ಇಲ್ಲಿ ಪಲ್ಲಕಿಗೂ ಬರುತ್ತದೆ ಆವೇಶ!

ನಿಶಾಂತ್ ಕಿಲೆಂಜೂರು ಕಿನ್ನಿಗೋಳಿ

ತುಳುನಾಡಿನಲ್ಲಿ ಅನೇಕ ಕಡೆ ದೈವ ದೇವರು ನೆಲೆ ನಿಂತು ಕಾಲಕಾಲಕ್ಕೆ ತಮ್ಮ ಕಾರಣಿಕ ತೋರ್ಪಡಿಸುತ್ತ ಬಂದಿದ್ದು, ಅಂಥವುದರಲ್ಲಿ ಅತ್ತೂರು ಅರಸು ಕುಂಜಿರಾಯ ದೈವಸ್ಥಾನವೂ ಒಂದು.

ಕಿನ್ನಿಗೋಳಿ ಸಮೀಪ ಅತ್ತೂರು ಅರಸು ಕುಂಜಿರಾಯ ದೈವಸ್ಥಾನ ಜಾತ್ರೋತ್ಸವ ಪ್ರತಿವರ್ಷ ಮಾರ್ಚ್ 28ಕ್ಕೆ ನಡೆಯುತ್ತಿದ್ದು, ಮೊದಲ ದಿನ ಜಾರಂದಾಯ ದೈವದ ಪಲ್ಲಕ್ಕಿ ಪವಾಡ ಇಲ್ಲಿನ ವಿಶೇಷ. ಅರಸು ಕುಂಜಿರಾಯರ ನೇಮೋತ್ಸವ ಸಂದರ್ಭ ಶಿಬರೂರು ಉಳ್ಳಾಯ ಹಾಗೂ ಕೊಡಮಣಿತ್ತಾಯ, ಕಿಲೆಂಜೂರು ಸರಳ ಧೂಮಾವತಿ ಬಂಟ ದೈವ, ಕೆಮ್ರಾಲ್ ಕಾಂತೇರಿ ಧೂಮಾವತಿ ಬಂಟ ದೈವ, ಕೊಯಿಕುಡೆ ಹರಿಪಾದೆ ಶ್ರೀ ಧರ್ಮದೈವ ಜಾರಂದಾಯ ಬಂಟ ದೈವಗಳ ಭಂಡಾರ ಕ್ಷೇತ್ರಕ್ಕೆ ಬಂದು ಮೂರು ದಿನ ನೇಮೋತ್ಸವ ನಡೆಯುತ್ತದೆ.

ಇದರಲ್ಲಿ ಹರಿಪಾದೆ ಜಾರಂದಾಯ ದೈವದ ಭಂಡಾರ ವಿಶೇಷ ಮಹತ್ವ ಪಡೆದಿದೆ. ಪಕ್ಷಿಕೆರೆ ಸಮೀಪದ ಹರಿಪಾದೆಯಿಂದ ಜಾರಂದಾಯ ದೈವದ ಭಂಡಾರವನ್ನು ಶ್ರೀ ಕ್ಷೇತ್ರಕ್ಕೆ ತರಲಾಗುತ್ತದೆ. ಪಲ್ಲಕ್ಕಿಯಲ್ಲಿ ದೈವದ ಮೊಗ ಇರಿಸಿ ಪಕ್ಷಿಕೆರೆ ಮೂಲಕ ಆಗಮಿಸುವ ಸಂದರ್ಭ ಭಕ್ತರು ತಮ್ಮ ಮನೆ, ಅಂಗಡಿ ಮುಂಭಾಗ ಹಾಲು ಸೀಯಾಳ ಇಟ್ಟು ದೈವಕ್ಕೆ ಗೌರವ ಸಲ್ಲಿಸುತ್ತಾರೆ. ಭಂಡಾರ ಬರುವ ಸಂದರ್ಭ ಪಲ್ಲಕ್ಕಿಯಲ್ಲಿ ದೈವದ ಮೊಗ ಆವೇಶಕ್ಕೊಳಗಾಗಿ ಪಲ್ಲಕ್ಕಿ ಇತ್ತಿಂದತ್ತ ಎಳೆದಾಡಲು ಪ್ರಾರಂಭವಾಗುತ್ತದೆ. ಅರಸು ಕುಂಜಿರಾಯ ಕ್ಷೇತ್ರ ಸಮೀಪಿಸುತ್ತಿದ್ದಂತೆ ಮೊಗಕ್ಕೆ ಆವೇಶ ಹೆಚ್ಚಾಗುತ್ತದೆ. ಪಲ್ಲಕ್ಕಿ ಹೊತ್ತ ಸೇವಕರು ಸೇರಿ ಸುಮಾರು 15ರಿಂದ 20 ಜನ ಪಲ್ಲಕ್ಕಿ ನಿಯಂತ್ರಿಸಲು ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ. ಸ್ವಲ್ಪ ಹೊತ್ತಿನ ಅನಂತರ ದೈವಸ್ಥಾನದ ಒಳ ಪ್ರವೇಶವಾಗುತ್ತದೆ. ಬಳಿಕ ಭಂಡಾರವನ್ನು ಕೊಡಿಯಡಿ ಇರಿಸಿ ನೇಮೋತ್ಸವ ನಡೆಯುತ್ತದೆ

ಒಲಿಮದೆ ಪ್ರಮುಖ: ಅರಸು ಕುಂಜಿರಾಯರ ನೇಮ ಬೇರೆ ದೈವದ ನೇಮಕ್ಕಿಂತ ಭಿನ್ನ. ಕುಂಜಿರಾಯ ನೇಮದಲ್ಲಿ ಒಲಿಮದೆ ಪ್ರಮುಖವಾದುದು. ದೈವಸ್ಥಾನದ ಕೊಡಿಯಡಿ ಮುಂಭಾಗ ತಾಳೆ ಮರದ ಗರಿಯಿಂದ ಒಂದು ಕೋಣೆಯಂತೆ ನಿರ್ಮಿಸಲಾಗುತ್ತದೆ. ಇದಕ್ಕೆ ಒಲಿಮದೆ ಎನ್ನುತ್ತಾರೆ. ಇದರ ಒಳಭಾಗದಲ್ಲಿ ದೈವ ನರ್ತಕ ಬಣ್ಣ ಬಳಿದು ನೇಮಕ್ಕೆ ಅಣಿಯಾಗುತ್ತಾರೆ. ನೇಮಕ್ಕೆ ತಯಾರಾದ ಅನಂತರ ದೈವಸ್ಥಾನದ ಮುಕ್ಕಾಲ್ದಿಯವರು ಧಾರ್ಮಿಕ ಕಾರ್ಯಕ್ರಮ ಮುಗಿಸಿ ಒಲಿಮದೆಗೆ ಪೂಜೆ ಸಲ್ಲಿಸುತ್ತಾರೆ. ಅನಂತರ ಒಲಿಮದೆಯನ್ನು ಒಡೆದು ಹೊರಬರುವ ಮೂಲಕ ಅರಸು ಕುಂಜಿರಾಯರ ನೇಮ ಪ್ರಾರಂಭವಾಗುತ್ತದೆ.

ಅರಸು ಕುಂಜಿರಾಯ ನಂಬಿದವರಿಗೆ ಇಂಬು ಕೊಡುವ ಕಾರಣಿಕದ ದೈವ. ಇತ್ತೀಚಿನ ಕೆಲವು ವರ್ಷಗಳಲ್ಲಿ ಅರಸು ಕುಂಜಿರಾಯರ ಸನ್ನಿದಿಯಲ್ಲಿ ಜಾರಂದಾಯನ ಪಲ್ಲಕ್ಕಿ ಪವಾಡ ನಡೆಯುತ್ತದೆ. ಇದು ಅತ್ಯಂತ ವಿಶೇಷ. 15ರಿಂದ 20 ಜನ ಪಲ್ಲಕ್ಕಿ ನಿಯಂತ್ರಿಸಲು ಪ್ರಯತ್ನಪಟ್ಟರೂ ನಿಯಂತ್ರಣಕ್ಕೆ ಬರದಷ್ಟೂ ಅವೇಶಕ್ಕೊಳಗಾಗುತ್ತದೆ. ಇದು ದೈವದ ಕಾರಣಿಕವೇ ಸರಿ.
|ಚರಣ್ ಜೆ ಶೆಟ್ಟಿ ಕೊಜಪಾಡಿ ಬಾಳಿಕೆ, ಅತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನ ಅಧ್ಯಕ್ಷ