ಟ್ರಂಪ್​, ಕಿಮ್​​ ಐತಿಹಾಸಿಕ ಭೇಟಿಗೆ ಸಾಕ್ಷಿಯಾದ ಸಿಂಗಾಪುರ

ನವದೆಹಲಿ: ಇಡೀ ವಿಶ್ವವೇ ಕುತೂಹಲದಿಂದ ಎದುರು ನೋಡುತ್ತಿದ್ದ, ವಿಶ್ವದ ಬದ್ಧ ವೈರಿಗಳು ಎಂದು ಕರೆಯಲ್ಪಡುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮತ್ತು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್​ ಸಿಂಗಾಪುರದಲ್ಲಿ ಮುಖಾಮುಖಿಯಾಗಿದ್ದಾರೆ.

ಸಿಂಗಾಪುರದ ಸೆಂಟೋಸಾ ದ್ವೀಪದಲ್ಲಿರೋ ಕ್ಯಾಪೆಲ್ಲ ಹೋಟೆಲ್​ನಲ್ಲಿ ಉಭಯ ರಾಷ್ಟ್ರಗಳ ನಾಯಕರು ಹಸ್ತಲಾಘವ ಮಾಡುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ದ್ವಿಪಕ್ಷೀಯ ಮಾತುಕತೆಯಲ್ಲಿ ವಿಶ್ವ ನಾಯಕರೊಡನೆ ಭಾಷಾಂತರಕಾರರಿದ್ದರು.

ಬಳಿಕ ಪರಸ್ಪರ ಉಭಯ ಕುಶಲೋಪರಿ ನಡೆಸಿದರು. ಇದೇ ವೇಳೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಟ್ರಂಪ್​ ಇದೊಂದು ಐತಿಹಾಸಿಕ ಭೇಟಿಯಾಗಿದ್ದು, ನಮ್ಮ ಸಂಬಂಧ ವೃದ್ಧಿಗೆ ಇದು ಅಡಿಗಲ್ಲು ಎಂದು ಹೇಳಿದರು.

ಭೇಟಿ ಬಗ್ಗೆ ಮಾತನಾಡಿರುವ ಕಿಮ್​ ನಾನಿಲ್ಲಿರುವುದು ಸುಲಭ ಮಾತಲ್ಲ. ಹಳೆಯ ಪೂರ್ವಾಗ್ರಹ ವಿಚಾರಗಳು ಅಡೆತಡೆಗಳಾಗಿ ಕೆಲಸ ಮಾಡಿದೆ. ಆದರೆ, ಅದನ್ನು ದಾಟಿ ನಾವು ಇಲ್ಲಿಗೆ ಬಂದಿದ್ದೇವೆ. ನಮ್ಮ ನಡುವಿನ ಸಂಬಂಧ ಉತ್ತಮ ರೀತಿಯಲ್ಲಿ ವೃದ್ಧಿಯಾಗಲಿದೆ ಎಂದು ತಿಳಿಸಿದರು.

ಉತ್ತರ ಕೊರಿಯಾ ಈ ಹಿಂದೆ ಅಣ್ವಸ್ತ್ರ ಪರೀಕ್ಷೆ ಮೂಲಕ ವಿಶ್ವದ ದೊಡ್ಡಣ್ಣಗೆ ಸೆಡ್ಡು ಹೊಡೆದಿತ್ತು. ಆಗ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರಿಗೆ ಟ್ರಂಪ್​ ಸರ್ವನಾಶದ ಎಚ್ಚರಿಕೆ ನೀಡಿದ್ದರು. ಸದ್ಯ ಎರಡು ರಾಷ್ಟ್ರಗಳ ಅಧ್ಯಕ್ಷರು ಪ್ರತ್ಯೇಕ ಸಭೆ ನಡೆಸ್ತಿದ್ದು, ಸಭೆ ಬಳಿಕ ಅಲ್ಲಿ ಚರ್ಚೆಯಾದ ವಿಷಯಗಳನ್ನ ಮಾಧ್ಯಮಗಳ ಮುಂದೆ ತಿಳಿಸುವ ಸಾಧ್ಯತೆ ಇದೆ. (ಏಜೆನ್ಸೀಸ್​)

 

Leave a Reply

Your email address will not be published. Required fields are marked *