ರೈತರಿಗೆ ಮೇವಿನ ಬಿತ್ತನೆ ಬೀಜ ವಿತರಣೆ

ಕಿಕ್ಕೇರಿ: ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆಯಾಗದಂತೆ ಅಣಿಯಾಗಲು ಸರ್ಕಾರವು ರೈತರಿಗೆ ಬಿತ್ತನೆಗಾಗಿ ಮೇವಿನ ಬೀಜ ವಿತರಿಸಲಾಗುತ್ತಿದೆ ಎಂದು ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಕಾರ್ತಿಕ್ ತಿಳಿಸಿದರು.

ಗ್ರಾಮದಲ್ಲಿನ ಪಶು ಆಸ್ಪತ್ರೆಯಲ್ಲಿ ಪಶುಪಾಲನಾ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಮೇವಿನ ಬೀಜದ ಕಿರುಪೊಟ್ಟಣವನ್ನು ಉಚಿತವಾಗಿ ವಿತರಿಸಿ ಮಾತನಾಡಿದರು.

ತಮ್ಮ ವ್ಯಾಪ್ತಿಯಲ್ಲಿ 30ಕ್ಕೂ ಹೆಚ್ಚು ಹಳ್ಳಿಗಳಿವೆ. ಒಟ್ಟಾರೆ 175 ಮೇವಿನ ಬೀಜದ ಬ್ಯಾಗ್‌ಗಳು ಬಂದಿದ್ದು, ಆದ್ಯತೆ ಮೇರೆಗೆ ರೈತರಿಗೆ ವಿತರಿಸಲಾಗುತ್ತಿದೆ. ಬೇಸಿಗೆ ಬರುವ ಮುನ್ನ, ನೀರಿನ ಆಶ್ರಿತ ಪ್ರದೇಶದಲ್ಲಿ ರೈತರು ಮೇವಿನ ಬೀಜ ಬಿತ್ತಿ ಮೇವು ಸಂಗ್ರಹಣೆ ಮಾಡಿಕೊಳ್ಳಲು ಮುಂದಾಗಬೇಕು. ಸುಮಾರು 4 ಬಾರಿ ಮೇವು ಬೆಳೆಯನ್ನು ಕಟಾವು ಮಾಡಬಹುದಾಗಿದ್ದು, ರೈತರು ಇದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಪರದಾಡಿದ ರೈತರು: ಮೇವಿನ ಬೀಜ ಪಡೆಯಲು 500ಕ್ಕೂ ಹೆಚ್ಚು ರೈತರು ಜಮಾಯಿಸಿದ್ದರು. ಆದರೆ ಕೇವಲ 175 ಬಿತ್ತನ ಬೀಜದ ಚೀಲ ಇದುದ್ದರಿಂದ ರೈತರು ಕೊಳ್ಳಲು ಪರದಾಡಿದರು.

ಬಿತ್ತನೆ ಬೀಜದ ಪೊಟ್ಟಣವನ್ನು ಸರ್ಕಾರ ಕಾಟಾಚಾರಕ್ಕೆ ವಿತರಿಸುತ್ತಿದೆ. ಸೂಕ್ತ ದಾಖಲೆ ಪಡೆದು ಎಲ್ಲ ರೈತರಿಗೂ ನೀಡಿದರೆ ಅನುಕೂಲವಾಗಲಿದೆ ಎಂದು ರೈತ ನಂಜೇಗೌಡ ಆಗ್ರಹಿಸಿದರು. ತಾಪಂ ಸದಸ್ಯೆ ಶಾರದಾ ಕೃಷ್ಣೇಗೌಡ, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಕಾರ್ತಿಕ್, ಜಾನುವಾರು ಪರಿವೀಕ್ಷಕ ರಾಮಕೃಷ್ಣೇಗೌಡ, ಬುಕ್ ಶಿವರಾಂ, ಮಂಜೇಗೌಡ ಮತ್ತಿತರರಿದ್ದರು.