ಅಣ್ವಸ್ತ್ರ ತ್ಯಾಗಕ್ಕೆ ಕಿಮ್ ಜಾಂಗ್ ಸಮ್ಮತಿ

ಸಿಂಗಾಪುರ: ಅಣ್ವಸ್ತ್ರಗಳ ವಿಚಾರದಲ್ಲಿ ಪರಸ್ಪರ ಕತ್ತಿಮಸೆಯುತ್ತಿದ್ದ ಅಮೆರಿಕ ಹಾಗೂ ಉತ್ತರ ಕೊರಿಯಾ 7 ದಶಕಗಳ ವೈಷಮ್ಯಗಳನ್ನು ಬದಿಗೊತ್ತಿ ಪರಸ್ಪರ ಕೈಜೋಡಿಸಿವೆ. ಸಿಂಗಾಪುರದಲ್ಲಿ ಮಂಗಳವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಿದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕೊನೆಗೂ ಅಣ್ವಸ್ತ್ರ ನಿಶ್ಶಸ್ತ್ರೀಕರಣಕ್ಕೆ ಸಮ್ಮತಿ ಸೂಚಿಸಿದ್ದಾರೆ. ಇದೂ ಸೇರಿದಂತೆ ಹಲವು ಮಹತ್ವದ ದಾಖಲೆಗಳಿಗೆ ಉಭಯ ನಾಯಕರು ಅಂಕಿತ ಹಾಕಿದ್ದಾರೆ.

ಅಣ್ವಸ್ತ್ರ ನಿಶ್ಶಸ್ತ್ರೀಕರಣಕ್ಕೆ ಕಿಮ್ ಒಪ್ಪಿಗೆ ನೀಡಿದ್ದು, ಶೀಘ್ರವೇ ಆ ವಿಚಾರದಲ್ಲಿ ಕಾರ್ಯಪ್ರವೃತ್ತರಾಗಲಿದ್ದಾರೆ. ಹಳೆಯ ವಿಚಾರಗಳನ್ನು ಮರೆಯುವ ನಿರ್ಧಾರ ಕೈಗೊಂಡಿದ್ದೇವೆ. ಇನ್ನು ಮುಂದೆ ಹೊಸ ಹೊಸ ಬೆಳವಣಿಗೆಯನ್ನು ಕಾಣುತ್ತೀರಿ.

| ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ

 

ನಿಜಕ್ಕೂ ಇದೊಂದು ಐತಿಹಾಸಿಕ ಸಭೆಯಾಗಿತ್ತು. ಮುಂಬರುವ ದಿನಗಳಲ್ಲಿ ಉಭಯ ರಾಷ್ಟ್ರಗಳ ನಡುವೆ ಉತ್ತಮ ಬಾಂಧವ್ಯವನ್ನು ಕಾಣಲಿದ್ದೀರಿ.

| ಕಿಮ್ ಜಾಂಗ್ ಉನ್, ಉತ್ತರ ಕೊರಿಯಾ ಸರ್ವಾಧಿಕಾರಿ

 

ಒಪ್ಪಂದದ ಅಂಶಗಳು

 • 2018ರ ಪನ್​ವುುನ್​ಜೋಮ್ ಘೋಷಣೆಯಂತೆ ಸಂಪೂರ್ಣ ನಿಶ್ಶಸ್ತ್ರೀಕರಣದ ಭರವಸೆಯಿಂದ ಹಿಂದೆ ಸರಿಯುವುದಿಲ್ಲ-ಕಿಮ್ ವಾಗ್ದಾನ
 • ಇದಕ್ಕೆ ಪ್ರತಿಯಾಗಿ ಕೊರಿಯಾ ಪರ್ಯಾಯ ದ್ವೀಪದಲ್ಲಿ ಮಿಲಿಟರಿ ಕಾರ್ಯಾಚರಣೆ ಸ್ಥಗಿತ, ಅಮೆರಿಕ ಸೇನೆ ಹಿಂದಕ್ಕೆ ಕರೆಯಿಸಿಕೊಳ್ಳುವ ಭರವಸೆ ನೀಡಿದ ಟ್ರಂಪ್
 • ಯುದ್ಧ ಕೈದಿಗಳು, ಕಣ್ಮರೆಯಾದವರಲ್ಲಿ ಪತ್ತೆಯಾದವರ ವಿನಿಮಯಕ್ಕೆ ಸಹಮತ

ವಿಶ್ವಶಾಂತಿಯ ಭರವಸೆ

ಜಗತ್ತಿನಲ್ಲಿ ತೃತೀಯ ಮಹಾಯುದ್ಧದ ಭೀತಿ ಹರಡಿದ್ದ ಉತ್ತರ ಕೊರಿಯಾ ಮತ್ತು ಅಮೆರಿಕ ನಡುವಿನ ಸಂಘರ್ಷ ಮಂಗಳವಾರ ರ್ತಾಕ ಅಂತ್ಯ ಕಂಡಿದೆ. ಸಿಂಗಾಪುರದ ಸೆಂಟೊಸಾ ದ್ವೀಪದ ಕ್ಯಾಪೆಲ್ಲಾ ಐಷಾರಾಮಿ ರೆಸಾರ್ಟ್ ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉ.ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ನಡುವಿನ ಐತಿಹಾಸಿಕ ಭೇಟಿ ಮಹತ್ವದ ಒಪ್ಪಂದದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಈ ವಿದ್ಯಮಾನ ವಿಶ್ವ ‘ಶಾಂತಿ’ಯ ಭರವಸೆಯನ್ನು ತೋರಿ, ನೆಮ್ಮದಿ ಹರಡುವಂತೆ ಮಾಡಿದೆ.

ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ನಡುವಣ ದ್ವಿಪಕ್ಷೀಯ ಶೃಂಗ ಯಾವುದೇ ಅಡ್ಡಿ- ಆತಂಕಗಳಿಲ್ಲದೆ ಮಂಗಳವಾರ ಯಶಸ್ವಿಯಾಗಿ ನಡೆಯಿತು. ಕೊರಿಯಾ ಪರ್ಯಾಯ ದ್ವೀಪದಲ್ಲಿ ನಿಶ್ಶಸ್ತ್ರೀಕರಣದ ಸಮಗ್ರ ಒಪ್ಪಂದಕ್ಕೆ ಉಭಯ ಮುಖಂಡರು ಸಹಿ ಹಾಕಿದರು. ಶಾಂತಿ ಮತ್ತು ಸ್ಥಿರತೆಯ ಜಂಟಿ ಪ್ರಯತ್ನಕ್ಕೆ ಬದ್ಧತೆ ವ್ಯಕ್ತಪಡಿಸಿದರು. 2018ರ ಏಪ್ರಿಲ್ 27ರ ಪನ್​ವುುನ್​ಜೋಮ್ ಘೋಷಣೆಯಂತೆ ಸಂಪೂರ್ಣ ನಿಶ್ಶಸ್ತ್ರೀಕರಣದ ಭರವಸೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಕಿಮ್ ವಾಗ್ದಾನ ಮಾಡಿದರು. ಇದಕ್ಕೆ ಪ್ರತಿಯಾಗಿ ಕೊರಿಯಾ ಪರ್ಯಾಯ ದ್ವೀಪದಲ್ಲಿ ಮಿಲಿಟರಿ ಕಾರ್ಯಾಚರಣೆ ಸ್ಥಗಿತ, ಅಮೆರಿಕ ಸೇನೆ ಹಿಂದಿಕ್ಕೆ ಕರೆಯಿಸಿಕೊಳ್ಳುವ ಭರವಸೆಯನ್ನು ಟ್ರಂಪ್ ನೀಡಿದರು. ಎರಡೂ ದೇಶಗಳ ನಿಯೋಗದ ಸಭೆ ಹೊರತಾಗಿ ಕಿಮ್ ಟ್ರಂಪ್ ನೇರ ಮಾತುಕತೆ ನಡೆಸಿದರು.

ದಿನದ ಬೆಳವಣಿಗೆ

 • ಟ್ರಂಪ್​ಗಿಂತ ಮುಂಚೆ ಕ್ಯಾಪೆಲ್ಲಾ ರೆಸಾರ್ಟ್​ಗೆ ಬಂದ ಕಿಮ್ (ಕಿರಿಯರು ಮೊದಲು ಬಂದು ಹಿರಿಯರಿಗೆ ಗೌರವ ತೋರಬೇಕು ಎಂಬುದು ಉತ್ತರ ಕೊರಿಯಾದ ಸಂಪ್ರದಾಯ).
 • ದ್ವಿಪಕ್ಷೀಯ ಶೃಂಗ ಆರಂಭವಾಗುವುದಕ್ಕೆ ಒಂದು ನಿಮಿಷ ಮೊದಲು ಸಭಾಂಗಣಕ್ಕೆ ಬಂದ ಟ್ರಂಪ್.
 • ಸಭೆ ಆರಂಭವಾದಾಗ ಉಭಯ ಮುಖಂಡರು ಬಿಗುವಿನಿಂದಲೆ ಇದ್ದರು. 13 ಸೆಕೆಂಡ್ ಕಾಲ ಹಸ್ತಲಾಘವ ನೀಡಿ, ಮಾಧ್ಯಮದವರಿಗೆ ನಗೆ ಬೀರಿದರು.
 • ಉಭಯ ಮುಖಂಡರ ಮುಖಾಮುಖಿ ಗ್ರಂಥಾಲಯದಲ್ಲಿ ನಡೆಯಿತು. 40 ನಿಮಿಷ ಮಾತುಕತೆ ನಡೆಸಿದರು.
 • ಭೋಜನದ ನಂತರ ಟ್ರಂಪ್- ಕಿಮ್ ವಾಯುವಿಹಾರ ನಡೆಸಿದರು.
 • ಸೆಂಟೊಸಾ ದ್ವೀಪದ ಸುತ್ತ ಸಿಂಗಾಪುರ ನೌಕಾ ದಳ ಮತ್ತು ವಾಯು ಪಡೆಯ ಅಪಾಚೆ ಹೆಲಿಕಾಪ್ಟರ್​ಗಳ ಗಸ್ತು. ಯುದ್ಧ ವಿಮಾನಗಳು ಮತ್ತು ಗಲ್ಪ್ ಸ್ಟ್ರೀಮ್ 550 ವಿಮಾಗಳು ಕಟ್ಟೆಚ್ಚರದಲ್ಲಿದ್ದವು.
 • ಕಿಮ್ ಸಿಂಗಾಪುರದಿಂದ ಮಂಗಳವಾರ ಮಧ್ಯಾಹ್ನದ ನಂತರ ಹೊರಟರೆ, ಟ್ರಂಪ್ ಸಂಜೆ ಹೊತ್ತಿಗೆ ತೆರಳಿದರು.
 • ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೆ ಇನ್ ಮತ್ತು ಜಪಾನ್ ಪ್ರಧಾನಿ ಶಿಂಜೊ ಅಬೆಗೆ ಕರೆ ಮಾಡಿದ್ದ ಟ್ರಂಪ್

ಕಿಮ್ ಗೆ ವಿಡಿಯೋ ತೋರಿಸಿದ ಟ್ರಂಪ್

ಶಾಂತಿಗೆ ಸಹಕರಿಸಿದರೆ ಆದರಿಂದ ದೊರೆಯುವ ಲಾಭ ಏನು ಎಂಬುದನ್ನು ಮನವರಿಕೆ ಮಾಡಿಕೊಡಲು ಕಿಮ್ ಜಾಂಗ್ ಉನ್​ಗೆ ಹಾಲಿವುಡ್ ಮಾದರಿಯ ‘ಇಬ್ಬರು ವ್ಯಕ್ತಿಗಳು ಇಬ್ಬರು ಮುಖಂಡರು ಒಂದು ದೈವ’ ಎಂಬ ಶೀರ್ಷಿಕೆಯ ವಿಡಿಯೋ ಒಂದನ್ನು ಟ್ರಂಪ್ ತೋರಿಸಿದ್ದಾರೆ. ‘ಇನ್ ಎ ವರ್ಲ್ಡ್’ ಮತ್ತು ‘ಒನ್ ಮ್ಯಾನ್, ಒನ್ ಚಾಯ್್ಸ ಹಾಲಿವುಡ್ ಆಕ್ಷನ್ ಸಿನಿಮಾ ಆಧರಿಸಿ ಚಿತ್ರೀಕರಿಸಿದ ವಿಡಿಯೋ ಇದಾಗಿದ್ದು, 72 ವರ್ಷದ ಟ್ರಂಪ್ ಮತ್ತು 36 ವರ್ಷದ ಕಿಮ್ ಅವರನ್ನು ಪಾತ್ರಗಳನ್ನಾಗಿ ಸೃಷ್ಟಿಸಿರುವ ದೃಶ್ಯಗಳು ಇದ್ದವು. ಜನನಾಯಕ ಆಗಲು ಕಿಮ್ೆ ಎಲ್ಲ ಅವಕಾಶಗಳು ಇವೆ. ಹಿಂದೆಂದೂ ಕಂಡರಿಯದ ಅಭ್ಯುದಯವನ್ನು ಸಾಧಿಸಲು ದಾರಿಗಳಿವೆ ಎಂಬ ಆಶಯ ಈ ವಿಡಿಯೋದಲಿತ್ತು.

ಮಾತುಕತೆ ಝುಲಕ್

‘ನಿಮ್ಮನ್ನು ಭೇಟಿಯಾಗುತ್ತಿರುವುದು ಸಂತಸದ ವಿಷಯ’ ಎಂದು ಕಿಮ್ ಹೇಳಿದರೆ, ‘ನಿಮ್ಮ ಗೌರವಕ್ಕೆ ಆಭಾರಿ, ನಮ್ಮಿಬ್ಬರ (ಎರಡೂ ದೇಶಗಳ) ಮಧ್ಯೆ ಅತ್ಯುತ್ತಮ ಬಾಂಧವ್ಯ ಏರ್ಪಡಲಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ’ ಎಂದು ಟ್ರಂಪ್ ಪ್ರತಿಕ್ರಿಯಿಸಿದರು. ‘ಇಡೀ ವಿಶ್ವವೆ ಈ ದೃಶ್ಯವನ್ನು ನಿಬ್ಬೆರಗಿನಿಂದ ನೋಡುತ್ತಿದೆ. ಕೆಲವರಿಗೆ ಈ ಭೇಟಿ ಸಿನಿಮೀಯ ಎನಿಸಿದರು ಅಚ್ಚರಿ ಇಲ್ಲ’ ಎಂದು ಕಿಮ್ ಉದ್ಗಾರ ತೆಗೆದರೆ, ‘ನಾವು ಎಲ್ಲ ಬಗೆಯ ಸಂದೇಹ ಮತ್ತು ಊಹೆಗಳಿಂದ ಹೊರಬರಬೇಕಿದೆ. ಈ ಶೃಂಗವು ಶಾಂತಿ ಸ್ಥಾಪನೆಗೆ ಉತ್ತಮ ಬುನಾದಿ’ ಎಂದರು.

ಜಂಟಿ ಹೇಳಿಕೆ

 • ಅಮೆರಿಕ ಮತ್ತು ಉತ್ತರ ಕೊರಿಯಾದ ಜನತೆಯ ಆಶೋತ್ತರದಂತೆ ಶಾಂತಿ ಮತ್ತು ಅಭ್ಯುದಯದ ಮೈತ್ರಿಗೆ ಬದ್ಧತೆ.
 • ಪಿಇಡಬ್ಲ್ಯೂ/ಎಂಐಎ (ವಿಯೆಟ್ನಾಂ ಯುದ್ಧ ಸಂದರ್ಭದಲ್ಲಿ ಅಮೆರಿಕ ಕೈದಿಗಳ ಕುಟುಂಬದವರು ಮತ್ತು ಆಗ್ನೇಯ ಏಷ್ಯಾದಲ್ಲಿ ಕಣ್ಮರೆಯಾದವರು ರಚಿಸಿಕೊಂಡ ವೇದಿಕೆ)ನ ಯುದ್ಧ ಕೈದಿಗಳು ಮತ್ತು ಕಣ್ಮರೆಯಾದವರಲ್ಲಿ ಪತ್ತೆಯಾದವರ ವಿನಿಮಯಕ್ಕೆ ಒಪ್ಪಿಗೆ ಈಗಾಗಲೇ ಗುರುತಿಸಿದವರನ್ನು ಶೀಘ್ರ ರವಾನೆ

ಭೋಜನದ ಮೆನು

 • ಪೂರ್ವ ಹಾಗೂ ಪಶ್ಚಿಮದ ರಸಪಾಕ
 • ವೆಸ್ಟ್​ಇಂಡೀಸ್​ನ ಆವಕಾಡೊ ಹಣ್ಣಿನ ಸಲಾಡ್
 • ಆಗ್ನೇಯ ಏಷ್ಯಾದ ಹಸಿರು ಮಾವಿನ ಹಣ್ಣು,
 • ಆಲೂಗೆಡ್ಡೆಯ ಡೌಫಿನೋಯಿಸ್ ಖಾದ್ಯ
 • ಹಬೆಯಲ್ಲಿ ಬೇಯಿಸಿದ ಬ್ರಾಕಲಿ, ಫ್ರೈಡ್ ರೈಸ್
 • ದನ, ಹಂದಿ ಮಾಂಸದ ಖಾದ್ಯ
 • ಫ್ರೆಶ್ ಅಕ್ಟೋಪಸ್, ಸಿಗಡಿ ಕಾಕ್​ಟೇಲ್
 • ಉ.ಕೊರಿಯಾದ ವಿಶೇಷ ಖಾದ್ಯ ಒಸಿಸನ್ (ಮಸಾಲೆ ಹಾಕಿ ಬೇಯಿಸಿದ ಸೌತೆಕಾಯಿ), ಡೇಗು ಜೋರಿಮ್ (ಒಂದು ಬಗೆಯ ಹುರಿದ ಮೀನಿನ ಜತೆಗೆ ಮೂಲಂಗಿ ಮತ್ತು ಏಷ್ಯಾದ ತರಕಾರಿಗಳ ಅಲಂಕಾರ)
 • ಡಾರ್ಕ್, ಚಾಕೊಲೆಟ್ ಟಾರ್ಟ್ಲೆಟ್ ಗ್ಯಾನಚೆ, ಹಾಗೆನ್ ದಯಾಜ್ ವೆನಿಲ್ಲಾ ಐಸ್ಕ್ರೀಮ್

 

ಟ್ರಂಪ್ ಉವಾಚ

 • ನಾವು ವಿಶ್ವದ ದೊಡ್ಡ ಸಮಸ್ಯೆಯನ್ನು ಬಗೆಹರಿಸಿದ್ದೇವೆ. ಬಹುದಿನದ ಗೊಂದಲ ನಿವಾರಣೆ ಆಗಿದೆ. ಉ.ಕೊರಿಯಾದಲ್ಲಿ ನಿಶ್ಶಸ್ತ್ರೀಕರಣ ಪ್ರಕ್ರಿಯೆ ಶೀಘ್ರ ಆರಂಭವಾಗಲಿದೆ.
 • ದಕ್ಷಿಣ ಕೊರಿಯಾದ ಜತೆ ಜಂಟಿ ಸಮರಾಭ್ಯಾಸ ಸ್ಥಗಿತದ ಭರವಸೆ.ಕಿಮ್ ಅತಿ ಪ್ರತಿಭಾವಂತ ಯುವಕ, ಅವರನ್ನು ಅಮೆರಿಕಕ್ಕೆ ಸೂಕ್ತ ಸಮಯದಲ್ಲಿ ಆಹ್ವಾನಿಸುವೆ. ಸಂದರ್ಭ ಬಂದಾಗ ಉತ್ತರ ಕೊರಿಯಾಕ್ಕೆ ಭೇಟಿ.

ಕಿಮ್ ಹೇಳಿದ್ದು

 • ಯಾರೊಬ್ಬರೂ ನಿರೀಕ್ಷೆ ಮಾಡದ ರೀತಿ ಯಲ್ಲಿ ಈ ಮಾತುಕತೆ ಯಶಸ್ವಿಯಾಗಿದೆ.
 • ಬಹು ಮಹತ್ವದ ಬದಲಾವಣೆಗೆ ವಿಶ್ವ ಸಾಕ್ಷಿಯಾಗಲಿದೆ
 • ಹಳೆಯದ್ದನ್ನು ಮರೆತಿದ್ದೇವೆ. ಬದಲಾವಣೆಗೆ ತೆರೆದುಕೊಂಡಿದ್ದೇವೆ.

 

ಟ್ರಂಪ್ ನೋಡಲು ಒಂದು ರಾತ್ರಿಗೆ 38,000 ರೂ. ಖರ್ಚು!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರನ್ನು ನೋಡಬೇಕೆಂದು ಬಯಸಿದ ಭಾರತೀಯ ಮೂಲದ ಮಲೇಷ್ಯಾದ ಯುವಕ ಮಹಾರಾಜ್ ಮೋಹನ್(25) ಶಾಂಗ್ರಿಲಾ ಹೋಟೆಲ್​ನಲ್ಲಿ ಒಂದು ರಾತ್ರಿ ಉಳಿದುಕೊಳ್ಳಲು -ಠಿ; 38 ಸಾವಿರ (573 ಡಾಲರ್) ಖರ್ಚು ಮಾಡಿದ್ದಾನೆ! ಆದರೆ, ಆತನಿಗೆ ಟ್ರಂಪ್ ದರ್ಶನ ಭಾಗ್ಯ ದೊರಕಿದ್ದು ಕ್ಷಣ ಮಾತ್ರ. ಬೆಳಗ್ಗೆ 8ರ ಸುಮಾರಿಗೆ ಶೃಂಗಸಭೆಗೆ ಹೋಗಲು ಕಾರಿನ ಕಡೆಗೆ ಹೋಗುತ್ತಿದ್ದ ಟ್ರಂಪ್​ರನ್ನು ಮೋಹನ್ ಕಂಡು ಪುಳಕಿತನಾದ. ರಸ್ತೆ ಬದಿ ನಿಂತು ಕಾರಿನ ಜತೆಗೆ ಸೆಲ್ಪಿ ತೆಗೆದುಕೊಂಡ ಘಟನೆಯನ್ನು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.


ಟ್ರಂಪ್-ಕಿಮ್ ಮಾತುಕತೆ ಭೂಮಿಕೆ

2017

 • ಮಾ. 7: ಉ.ಕೊರಿಯಾದ ಅಣ್ವಸ್ತ್ರ ಬೆದರಿಕೆ ಹೊಸ ಸ್ತರಕ್ಕೆ ಮುಟ್ಟಿದೆ- ಅಮೆರಿಕದ ಶ್ವೇತಭವನ ಹೇಳಿಕೆ (ಜಪಾನ್​ನತ್ತ 4 ಕ್ಷಿಪಣಿ ಹಾರಿಸಿದ ಸಂದರ್ಭ)
 • ಏ. 27: ಉ.ಕೊರಿಯಾ ಜತೆಗಿನ ಸಂಘರ್ಷ ತೀವ್ರಗೊಳ್ಳುತ್ತಿದ್ದು, ರಾಜಕೀಯವಾಗಿ ಪರಿಹಾರ ಹುಡುಕಬೇಕೆಂದ ಟ್ರಂಪ್
 • ಮೇ 24: ಅಣ್ವಸ್ತ್ರಗಳನ್ನು ಹೊಂದಿರುವ ಹುಚ್ಚು ಮನುಷ್ಯ- ಕಿಮ್ೆ ಟ್ರಂಪ್ ಟೀಕೆ
 • ಜೂ.1: ಉ.ಕೊರಿಯಾದ ಅಣ್ವಸ್ತ್ರ ಯೋಜನೆ ಜತೆ ನೇರ, ಪರೋಕ್ಷ ಸಂಪರ್ಕ ಹೊಂದಿದವರ ಮೇಲೆ ಅಮರಿಕ ನಿರ್ಬಂಧ
 • ಜು. 4: ಜಪಾನ್ ಸಮುದ್ರದತ್ತ ದೂರಗಾಮಿ ಕ್ಷಿಪಣಿ ಹಾರಿಸಿದ ಉ.ಕೊರಿಯಾ.
 • ಆ. 9: ಅಮೆರಿಕ ಒಡೆತನದ ಶಾಂತ ಸಾಗರದ ಗುಯಾಮ್ ಪ್ರದೇಶದ ಬಳಿ ಬಿದ್ದ ಉ.ಕೊರಿಯಾ ಕ್ಷಿಪಣಿ. ಉಭಯ ದೇಶಗಳ ಮಧ್ಯೆ ಉದ್ವಿಗ್ನ ಸ್ಥಿತಿ ನಿರ್ಮಾಣ
 • ಸೆ.19: ಉ.ಕೊರಿಯಾವನ್ನು ಸರ್ವನಾಶ ಮಾಡುವುದಾಗಿ ವಿಶ್ವಸಂಸ್ಥೆ ಮಹಾಅಧಿವೇಶನದಲ್ಲಿ ಗುಡುಗಿದ ಟ್ರಂಪ್. ಇದಕ್ಕೆ ಪ್ರತಿಕ್ರಿಯಿಸಿದ ಕಿಮ್ ಟ್ರಂಪ್​ಗೆ ಬುದ್ಧಿವಿಕಲ್ಪ, ಭೀತಿಗೊಂಡ ನಾಯಿ ಜೋರಾಗಿ ಬೊಗಳಿದಂತೆ ಇದೆ ಅವರ ಪ್ರಲಾಪ ಎಂದು ಟೀಕೆ
 • ಸೆ. 21: ಉ.ಕೊರಿಯಾ ಜತೆ ಹಣಕಾಸು, ವ್ಯಾಪಾರ ನಡೆಸುವ ದೇಶಗಳು ಮತ್ತು ಸಂಸ್ಥೆಗಳ ವಿರುದ್ಧ ಹೆಚ್ಚುವರಿ ನಿರ್ಬಂಧಕ್ಕೆ ಆದೇಶ ಹೊರಡಿಸಿದ ಅಮೆರಿಕ ಅಧ್ಯಕ್ಷ
 • ನ. 20: ಉ.ಕೊರಿಯಾ ಭಯೋತ್ಪಾದನೆ ಪ್ರಾಯೋಜಿಸುತ್ತಿದೆ ಎಂದು ಅಧಿಕೃತವಾಗಿ ಘೋಷಿಸಿದ ಟ್ರಂಪ್
 • ಡಿ. 22: ಉ.ಕೊರಿಯಾ ವಿರುದ್ಧ ಹೆಚ್ಚುವರಿ ನಿರ್ಬಂಧ ಹೇರುವ ನಿರ್ಣಯಕ್ಕೆ ವಿಶ್ವಸಂಸ್ಥೆಯಲ್ಲಿ ಅವಿರೋಧ ಒಪ್ಪಿಗೆ. ಇದರಿಂದ ಸಂಸ್ಕರಿತ ತೈಲ ಪೂರೈಕೆಯಲ್ಲಿ ಶೇ. 90ರಷ್ಟು ಕಡಿತ

 

2018

 • ಜ. 1: ಅಮೆರಿಕದ ಯಾವುದೇ ಬೆದರಿಕೆಯನ್ನು ಸಮರ್ಥ ವಾಗಿ ಎದುರಿಸುವ ಶಕ್ತಿ ಉ.ಕೊರಿಯಾಕ್ಕಿದೆ ಎಂದ ಕಿಮ್
 • ಫೆ.23: ಉ.ಕೊರಿಯಾದ ಶಿಪ್ಪಿಂಗ್, ವಾಣಿಜ್ಯೋ ದ್ಯಮ ಕಂಪನಿ, ನೌಕಾಯಾನ ಗುರಿಯಾಗಿಸಿ ಅಮೆರಿಕ ಹೊಸ ನಿರ್ಬಂಧ
 • ಮಾ.8: ಕೊರಿಯಾ ಪರ್ಯಾಯ ದ್ವೀಪದಲ್ಲಿ ಅಣ್ವಸ್ತ್ರಗಳ ನಿಶ್ಶಸ್ತ್ರೀಕರಣ ಕುರಿತು ರ್ಚಚಿಸಲು ಉಭಯ ನಾಯಕರಿಂದ ಜೂನ್​ಗೂ ಮೊದಲೇ ಭೇಟಿ ಎಂದು ಘೋಷಿಸಿದ ಅಮೆರಿಕ ಮತ್ತು ಉ.ಕೊರಿಯಾ
 • ಮಾ.25: ಅಧಿಕಾರ ವಹಿಸಿಕೊಂಡ ನಂತರ ಚೀನಾಕ್ಕೆ ಮೊದಲ ಭೇಟಿ ನೀಡಿದ ಕಿಮ್
 • ಮೇ 8: ಚೀನಾಕ್ಕೆ ಎರಡನೇ ಭೇಟಿ ನೀಡಿದ ಕಿಮ್ ಮತ್ತು ಟ್ರಂಪ್ ಭೇಟಿಗೆ ವೇದಿಕೆ ಸಿದ್ಧಪಡಿಸಲು ಉ.ಕೊರಿಯಾಕ್ಕೆ ಹೊರಟ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪೇ
 • ಮೇ 9: ಉಭಯ ಮುಖಂಡರ ಭೇಟಿಯ ಸ್ನೇಹ ದ್ಯೋತಕವಾಗಿ 3 ಅಮೆರಿಕನ್ನರನ್ನು ಸೆರೆಯಿಂದ ಬಿಡುಗಡೆ ಮಾಡಿದ ಉ.ಕೊರಿಯಾ
 • ಮೇ 10: ಸಿಂಗಾಪುರದಲ್ಲಿ ಜೂನ್ 12ರಂದು ಕಿಮ್ ಅವರನ್ನು ಭೇಟಿಯಾಗುವುದಾಗಿ ಘೋಷಿಸಿದ ಟ್ರಂಪ್
 • ಮೇ 15: ಅಮೆರಿಕ- ದ.ಕೊರಿಯಾ ಜಂಟಿ ಸಮರಾಭ್ಯಾಸದ ಹಿನ್ನೆಲೆಯಲ್ಲಿ ಟ್ರಂಪ್ ಮತ್ತು ಕಿಮ್ ಭೇಟಿ ರದ್ದು ಮಾಡುವುದಾಗಿ ಬೆದರಿಕೆ ಹಾಕಿದ ಉ.ಕೊರಿಯಾ
 • ಮೇ 24: ಅಣ್ವಸ್ತ್ರಗಳ ಪರೀಕ್ಷಾ ಕೇಂದ್ರ ಪಂಗ್ಗಿ-ರಿ ನೆಲಸಮ ಮಾಡಿದ್ದಾಗಿ ಹೇಳಿದ ಉ.ಕೊರಿಯಾ
 • ಮೇ 24: ದ್ವೇಷಕಾರುವ ಕಿಮ್ ಜತೆ ಮಾತುಕತೆ ನಡೆಸುವುದಿಲ್ಲ ಎಂದು ಘೋಷಿಸಿದ ಟ್ರಂಪ್. ಈ ಗೊಂದಲ ಹೋಗಲಾಡಿಸಲು ಅಮೆರಿಕ ಜತೆ ಸತತ ಮಾತುಕತೆ ನಡೆಸಿದ ಉ.ಕೊರಿಯಾದ ವಿದೇಶಾಂಗ ಸಚಿವ ಕಿಮ್ ಕೇ ಗ್ವಾನ್
 • ಜೂ 1: ಭೇಟಿ ರದ್ದು ನಿಲುವನ್ನು ಬದಲಿಸಿದ ಟ್ರಂಪ್, ಜೂನ್ 12ಕ್ಕೆ ಸಿಂಗಾಪುರದಲ್ಲಿ ಕಿಮ್ ಜತೆ ಮಾತುಕತೆ ಖಚಿತಗೊಳಿಸಿದರು
 • ಜೂ. 10: ಐತಿಹಾಸಿಕ ದ್ವಿಪಕ್ಷೀಯ ಶೃಂಗಸಭೆಗೆ ಎರಡು ದಿನ ಮೊದಲೆ ಸಿಂಗಾಪುರಕ್ಕೆ ಬಂದಿಳಿದ ಕಿಮ್ ಮತ್ತು ಟ್ರಂಪ್
 • ಜೂ. 11: ಉ.ಕೊರಿಯಾ ಸಂಪೂರ್ಣ ನಿಶ್ಶಸ್ತ್ರೀಕರಣ ಮಾಡಿದರೆ ಮತ್ತು ಈ ವಾಗ್ದಾನ ಬದಲಾಗುವುದಿಲ್ಲ ಎಂಬ ಭರವಸೆ ನೀಡಿದರೆ ಕೊರಿಯಾ ಪರ್ಯಾಯ ದ್ವೀಪಕ್ಕೆ ವಿಶಿಷ್ಟ ಭದ್ರತೆ-ಅಮೆರಿಕ ಘೋಷಣೆ

Leave a Reply

Your email address will not be published. Required fields are marked *