ಸಾಧ್ಯವಾದರೆ ಕೊಲೆ ಮಾಡಿ, ಮುಂದಿನದ್ದು ನೋಡಿಕೊಳ್ಳೋಣ: ಪೂರ್ವಾಂಚಲ ವಿವಿ ಉಪಕುಲಪತಿ

ಘಾಜಿಪುರ: ನೀವು ಕೊಲೆ ಮಾಡಿ ಬನ್ನಿ. ಮುಂದಿನದ್ದನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿಕೆ ನೀಡುವ ಮೂಲಕ ವೀರ್​ ಬಹದ್ದೂರ್​ ಸಿಂಗ್​ ಪೂರ್ವಾಂಚಲ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ರಾಜಾ ರಾಮ್​ ಯಾದವ್​ ವಿವಾದಕ್ಕೊಳಗಾಗಿದ್ದಾರೆ.

ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನುದೇಶಿಸಿ ಮಾತನಾಡುವಾಗ, “ಇಂದಿನ ವಿದ್ಯಾರ್ಥಿಗಳು ಒಂದೇ ಏಟಿನಲ್ಲಿ ಬಂಡೆಗೆ ಹೊಡೆದು ನೀರು ತೆಗೆಯುವ ಸಾಮರ್ಥ್ಯವುಳ್ಳವರು. ನೀವು ಪೂರ್ವಾಂಚಲ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೇ ಆಗಿದ್ದರೆ, ನನ್ನ ಮುಂದೆ ಅಳುತ್ತಾ ಬಂದು ನಿಲ್ಲಬೇಡಿ. ಯಾವುದಾದರೂ ಜಗಳದಲ್ಲಿ ಭಾಗಿಯಾದರೆ ಎದುರಾಳಿಗೆ ಹೊಡೆಯಿರಿ, ಸಾಧ್ಯವಾದರೆ ಕೊಲೆ ಮಾಡಿ. ಮುಂದೆ ಏನಾಗುತ್ತದೋ ನೋಡಿಕೊಳ್ಳೋಣ” ಎಂದು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ.

ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್​ ನಾಯಕ ಶೈಲೇಂದ್ರ ಸಿಂಗ್​, “ಈ ರೀತಿ ಹೇಳಿಕೆ ಕೊಟ್ಟಿರುವ ಸಿಂಗ್​ ವಿದ್ಯಾರ್ಥಿಗಳಿಗೆ ಇನ್ಯಾವ ಪಾಠ ಮಾಡುತ್ತಾರೆ. ಉಪಕುಲಪತಿ ಹುದ್ದೆಗೆ ಪ್ರಾಮುಖ್ಯತೆ ಇದೆ. ಈ ಹುದ್ದೆಯಲ್ಲಿ ಕೂತು ಇಂಥ ಹೇಳಿಕೆಗಳನ್ನು ನೀಡಬಾರದು” ಎಂದು ಹೇಳಿದ್ದಾರೆ.

ಇದು ಅತ್ಯಂತ ಆಕ್ಷೇಪಾರ್ಹ ಹೇಳಿಕೆ. ಉಪಕುಲಪತಿಗಳು ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉನ್ನತ ಮಟ್ಟಕ್ಕೇರಲು ಉತ್ತೇಜನ ನೀಡಬೇಕು. ಆದರೆ ಪೂರ್ವಾಂಚಲ ವಿಶ್ವವಿದ್ಯಾಲಯದ ಉಪಕುಲಪತಿ ಗೂಂಡಾಗಿರಿ ಮಾಡುವುದಕ್ಕೆ ಉತ್ತೇಜನ ನೀಡಿದ್ದಾರೆ. ಇದು ದುರಂತವೇ ಸರಿ. ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸಮಾಜವಾದಿ ಪಕ್ಷದ ವಕ್ತಾರ ಮನೋಜ್​ ರೈ ಧೂಪ್​ಚಾಂಡಿ ತಿಳಿಸಿದ್ದಾರೆ. (ಏಜೆನ್ಸೀಸ್)