
ಕಿಕ್ಕೇರಿ: ಹೋಬಳಿಯ ಗಡಿ ಗ್ರಾಮವಾದ ಬೋಳಮಾರನಹಳ್ಳಿ ಗ್ರಾಮಕ್ಕೆ ಸಂಪರ್ಕ ಸೇತುವೆಯಾಗಿರುವ ಕೆರೆಯ ಸೇತುವೆ ಕುಸಿದು ಗ್ರಾಮಸ್ಥರು ಓಡಾಡಲು ಪರದಾಡುವಂತಾಗಿದೆ.
ಸತತವಾಗಿ ಸುರಿದ ಮಳೆಯಿಂದ ಶಿಥಿಲವಾಗಿದ್ದ ಸೇತುವೆ ಒಂದು ಭಾಗ ಕುಸಿದಿದೆ. ಪರಿಣಾಮ ಜನಜೀವನಕ್ಕೆ ಓಡಾಡಲು ದೊಡ್ಡ ಸಮಸ್ಯೆಯಾಗಿದೆ. ಈ ಮಾರ್ಗದಿಂದ ಮಾದಾಪುರ, ಕೋಟಹಳ್ಳಿ, ಊಗಿನಹಳ್ಳಿ, ಚಿನ್ನೇನಹಳ್ಳಿ, ಗೌಡೇನಹಳ್ಳಿ, ಗೂಡೆಹೊಸಹಳ್ಳಿ, ಕಡಹೆಮ್ಮಿಗೆ, ಹೊಳೆನರಸೀಪುರ ಮತ್ತಿತರ ಗ್ರಾಮಗಳಿಗೆ ಓಡಾಡಲು ಕಷ್ಟಕರವಾಗಿದೆ.
ನಿತ್ಯ ಈ ಮಾರ್ಗವಾಗಿ ಸರ್ಕಾರಿ ಹಾಗೂ ಖಾಸಗಿ ವಾಹನಗಳು ಓಡಾಡಲಿವೆ. ರೈತರು ಎತ್ತಿನಗಾಡಿ ಮೂಲಕ ಜಮೀನುಗಳಿಗೆ, ಶಾಲಾ ಕಾಲೇಜುಗಳಿಗೆ ತೆರಳಲು ಈ ಮಾರ್ಗವೇ ಪ್ರಮುಖ ದಾರಿಯಾಗಿದೆ. ಕಳೆದೆರಡು ವರ್ಷಗಳ ಹಿಂದೆ ಕೆರೆ ಏರಿಯ ಸೇತುವೆಯಲ್ಲಿ ಬಿರುಕು ಬಿಟ್ಟಿತ್ತು. ನೀರಾವರಿ ಇಲಾಖೆ ಅಧಿಕಾರಿಗಳು ತೇಪೆ ಹಾಕಿ ಕೈತೊಳೆದುಕೊಂಡಿದ್ದರು.
ಮಳೆಗೆ ಶಿಥಿಲವಾದ ಸೇತುವೆ ಮತ್ತಷ್ಟು ಭಾಗ ಕುಸಿದು ಧಾರಾಕಾರವಾಗಿ ಕೆರೆಯ ನೀರು ಹೊರಹರಿದು ಪೋಲಾಗುತ್ತಿದೆ. ಮತ್ತಷ್ಟು ಮಳೆ ಸುರಿದರೆ ಭಾರಿ ಪ್ರಮಾಣದಲ್ಲಿ ಅವಘಡ ಸಂಭವಿಸಲಿದೆ. ಆನೆಗೊಳ, ಬೋಳಮಾರನಹಳ್ಳಿ ಮಾರ್ಗದ ಸಂಪರ್ಕ ರಹದಾರಿ ಆಗಿದ್ದು ಗ್ರಾಮಸ್ಥರು, ರೈತರಿಗೆ ತೀವ್ರ ಸಮಸ್ಯೆಯಾಗಿದೆ. ಈ ಕೆರೆಯ ಮೂಲಕವೇ ಹೇಮಾವತಿ ನಾಲೆ ನೀರು ಕೋಟಹಳ್ಳಿ, ಮಂದಗೆರೆ, ದಬ್ಬೇಘಟ್ಟ, ಚಿನ್ನೇನಹಳ್ಳಿ, ಮಾದಾಪುರ ಮತ್ತಿತರ ಗ್ರಾಮಗಳಿಗೆ ಹರಿಯಬೇಕಿದೆ. ಈ ಕೆರೆ ಸದಾ ತುಂಬಿರುವುದರಿಂದ ಕೆರೆಯ ಮೇಲಿನ ಸೇತುವೆ ತುರ್ತು ದುರಸ್ತಿ ಕಾಣಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಶಿಥಿಲವಾದ ಸೇತುವೆಯನ್ನು ಉಪ ತಹಸೀಲ್ದಾರ್ ವೀಣಾ, ರಾಜಸ್ವ ನಿರೀಕ್ಷಕ ನರೇಂದ್ರ, ಗ್ರಾಮ ಆಡಳಿತಾಧಿಕಾರಿ ಪ್ರಸನ್ನ, ತಿಪ್ಪೇಶ್ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ತುರ್ತು ದುರಸ್ತಿ ಮಾಡಲು ತಿಳಿಸಲಾಗುವುದು ಎಂದು ತಿಳಿಸಿದರು.
ರಾಜ್ಯ ಮಾರಾಟ ಮಹಾಮಂಡಳ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮಿಗೌಡ, ಮುಖಂಡರಾದ ಕುಮಾರ, ಮಂಜುನಾಥ್, ಶಂಕರಲಿಂಗೇಗೌಡ, ಪುಟ್ಟಲಿಂಗೇಗೌಡ, ಶಂಭುಲಿಂಗೇಗೌಡ, ಮೊಗಣ್ಣ, ಚಂದ್ರಶೇಖರ್, ಪುಟ್ಟೇಗೌಡ ಮತ್ತಿತರರಿದ್ದರು.