Wednesday, 12th December 2018  

Vijayavani

Breaking News

ವಿನಿಮಯ ದರ ದುಬಾರಿ ಎನಿಸಿದರೂ…

Thursday, 22.03.2018, 3:05 AM       No Comments

| ಡಾ. ಎಸ್​. ಆರ್​. ಲೀಲಾ

ಇಂಗ್ಲಿಷ್ ಭಾಷೆ ಕುರಿತಂತೆ ನಮ್ಮ ದೇಶದಲ್ಲಿ ಹಲವು ಭ್ರಮೆಗಳನ್ನು ಬಿತ್ತಲಾಗಿದೆ. ಅವು ಈಗಲೂ ಜೀವಂತವಾಗಿವೆ. ಇಂಗ್ಲಿಷಿನಿಂದ ಮಾತ್ರ ಅನ್ನದ ದಾರಿ ಕಂಡುಕೊಳ್ಳಬಹುದು ಎಂದು ಹೇಳುತ್ತ ಭಾರತೀಯ ಭಾಷೆಗಳ ಕಲಿಕೆ, ಬಳಕೆಯನ್ನು ಕಡೆಗಣಿಸಲಾಗುತ್ತಿದೆ. ಈ ಪ್ರವೃತ್ತಿ ನಿಲ್ಲಬೇಕು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರೀಯ ನೀತಿ ನಿರೂಪಣೆ ಮಾಡುವ ಪ್ರತಿನಿಧಿ ಸಭಾದಲ್ಲಿ ಈ ಬಾರಿ ತುಂಬ ಮಹತ್ವದ ನಿರ್ಣಯವೊಂದನ್ನು ಕೈಗೊಳ್ಳಲಾಯಿತು. ಅದು ಭಾರತೀಯ ಭಾಷೆಗಳ ಬಗ್ಗೆ. ಅದರಲ್ಲೂ ಎಳೆಯರು ಪ್ರಾಥಮಿಕ ಹಂತದಲ್ಲಿ ಕಲಿಯಬೇಕಾದ ಭಾಷೆ, ಬಳಸಬೇಕಾದ ಮಾಧ್ಯಮ. ಎಲ್ಲ ಭಾರತೀಯ ಭಾಷೆಗಳನ್ನು ಉಳಿಸಿ ಬೆಳೆಸುವ ಬಗ್ಗೆ ಸಂಘವು ವಿಶೇಷ ಕಾಳಜಿ ಹೊಂದಿರುವುದು ನಿಚ್ಚಳವಾಗಿದೆ. ‘ಪ್ರಾಥಮಿಕ ಹಾಗೂ ಮಾಧ್ಯಮಿಕ ಹಂತಗಳಲ್ಲಿ ಮಕ್ಕಳಿಗೆ ತಮ್ಮ ಭಾಷೆಗಳಲ್ಲೇ ಶಿಕ್ಷಣ ನೀಡಬೇಕು. ಇದರಿಂದ ಮಕ್ಕಳ ಬುದ್ಧಿಶಕ್ತಿ ಚುರುಕಾಗಿರುತ್ತದೆ. ಭಾರತೀಯರಿಗೆ ಚಿಕ್ಕಂದಿನಿಂದಲೆ ತಮ್ಮ ನುಡಿಗಳ ಬಗ್ಗೆ ಅಭಿಮಾನ ಬೆಳೆಯುತ್ತದೆ’. ಸಂಘದಂಥ ಪ್ರಭಾವಿ, ಬಲಿಷ್ಠ ರಾಷ್ಟ್ರೀಯ ಸಂಸ್ಥೆ ತನ್ನ ಈ ಅಭಿಪ್ರಾಯವನ್ನು ಕೇಂದ ್ರರ್ಕಾರಕ್ಕೆ ಮುಟ್ಟಿಸಿ ಅಲ್ಲಿಂದ ರಾಜ್ಯಗಳಿಗೂ ಸೂಕ್ತ ಸಲಹೆ ಸೂಚನೆಗಳನ್ನು ನೀಡುವಂತೆ ಮಾಡಬಹುದು ಎಂಬುದು ಇದರಿಂದ ಸೂಚಿತವಾಗುತ್ತದೆ.

ಗಾಂಧಿಯಿಂದ ಆರಂಭಿಸಿ ಇಂದಿನ ಚಳವಳಿಗಾರರು, ಹೋರಾಟಗಾರರವರೆಗೆ ಎಲ್ಲರೂ ಹೇಳುವುದು ಇದನ್ನೇ. ಕವಿ ರವೀಂದ್ರನಾಥ ಟ್ಯಾಗೋರ್, ಖ್ಯಾತ ವಿಜ್ಞಾನಿ ಎಂ.ಜಿ.ಕೆ ಮೆನನ್, ರಾಷ್ಟ್ರಕವಿ ಕುವೆಂಪು, ಸಾಹಿತಿ ಡಾ.ವಿ.ಕೃ.ಗೋಕಾಕ್ ಮುಂತಾದ ರಾಷ್ಟ್ರೀಯ ನಾಯಕರು, ಭಾಷಾತಜ್ಞರು, ಶಿಕ್ಷಣತಜ್ಞರು, ವಿಜ್ಞಾನಿಗಳು, ವಿದ್ವಾಂಸರು ಎಲ್ಲರ ಏಕಾಭಿಪ್ರಾಯ ಇದೇ. ಮಾತೃಭಾಷೆಯಲ್ಲಿ ಪ್ರಾಥಮಿಕ ಹಂತದ ಶಿಕ್ಷಣ ಮಕ್ಕಳ ಬುದ್ಧಿಶಕ್ತಿ ಪ್ರತಿಭೆ, ಚಿಂತನಶಕ್ತಿಗೆ ಪೂರಕವಾಗಿದೆ ಎಂದು. ಇದುವರೆಗೆ ಕರ್ನಾಟಕಕ್ಕೆ ಕನ್ನಡಕ್ಕಾಗಿ ಚಳವಳಿಗಳ ಬಳುವಳಿ ಯಥೇಷ್ಟವಾಗಿ ದೊರೆತಿದೆ. ಕನ್ನಡಮ್ಮನ ಕೊರಳ ತುಂಬ ಹೋರಾಟಗಳ ಸರಮಾಲೆ ತೊಡಿಸಿಯಾಗಿದೆ. ಕನ್ನಡವನ್ನೆ ಕಡ್ಡಾಯ ಮಾಡುವ ಸರ್ಕಾರದ ಆದೇಶಗಳನ್ನು ಉಚ್ಚ ಮತ್ತು ಸವೋಚ್ಚ ನ್ಯಾಯಾಲಯಗಳು ತಳ್ಳಿಹಾಕಿದಾಗ ಕನ್ನಡದ ಬಗ್ಗೆ ಚರ್ಚೆಗಳು ಬಿಸಿಬಿಸಿಯಾಗುತ್ತವೆ. ಸಾಹಿತಿಗಳು, ಚಳವಳಿಗಾರರು, ಸರ್ಕಾರಗಳು, ಮಾಧ್ಯಮಗಳು ಎಲ್ಲರೂ ಇದರ ಬಗ್ಗೆ ಸಾಕಷ್ಟು ಪರ-ವಿರೋಧಾಭಿಪ್ರಾಯಗಳನ್ನು ನೀಡುತ್ತಾರೆ. ಕೆಲವು ಕನ್ನಡದ ಕಟ್ಟಾಳುಗಳು ಕೇಂದ್ರ ಸರ್ಕಾರ ಭಾರತೀಯ ಭಾಷೆಗಳನ್ನು ಸಂರಕ್ಷಿಸುವ ಗಟ್ಟಿನಿರ್ಣಯ ತೆಗೆದುಕೊಳ್ಳಬೇಕೆಂದು, ಮೋದಿ ಏನೂ ಮಾಡುತ್ತಿಲ್ಲ ಎಂದು ನೇರ ಪ್ರಧಾನಿಯ ಮೇಲೆ ಟೀಕಾಸ್ತ್ರಗಳನ್ನು ಎಸೆದಿದ್ದು ನೆನಪಿರಬೇಕು. ಕನ್ನಡ ಸಾಹಿತ್ಯ ಸಮ್ಮೇಳನ, ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಇಂಥ ವೀರಾವೇಶದ ಮಾತುಗಳು ಪುಂಖಾನುಪುಂಖವಾಗಿ ಕೇಳಿಬರುತ್ತವೆ. ಕನ್ನಡಿಗರೂ ಕೇಳಿಸಿಕೊಂಡು ಸುಮ್ಮನಾಗಿದ್ದಾರೆ. ನಿಜವಾಗಿಯೂ ಭಾರತೀಯ ಭಾಷೆಗಳ ಬಗ್ಗೆ ಪ್ರೀತಿಯುಳ್ಳವರೆಲ್ಲರಿಗೂ ಸಂಘದ ನಿರ್ಣಯದಿಂದ ಸಮಾಧಾನವಾಗಿದೆ. ಆದರೆ ಆಶ್ಚರ್ಯದ ಸಂಗತಿ ಏನಂತೀರಾ? ಈ ನಿರ್ಣಯವನ್ನು ಅಂಗೀಕರಿಸಿದ್ದಕ್ಕಾಗಿ ಸಂಘವನ್ನು ಯಾವ ಕನ್ನಡ ಹೋರಾಟಗಾರರೂ ಅಭಿನಂದಿಸಲಿಲ್ಲ. ಲೆಕ್ಕಕ್ಕೇ ಇಡದಿದ್ದ ಮೇಲೆ ವಂದನೆ, ಅಭಿನಂದನೆ ಇವೆಲ್ಲ ದೂರದ ಮಾತೇ ಸರಿ. ಶ್ರೀಸಾಮಾನ್ಯನಿಗೆ ಏಕೆ ಹೀಗೆ ಎಂದೆನಿಸದೆ ಇರುತ್ತದೆಯೆ? ಕಾರಣವೂ ಸ್ಪಷ್ಟ. ನಮ್ಮ ಅನೇಕ ಸಾಹಿತಿಗಳು, ಹೋರಾಟಗಾರರು, ಬುದ್ಧಿಜೀವಿಗಳಿಗೆ ವಿಷಯ- Objective ಆಗಿರೋದು ಮುಖ್ಯವಲ್ಲ. ಅದನ್ನು ಯಾರು ಹೇಳುತ್ತಾರೆ, ಯಾವಾಗ ಹೇಳುತ್ತಾರೆ, ಏಕೆ ಹೇಳುತ್ತಾರೆ ಎಂಬುದನ್ನು ನೋಡಿಕೊಂಡು ತಮ್ಮ ಪ್ರತಿಕ್ರಿಯೆ ನೀಡುವ ಜಾಯಮಾನ ಬೆಳೆಸಿಕೊಂಡಿದ್ದಾರೆ- Subjective, selective ಆಗಿದ್ದಾರೆ. ಅಲ್ಲದೆ ಮೇಲೆ ಹೇಳಿದ ಈ ನಮೂನೆಯವರಿಗೆಲ್ಲ ರಾಷ್ಟ್ರೀಯ ಸ್ವಯಂಸೇವಕ ಸಂಘ ಅಂದರೆ ಅದೇನೋ ಅಲರ್ಜಿ. ಏಕೆ ಎಂದು ಬಹುಶಃ ಅವರಿಗೇ ತಿಳಿದಿರಲಾರದು. ತಮ್ಮ ಮಾತುಕತೆ, ವ್ಯವಹಾರಗಳಲ್ಲೆಲ್ಲ ಸಂಘವನ್ನು, ಅವರ ವೇಷಭೂಷಣವನ್ನು, ಅವರು ಅನುಸರಿಸುವ ಶಿಸ್ತನ್ನು ಟೀಕಿಸುತ್ತಲೇ ಇರುತ್ತಾರೆ. ಪ್ರಶಂಸೆ ಮಾಡಬಹುದಾದಂಥ ಕಡೆಯೂ ಋಣಾತ್ಮಕವಾಗಿ ತಾತ್ಸಾರದಿಂದ ಮಾತನಾಡುತ್ತಾರೆ. ಇದಕ್ಕೆ ನಿದರ್ಶನವಾಗಿ ತಾಜಾ ಉದಾಹರಣೆಯೊಂದನ್ನು ನೀಡಬಹುದು. ಎಡಬಿಡಂಗಿಗಳ ತಾಣವಾಗಿರುವ ಜೆಎನ್​ಯುುನಲ್ಲಿ ವಿದ್ಯಾರ್ಥಿ(?)ಗಳು ತಮಗೆ ಹಾಜರಾತಿ ಕಡ್ಡಾಯ ಮಾಡಬಾರದು ಎಂದು ಅಧಿಕಾರಿಗಳ ವಿರುದ್ಧ ತಿರುಗಿಬಿದ್ದು, ಯಥಾಪ್ರಕಾರ ಪ್ರತಿಭಟನೆ ಮಾಡಿ ಕೂಗುತ್ತಿದ್ದಾರೆ. ಅವರು ಜಗತ್ತಿಗೆ ಸಾರಿ ಹೇಳುತ್ತಿರುವ ಸತ್ಯವೇನೆಂದು ತಿಳಿದಿದ್ದೀರಿ! ‘ಹಾಜರಾತಿ ಕಡ್ಡಾಯಪಡಿಸಲು ಇದೇನು ಆರ್​ಎಸ್​ಎಸ್ ಶಾಖೆ ಅಲ್ಲ’!

ರಾಷ್ಟ್ರೀಯ ಸ್ವಯಂಸೇವಕ ಸಂಘ ಪಾಲಿಸುತ್ತಿರುವ ಶಿಸ್ತೆಂಬ ಧನಾತ್ಮಕ ವಿಚಾರವೂ ಈ ಶಿಖಾಮಣಿಗಳಿಗೆ ನಕಾರಾತ್ಮಕವಾಗಿ ಪರಿಣಮಿಸಿದೆ ಎಂದರೆ ಈ ಜನರ ಉದ್ದೇಶವೇನು ಎಂಬುದು ಸ್ವಯಂವೇದ್ಯ. ಅದೇನೆ ಇರಲಿ, ಸಂಘದ ನಿರ್ಣಯ ನಿಜವಾಗಿ ಕಾರ್ಯಸಾಧುವೆ ಎಂಬುದನ್ನು ಒಂದಿಷ್ಟು ನೋಡೋಣ.

ನಮ್ಮ ದೇಶದಲ್ಲಿ ಸ್ವಾತಂತ್ರಾ್ಯನಂತರ ಮೈನಾರಿಟಿಸಂ-ಅಲ್ಪಸಂಖ್ಯಾತ ಸಿಂಡ್ರೋಂ ಎಂಬ ವಿಷವೃಕ್ಷವನ್ನು ಬಿತ್ತಿ ಬೆಳೆಸಲಾಗಿದೆ. ಇದು ಮೇಲ್ನೋಟಕ್ಕೆ ಎರಡು ತೆರನಾಗಿದೆ. ಒಂದು ಮತಧರ್ಮಕ್ಕೆ ಸಂಬಂಧಿಸಿದ್ದು, ಇನ್ನೊಂದು ಭಾಷಿಕ ಅಲ್ಪಸಂಖ್ಯಾತರಿಗೆ. ಈ ದೇಶ ಬಹು ಪ್ರಾಚೀನಕಾಲದಿಂದಲೂ ಅನೇಕ ಭಾಷೆಗಳನ್ನು ಬಳಸುತ್ತಿದೆ. ಅನೇಕ ಲಿಪಿಗಳನ್ನು ಕಂಡುಕೊಂಡಿದೆ. ಗ್ರಂಥ ರಚನೆಗಾಗಿ, ಕಾವ್ಯರಚನೆಗಾಗಿ ಹತ್ತಾರು ಭಾಷೆಗಳನ್ನು ಬಳಸಿದರೆ, ವ್ಯವಹಾರಕ್ಕಾಗಿ, ಸಂವಹನಕ್ಕಾಗಿ ಇನ್ನೂ ನೂರಾರು ನುಡಿಗಳು ಚಾಲ್ತಿಯಲ್ಲಿವೆ. ಈ ಬಹುಭಾಷಾ ಸಂಪತ್ತಿಗೆ ಅತ್ಯಂತ ಪ್ರಮುಖ ಪ್ರಾಚೀನ ಗ್ರಂಥಗಳಾದ ರಾಮಾಯಣ, ಮಹಾಭಾರತ, ಭರತಮುನಿಯ ನಾಟ್ಯಶಾಸ್ತ್ರ ಮುಂತಾದವು ಸಾಕ್ಷಿ ಒದಗಿಸುತ್ತವೆ. ಮನೆಮಾತು ಒಂದಾದರೆ, ಹೊರಗೆ ವ್ಯವಹಾರಕ್ಕೆ ಮತ್ತೊಂದು, ಅಧಿಕಾರ ಸ್ಥಾನಗಳಲ್ಲಿ ಒಂದು, ಉನ್ನತ ವ್ಯಾಸಂಗಕ್ಕೆ ಒಂದು-ಹೀಗೆ ಒಬ್ಬನೇ ವ್ಯಕ್ತಿ ಅನೇಕ ನುಡಿಗಳ ಒಡೆಯನಾಗಿರುತ್ತಿದ್ದುದೂ ಸರ್ವೆಸಾಮಾನ್ಯ. ಪರಂಪರಾನುಗತವಾಗಿ ಅನೇಕ ನುಡಿಗಳನ್ನು ಹೊತ್ತುಬಂದ ಭಾರತದೇಶ ಅದೇ ಕಾರಣಕ್ಕೆ ಬಹುಜ್ಞಾನಸಂಪತ್ತಿಯಿಂದಲೂ ಕೂಡಿದೆ. ಇದೀಗ ಭಾಷಾವಾರು ಪ್ರಾಂತ ರಚನೆಯಾದ ಮೇಲೆ ಒಂದು ಪ್ರದೇಶಕ್ಕೆ ಒಂದು ಭಾಷೆ ಎಂಬ ಕಟ್ಟುಪಾಡು ಹಾಕಿಕೊಂಡು, ಲಾಭವನ್ನೂ ನಷ್ಟವನ್ನೂ ಸಮಸಮವಾಗಿ ಅನುಭವಿಸುತ್ತಿದ್ದೇವೆ. ಹೋರಾಟಗಾರರ ಒತ್ತಾಯಕ್ಕೆ ಮಣಿದು ಸರ್ಕಾರ ಕನ್ನಡವನ್ನು ಕಡ್ಡಾಯ ಮಾಡಿದಾಗಲೆಲ್ಲ ಅದನ್ನು ಪ್ರಶ್ನಿಸುವುದು ಈ ಭಾಷಾ ಅಲ್ಪಸಂಖ್ಯಾತರೆ. ಪ್ರತಿಯೊಂದು ರಾಜ್ಯದಲ್ಲೂ ಧಾರ್ವಿುಕ ಅಲ್ಪಸಂಖ್ಯಾತರಿಗೂ, ಭಾಷಾ ಅಲ್ಪಸಂಖ್ಯಾತರಿಗೂ ತಮ್ಮ ತಮ್ಮ ಸಂಘಸಂಸ್ಥೆಗಳನ್ನು ಅದರಲ್ಲೂ ಶಿಕ್ಷಣ ಸಂಸ್ಥೆಗಳನ್ನು ತಮಗಿಷ್ಟ ಬಂದಂತೆ ನಡೆಸಿಕೊಂಡು ಹೋಗುವ ವಿಶೇಷ ಸವಲತ್ತನ್ನು ಭಾರತ ಸಂವಿಧಾನ ನೀಡಿದೆ. ಅನಾಯಾಸವಾಗಿ ಪ್ರಾಪ್ತವಾಗಿರುವ ಅಸ್ತ್ರವನ್ನು ಬಳಸದೆ ಬಿಡುತ್ತಾರೆಯೆ? ಉದಾಹರಣೆಗೆ, ತಮಿಳರು, ತೆಲುಗರು, ಪಾರ್ಸಿಗಳು, ಕ್ರಿಶ್ಚಿಯನ್ನರು ಯಾರು ಬೇಕಾದರೂ ತಮ್ಮ ಭಾಷೆಯ ಅಥವಾ ಇಂಗ್ಲಿಷ್ ಶಾಲೆಗಳನ್ನು ಕರ್ನಾಟಕದಲ್ಲಿ ತೆರೆಯಬಹುದು. ಇವರಿಗೆ ಸರ್ಕಾರದಿಂದ ಅನೇಕ ವಿಧವಾದ ಸೌಲಭ್ಯಗಳು ದೊರಕುತ್ತವೆ. ಈ ವಿಶೇಷ ಸ್ಥಾನಮಾನವನ್ನು ಬಳಸಿಕೊಳ್ಳುವ ಅಲ್ಪಸಂಖ್ಯಾತರು ಕನ್ನಡವನ್ನು ಕಡ್ಡಾಯಗೊಳಿಸಲು ಬಿಡುವುದಿಲ್ಲ. ನ್ಯಾಯಾಲಯಗಳು ಅವರಿಗೆ ಸಾಂವಿಧಾನಿಕವಾಗಿ ದತ್ತವಾಗಿರುವ ಸೌಲಭ್ಯಗಳನ್ನು ಅನುಭವಿಸಲು ಸಹಕರಿಸುತ್ತವೆ. ಕೆಲವು ರಾಜ್ಯಗಳಲ್ಲಿ ಮಾಧ್ಯಮ ಅಲ್ಲದಿದ್ದರೂ, ಆಯಾ ಭಾಷೆಯನ್ನು ಕಲಿಯಲೇಬೇಕೆಂಬ ನಿಯಮ ಮಾಡಿರುವ ಸರ್ಕಾರ, ಎಲ್ಲರಿಗೂ ತಮ್ಮ ಭಾಷೆಯನ್ನು ಕಲಿಸುತ್ತಿದೆ. ಆದರೆ ಕರ್ನಾಟಕ ಈ ವಿಚಾರದಲ್ಲಿಯೂ ಹಿಂದೆ ಬಿದ್ದಿದೆ. ಇದಕ್ಕೆ ಸ್ವಭಾಷಾಭಿಮಾನರಾಹಿತ್ಯವೂ ಸೇರಿದಂತೆ ಅನೇಕ ಕಾರಣಗಳಿವೆ. ಸರ್ಕಾರಿ ಸೌಲಭ್ಯಗಳ ತೆಪ್ಪದಲ್ಲಿ ತೇಲುತ್ತಿರುವ ಇಂಥ ಅಲ್ಪಸಂಖ್ಯಾತ ಭಾಷಿಕ ಗುಂಪುಗಳನ್ನು ನಿಭಾಯಿಸುವುದು ಹೇಗೆ? ಇದೊಂದು ಜಟಿಲತೆಯಾದರೆ ಅವರವರದೇ ಭಾಷಾಮಾಧ್ಯಮದಲ್ಲಿ ಯಾರಿಗೂ ಶಿಕ್ಷಣ ಬೇಕಿಲ್ಲದಿರುವುದು ಇನ್ನೊಂದು. ಭಾರತೀಯರೆಲ್ಲರಿಗೂ (ಯಾವ ರಾಜ್ಯವೂ ಅಪವಾದವಲ್ಲ) ಬೇಕಾಗಿರುವುದು ಇಂಗ್ಲಿಷ್ ಮಾಧ್ಯಮ. ಇದು ಕಠೋರ ವಾಸ್ತವ.

ಈ ವಾಸ್ತವಕ್ಕೆ ಅವಾಸ್ತವಿಕವಾದ ಮೂರು ಆಯಾಮಗಳಿವೆ.

=ಇಂಗ್ಲಿಷ್ ಅಂದರೆ ಅನ್ನಕ್ಕೆ ದಾರಿ, ಅಭಿವೃದ್ಧಿ.

=ಸಾಮಾಜಿಕ ಸ್ಥಾನಮಾನದ ಏರಿಕೆ.

=ಪ್ರಪಂಚವೆಲ್ಲ ಇಂಗ್ಲಿಷ್ ಮೂಲಕ ನಮ್ಮ ಕೈವಶವಾಗುತ್ತದೆ.

ಕೂಲಿಗಳಿಂದ ಹಿಡಿದು ಕಾರ್ಪೇರೇಟ್​ಗಳವರೆಗೆ ಇದು ಎಲ್ಲರ ದೃಢವಾದ ಅಭಿಪ್ರಾಯವಾಗಿದೆ. ಜನರ ಈ ಮನೋಭಾವ ವ್ಯತ್ಯಾಸವಾಗದೆ ಶಿಕ್ಷಣಮಾಧ್ಯಮವನ್ನು ಭಾರತೀಯ ಭಾಷೆಗಳಿಗೆ ಅಳವಡಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಮತ್ತೊಂದು ಗಮನಿಸಲೇಬೇಕಾದ ಅಂಶವೇನೆಂದರೆ-ಮಕ್ಕಳಿಗೆ 3ರಿಂದ 10ರವರೆಗಿನ ವಯೋಮಾನ ಅಗಾಧ ಗ್ರಹಣಶಕ್ತಿಯ ಕಾಲ. ಏಕಕಾಲದಲ್ಲಿ 10 ಭಾಷೆಗಳನ್ನು ಬೇಕಾದರೂ ಕಲಿಯುವ ಸಾಮರ್ಥ್ಯವಿರುತ್ತದೆ. ಇದು ಮಾನವನಿಗೆ ದೈವದತ್ತ ವರ, ನಿಸರ್ಗದತ್ತ ಬಲ. ಮಗುವಿನ ಅರಿವಿನ ಶಕ್ತಿ ಇಷ್ಟು ವ್ಯಾಪಕವಾಗಿರುವಾಗ ಒಂದೇ ಭಾಷೆಗೆ ಏಕೆ ಸೀಮಿತಗೊಳಿಸಬೇಕು? ಮೂರು ಭಾಷೆಗಳನ್ನಾದರು ಮಾಧ್ಯಮಿಕ ಸ್ತರ ಮುಗಿಯುವ ವೇಳೆಗೆ ಚೆನ್ನಾಗಿ ಕಲಿಸಬಹುದಾಗಿದೆ. ಭಾರತದ ಡಿಎನ್​ಎ ಹೇಗಿದೆಯೆಂದರೆ ಪ್ರತಿಯೊಬ್ಬರೂ multi-lingual ಆಗಿರುತ್ತಾರೆ. ಮೂರು ನಾಲ್ಕು ಭಾಷೆಗಳಾದರೂ ಬಂದಿರುತ್ತದೆ. ಇಂಗ್ಲಿಷ್ ಕೂಡ ವ್ಯಾಪಕವಾಗಿ ಬಳಕೆಯಲ್ಲಿರುವುದರಿಂದ ಅದನ್ನು ವಿದೇಶಿ ಭಾಷೆ ಎಂದೆಣಿಸುವುದನ್ನು ನಿಲ್ಲಿಸಬೇಕಾದ ಸಂದರ್ಭ ಒದಗಿದೆ. ಭಾರತದಿಂದ ವಿದೇಶಿಯರು ಜ್ಞಾನವಿಜ್ಞಾನ ಸೇರಿದಂತೆ ಏನೇನು ಪಡೆದುಕೊಂಡರು. ಅದರಲ್ಲೂ ಬ್ರಿಟಿಷರು ನಮ್ಮಿಂದ ಲೂಟಿ ಹೊಡೆದದ್ದು ಕಡಿಮೆಯೇನಲ್ಲ. ಇಂಗ್ಲಿಷೊಂದು ಅವರಿಂದ ನಾವು ಪಡೆದದ್ದು. ವಿನಿಮಯ ದರ (exchange rate) ದುಬಾರಿ ಎನಿಸಿದರೂ ಪರವಾಗಿಲ್ಲ, ಭಾರತೀಯ ಬಣ್ಣ ನೀಡಿ ಚಲಾಯಿಸೋಣ. ಚತುರರಾಗೋಣ..

(ಲೇಖಕರು ಸಂಸ್ಕೃತ ವಿದುಷಿ ಮತ್ತು ನಿಕಟಪೂರ್ವ ವಿಧಾನಪರಿಷತ್ ಸದಸ್ಯರು)

Leave a Reply

Your email address will not be published. Required fields are marked *

Back To Top