗಾಲವದು, ಆ ಲತೆಯಲ್ಲಿ ಹೂವಿಲ್ಲ, ದುಂಬಿಗಳ ಗುಂಜಾರವವಿಲ್ಲ. ಮೌನವಹಿಸಿದಂತೆ ಅದರ ತಾಮ್ರವರ್ಣದ ಚಿಗುರೆಲೆಗಳಿಂದ ಉದುರುವ ಮಳೆಹನಿಗಳು ಕಣ್ಣೀರು ಸುರಿಸುತ್ತಿರುವಂತೆ ಕಾಣುತ್ತಿತ್ತು. ಊರ್ವಶಿಯೆ ಲತೆಯಾಗಿ ಮಾರ್ಪಟ್ಟು ಈಗ ಪಶ್ಚಾತ್ತಾಪದಿಂದ ಕೂಡಿರುವಂತೆ ಕಂಡು, ಆವೇಶಕ್ಕೊಳಗಾಗಿ ಆ ಲತೆಯನ್ನು ಅಪ್ಪಿ ಹಿಡಿಯುತ್ತಾನೆ ಪುರೂರವ. ಆಶ್ಚರ್ಯ! ಲತೆ ಊರ್ವಶಿಯಾಗಿ ಅವನ ಬಾಹುಗಳಲ್ಲಿ ಜೀವತಳೆಯುತ್ತಾಳೆ. ಅನೂಹ್ಯವಾದ ಚಮತ್ಕಾರವಿದು.

ಚಕಿತನಾದ ಪುರೂರವ, ಇದೆಲ್ಲ ಹೇಗಾಯಿತೆಂದು ಕೇಳಿದಾಗ ಆಕೆ ಹೇಳುತ್ತಾಳೆ-‘ಈ ವನಪ್ರದೇಶ ಭಗವಾನ್ ಕುಮಾರನಿಗೆ ಸೇರಿದ್ದು. ಆತ ತಾನು ಇಲ್ಲಿ ನೈಷ್ಠಿಕ ಬ್ರಹ್ಮಚರ್ಯ ವ್ರತದಲ್ಲಿರುವುದರಿಂದ ಯಾವ ಸ್ತ್ರೀಯೂ ಇಲ್ಲಿ ಪ್ರವೇಶಿಸಬಾರದು, ಪ್ರವೇಶಿಸಿದರೆ ಶಾಪಕ್ಕೆ ಪಕ್ಕಾಗುವರೆಂದು ಕಟ್ಟಪ್ಪಣೆ ಮಾಡಿದ್ದಾನೆ. ದೇವಲೋಕದವಳಾದ ನನಗೆ ಇದೆಲ್ಲ ತಿಳಿದಿದ್ದರೂ ಕೋಪದಿಂದ ಕುರುಡಾಗಿ ಇಲ್ಲಿಗೆ ಬಂದು ಶಾಪಗ್ರಸ್ತಳಾಗಿ ಲತೆಯಾಗಿ ಮಾರ್ಪಟ್ಟೆ. ಈಗ ನಿನ್ನ ಬಳಿಯಿರುವ ಮಣಿಯ ಪ್ರಭಾವದಿಂದ ನಿಜರೂಪವನ್ನು ಪಡೆದೆ’.

ಈ ಕಥೆಯಲ್ಲಿನ ಮುಖ್ಯಾಂಶಗಳು ಕುಮಾರವನ, ಕುಮಾರವ್ರತ, ಸ್ತ್ರೀಪ್ರವೇಶ ನಿಷೇಧ, ನಿಷೇಧೋಲ್ಲಂಘನೆಯಾದರೆ ಕೇಡು. ಇದು ಸ್ವತಃ ಆ ದೇವತೆಯ ಮಾತು.

ಕಾಳಿದಾಸನ ಕಾಲ ಕ್ರಿ.ಶ. 5ನೇ ಶತಮಾನ. ಇಂದಿಗೆ ಸುಮಾರು 1500 ವರ್ಷಗಳು ಕಳೆದಿವೆ. ಕಾಳಿದಾಸನು ನಾಟಕಕ್ಕಾಗಿ ಹಿಂದೆ ಇದ್ದ ಜ್ಞಾನಪದೀಯ, ಪರಂಪರೆಯ ವಿವರಗಳನ್ನು ಬಳಸಿಕೊಂಡಿದ್ದಾನೆ. ಅಂದರೆ 1700, 1800 ವರ್ಷಗಳಷ್ಟು ಪ್ರಾಚೀನವಿರಬಹುದು. ಇದು ಸಾವಿರಾರು ವರ್ಷಗಳ ಶ್ರದ್ಧೆಯಿಂದ ಪಾಲಿಸಿಕೊಂಡು ಬಂದಿರುವ ನಿಯಮ ಎಂಬುದು ನಿಶ್ಚಿತ.

ಸವೋಚ್ಚ ನ್ಯಾಯಾಲಯದ ತೀರ್ಪು ಲಿಂಗ ಸಮಾನತೆಯ ಹಕ್ಕನ್ನೂ ಎತ್ತಿಹಿಡಿದಿದೆ. ಆದರೆ ಸ್ಥಳಪುರಾಣ, ಸ್ಥಳಮಹಾತ್ಮೆಗಳನ್ನು ಪರಿಗಣಿಸದೆ ದೇವಾಲಯ ಪ್ರವೇಶವನ್ನು ಮಹಿಳಾ ಹಕ್ಕಿನ ರಕ್ಷಣೆಯ ವಿಚಾರಮಾತ್ರ ಎನ್ನುವುದು ಸರಿಯೆ? ಕೋರ್ಟಿನಲ್ಲಿ ದಾವೆ ಹೂಡಿದವರ ಶ್ರದ್ಧೆ ಏನು? ಈ ಬಗ್ಗೆಯೂ ವಿಮರ್ಶೆ ನಡೆದಿಲ್ಲ. ಪ್ರಾಚೀನ ಪರಂಪರೆಗಳಷ್ಟೆ ಅಲ್ಲದೆ ನಮ್ಮ ಇಂದಿನ ಜೀವನದಲ್ಲೂ ಎಷ್ಟೋ ಆಚರಣೆಗಳು ತರ್ಕ, ವಾದ, ಕಾನೂನುಗಳಿಗೆ ಅತೀತವಾಗಿರುತ್ತವೆ. ಹಾಗೆ ಸುಮ್ಮನೆ ಚಾಲ್ತಿಯಲ್ಲಿರುತ್ತವೆ. ಇದಕ್ಕೆ ಪೂರಕವಾಗಿ ಒಂದು ಉದಾಹರಣೆಯನ್ನು ನೀಡಬಹುದು. ಎಷ್ಟು ಚೋದ್ಯವೆನಿಸುತ್ತದೆ ನೋಡಿ. ಕರ್ನಾಟಕ ವಿಧಾನಮಂಡಲದಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್ತುಗಳಿವೆ. ಎರಡಕ್ಕೂ ಭಿನ್ನವಾದ ಸಚಿವಾಲಯಗಳು, ಅಧಿವೇಶನ ಸಭಾಂಗಣಗಳು ಇವೆ. ನಾನೊಮ್ಮೆ (ಎಂಎಲ್​ಸಿ ಆಗಿದ್ದಾಗ) ವಿಧಾನಸಭೆಯ ಬಳಿಹೋಗಲು ಬಯಸಿದಾಗ ದ್ವಾರಪಾಲಕ ಹಾವು ಮೆಟ್ಟಿದಂತೆ ಗಾಬರಿಯಿಂದ ತಡೆದ. ಏಕೆಂದು ಕೇಳಿದಾಗ. ‘ನೀವು ಎಂಎಲ್​ಸಿ, ಇದು ಬರೀ ಎಂಎಲ್​ಎಗಳಿಗೆ ಮಾತ್ರ. ಒಳಹೋಗುವಂತಿಲ್ಲ’ ಎಂದ. ಇದೇ ರೀತಿ ಎಂಎಲ್​ಎಗಳು, ವಿಧಾನ ಪರಿಷತ್ತಿಗೆ ಬರುವಂತಿಲ್ಲ. ಬಹಳ ವಿಚಿತ್ರ ಪದ್ಧತಿ ಎನಿಸಿತು. ಇದೊಂದು ರೀತಿಯ ಅಸ್ಪಶ್ಯತೆ ಅಲ್ಲವೆ? ಯಾವ ಕಾರಣಕ್ಕೋ ರೂಢಿ ಮಾಡಿಕೊಂಡಿದ್ದಾರೆ. ಇದೊಂದು ಕನ್​ವೆನ್​ಷನ್. ಇಂಥ ಪ್ರಸಂಗಗಳಲ್ಲಿ ಹಕ್ಕನ್ನು ಸ್ಥಾಪಿಸಲು ಸಾಧ್ಯವೆ? ಕನ್​ವೆನ್​ಷನ್​ಗಳು ಕೆಲವು ನಿರುಪದ್ರವಿಗಳಾಗಿದ್ದಾರೆ, ಕೆಲವು ಉದ್ರೇಕಗೊಳಿಸುತ್ತವೆ. ಕೆಲವು ಅರ್ಥಪೂರ್ಣ ಎನಿಸಿದರೆ ಮತ್ತೆ ಕೆಲವು ಅರ್ಥಹೀನವಾಗಿರುತ್ತವೆ. ವಿಧಾನಮಂಡಲದಲ್ಲಿರುವ ನಿಷೇಧದ ಬಗ್ಗೆ ಹೋರಾಟಗಾರರು ಯಾರಾದರೂ ತಲೆಕೆಡಿಸಿಕೊಂಡಿದ್ದಾರೆಯೆ?

ವಿವಿಧ ಸಮುದಾಯಗಳು ಕಾಲಕಾಲಕ್ಕೆ ಅನೇಕ ಪದ್ಧತಿಗಳನ್ನು ರೂಢಿಸಿಕೊಳ್ಳುತ್ತವೆ. ಸಾವಿರಾರು ವರ್ಷಗಳಿಂದ ರೂಢಿಯಲ್ಲಿರುವ, ಇಂದಿಗೂ ಚಾಲ್ತಿಯಲ್ಲಿರುವ, ನಿರುಪದ್ರವಿಯಾದ ಅಯ್ಯಪ್ಪ ವ್ರತ (ಕುಮಾರವ್ರತ)ವನ್ನು ನಾವೇಕೆ ಭಂಗಗೊಳಿಸಬೇಕು? ನಮ್ಮ ಮಹಿಳೆಯರಿಗೆ ದೇಶದಲ್ಲಿರುವ ಲಕ್ಷಲಕ್ಷ ದೇವಾಲಯಗಳಲ್ಲಿ ಸಮಾನ ಪ್ರವೇಶಾವಕಾಶ ಇರುವಾಗ, ಸ್ತ್ರೀಯರಿಗಾಗಿಯೆ ಮೀಸಲಾದ ದೇವಾಲಯಗಳಿರುವಾಗ ಶಬರಿಮಲೆಯ ಮೇಲೆ ಏಕೆ ವಕ್ರದೃಷ್ಟಿ? ಇದರಿಂದ ಯಾರ ತಲೆಯ ಮೇಲೆ ಆಕಾಶ ಕಳಚಿಬಿದ್ದಿದೆ?

ಸವೋಚ್ಚ ನ್ಯಾಯಾಲಯದ ತೀರ್ಪು ಕಾನೂನಿನ ಪ್ರಕಾರ ಕೊನೆಯ ಮಾತಿರಬಹುದು. ಇನ್ನೊಂದೆಡೆ, ಸಾರ್ವಜನಿಕ ಜೀವನದಲ್ಲಿ ಇಂದಿನ ದಿನಗಳಲ್ಲಿ ಹಕ್ಕಿನ ರೆಕ್ಕೆ ಬಡಿತ ಜೋರಾಗಿದ್ದು ಕರ್ತವ್ಯದೃಷ್ಟಿ, ನೀತಿನ್ಯಾಯಗಳು ಹಿಂದೆ ಬಿದ್ದಿವೆ.

“Supreme court judgment may be final but not necessarily infallible’.

ಲಿಂಗ ತಾರತಮ್ಯವಂತೂ ಒಂದರ್ಥದಲ್ಲಿ ಸಂಪೂರ್ಣವಾಗಿ ತೊಡೆದುಹೋಗಿದೆ. ಕೌಟುಂಬಿಕ ದೌರ್ಜನ್ಯದ ವಿರುದ್ಧದ ಕಾಯ್ದೆ ಬಂದಾದ ಮೇಲೆ ಹೆಣ್ಣಿನ ಮೇಲೆ ಪುರುಷನ ದಬ್ಬಾಳಿಕೆ ಏನೂ ಕಡಿಮೆಯಾಗದಿದ್ದರೂ ಪುರುಷರ ಮೇಲೆ ಹೆಂಗಸರ ದಬ್ಬಾಳಿಕೆಯಂತೂ ಹೆಚ್ಚಿದೆ. ಹೆಂಗಸರು ನೀಡುವ ದೂರಿನಲ್ಲಿ ಹುರುಳಿದೆಯೋ ಇಲ್ಲವೋ ಎಂಬುದನ್ನು ನೋಡದೆ ಮನೆಮಂದಿಯನ್ನೆಲ್ಲ ಒಳತಳ್ಳಲು ಹವಣಿಸಿದಾಗ ಲಾಭ ಪಡೆಯುತ್ತಿರುವವರು ವಕೀಲರು ಮತ್ತು ಪೊಲೀಸರು. ಈಗ ಸ್ತ್ರೀಪುರುಷರು ಸಮಾನವಾಗಿ ಪರಸ್ಪರ ದ್ವೇಷ ಅಸೂಯೆ ಶೋಷಣೆಗಿಳಿದಿದ್ದಾರೆ. ಸಮಾನತೆ ಸಾಧಿತವಾಗಿದೆ!

(ಲೇಖಕರು ಸಂಸ್ಕೃತ ವಿದುಷಿ ಮತ್ತು ನಿಕಟಪೂರ್ವ ವಿಧಾನಪರಿಷತ್ ಸದಸ್ಯರು)

Leave a Reply

Your email address will not be published. Required fields are marked *