ಹೆಂಡತಿಗಾಗಿ ಆರು ಗಂಟೆ ವಿಮಾನದಲ್ಲಿ ನಿಂತಿದ್ದವನ ಕಾರ್ಯಕ್ಕೆ ಖುಷಿಯಾಗದ ನೆಟ್ಟಿಗರು ಮಹಿಳೆ ಮೇಲೆ ಸಿಟ್ಟಾಗಿದ್ಯಾಕೆ?

ನವದೆಹಲಿ: ತನ್ನ ಹೆಂಡತಿಯನ್ನು ಸಂತೋಷವಾಗಿಡಲು ಬಹಳಷ್ಟು ಕೆಲಸಗಳನ್ನು ಮಾಡುತ್ತಾನೆ. ಅಡುಗೆಮನೆಯಲ್ಲಿ ಸಹಾಯ ಮಾಡುವುದು, ಮನೆಗೆಲಸ ಮಾಡುವುದು ಅಥವಾ ಕಸವನ್ನು ತೆಗೆಯುವುದು ಸೇರಿ ಸಂಬಂಧವನ್ನು ಆರೋಗ್ಯಕರವಾಗಿಡಲು ಹಲವು ಸಣ್ಣಪುಟ್ಟ ಕೆಲಸಗಳನ್ನು ಮಾಡಿ ಹೆಂಡತಿಯನ್ನು ಖುಷಿಯಾಗಿಡುತ್ತಾನೆ. ಆದರೆ ಇಲ್ಲೊಬ್ಬ ಹೆಂಡತಿಯ ಉತ್ತಮ ನಿದ್ದೆಗಾಗಿ ತನ್ನ ಸೀಟನ್ನೇ ತ್ಯಾಗ ಮಾಡಿದ್ದಾನೆ.

ಆರು ಗಂಟೆಗಳ ವಿಮಾನ ಪ್ರಯಾಣದ ಸಮಯದಲ್ಲಿ ಕರುಣಾಮಯಿ ಪತಿ ತನ್ನ ಹೆಂಡತಿಗಾಗಿ ನಿಸ್ವಾರ್ಥ ಕಾರ್ಯವನ್ನು ಕೈಗೊಂಡಿದ್ದು, ಇವರ ಈ ಕಾರ್ಯವು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಸೆಳೆಯುವಲ್ಲಿ ಮಾತ್ರ ಹಿಂದೆ ಬಿದ್ದಿದೆ.

ನಂಬಿದರೆ ನಂಬಿ ಇಲ್ಲ ಬಿಡಿ ಇಲ್ಲೊಬ್ಬ ಪತಿರಾಯ ತಮ್ಮ ಆರು ಗಂಟೆಗಳ ವಿಮಾನಯಾನದ ವೇಳೆಯಲ್ಲಿ ತನ್ನ ಹೆಂಡತಿಯು ಸುಖವಾಗಿ ನಿದ್ದೆ ಮಾಡಲೆಂದು ತನ್ನ ಸೀಟನ್ನು ಬಿಟ್ಟುಕೊಟ್ಟಿದ್ದಾನೆ. ಈ ದೃಶ್ಯವನ್ನು ಸಹಪ್ರಯಾಣಿಕರೊಬ್ಬರು ಕ್ಲಿಕ್ಕಿಸಿ, ಈ ವ್ಯಕ್ತಿ ಇಡೀ ಆರು ಗಂಟೆಗಳ ಕಾಲ ಎದ್ದುನಿಂತಿದ್ದರಿಂದಾಗಿ ಆದ್ದರಿಂದ ಅವನ ಹೆಂಡತಿ ಮಲಗಲು ಸಾಧ್ಯವಾಯಿತು. ಈಗ ಅದು ಪ್ರೀತಿ ಎಂದು ಬರೆದು ಟ್ವೀಟ್‌ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿರುವ ಈ ಟ್ವೀಟ್‌ಗೆ ಮತ್ತೆ ಕೆಲವರು ಹೆಂಡತಿಯ ಮೇಲೆ ಗರಂ ಆಗಿದ್ದಾರೆ. ಹಲವರು ಸ್ವಾರ್ಥಿ ಎಂದಿದ್ದರೆ, ಮತ್ತೆ ಕೆಲವರು ಭಯಾನಕ ಹೆಂಡತಿ ಎಂದಿದ್ದಾರೆ.
ದಯವಿಟ್ಟು ಈ ಪ್ರೀತಿ ಹೇಗೆ? ನಿಮ್ಮ ಸಂಗಾತಿಯನ್ನು ನೀವು ಸ್ವಯಿಚ್ಛೆಯಿಂದ ಒತ್ತಡಕ್ಕೆ ಒಳಪಡಿಸುತ್ತಿದ್ದೀರಿ. ನಿಮ್ಮ ತಲೆಯನ್ನು ಅವನ ತೊಡೆಯ ಮೇಲಿಟ್ಟು ವಿಶ್ರಾಂತಿ ಪಡೆಯಲು ಏನಾಗಿತ್ತು? ಎಂದು ಒಬ್ಬರು ಟ್ವೀಟ್‌ ಮಾಡಿದ್ದರೆ, ನನ್ನ ಸಂಗಾತಿಯನ್ನು 10 ನಿಮಿಷವೂ ನಿಲ್ಲಲು ನಾನು ಬಿಡುವುದಿಲ್ಲ. ಆತನ ತೊಡೆಯ ಮೇಲೆಯೇ ಮಲಗಿ ನಾನಿನ್ನು ಸುಖನಿದ್ರೆ ಮಾಡುತ್ತಿದ್ದೆ ಅಥವಾ ಖುರ್ಚಿಯಲ್ಲೇ ವಿಶ್ರಮಿಸುತ್ತಿದ್ದೆ. ಆರು ಗಂಟೆ ಏಕೆ ನಿಮ್ಮವರನ್ನು ನಿಲ್ಲಲು ಬಿಟ್ಟಿರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಮತ್ತೆ ಕೆಲವರು ಈ ಘಟನೆಯ ಕುರಿತೇ ಅನುಮಾನ ವ್ಯಕ್ತಪಡಿಸಿದ್ದಾರೆ. ವಿಮಾನ ಚಲಿಸುವಾಗ ಮಧ್ಯೆ ಪ್ರಯಾಣಿಕರನ್ನು ನಿಲ್ಲಲು ಬಿಡುವುದಿಲ್ಲ. ಹೀಗಿದ್ದಾಗ ಆರು ಗಂಟೆ ನಿಲ್ಲಲು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದ್ದಾರೆ. (ಏಜೆನ್ಸೀಸ್)