ಕಿಕಿ ಚಾಲೆಂಜ್​ ಸ್ವೀಕರಿಸಿ ಮತ್ತೊಂದು ಸಾಮಾಜಿಕ ಕಿರಿಕಿರಿ ಆರಂಭಿಸಿದ ಸೆಲೆಬ್ರಿಟಿಗಳು

ನವದೆಹಲಿ: ಐಸ್​ ಬಕೆಟ್​ ಹಾಗೂ ಫ್ಯಾಷನ್ ಗೊಂಬೆ ಸವಾಲಿನ ನಂತರ ಇದೀಗ ಕಿಕಿ ಚಾಲೆಂಜ್​ ಎಂಬ ಹೊಸ ಸವಾಲು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ ಮತ್ತೊಂದು ಸಾಮಾಜಿಕ ವ್ಯಸನಕ್ಕೆ ಕಾರಣವಾಗಿದೆ.

ಕಿಕಿ ಚಾಲೆಂಜ್​ ಸ್ವೀಕರಿಸಿ ದೇಶಾದ್ಯಂತ ಹಲವಾರು ಮಂದಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಈ ಬಗ್ಗೆ ಪೊಲೀಸರು ಸವಾಲನ್ನು ಸ್ವೀಕರಿಸಿದಂತೆ ಎಚ್ಚರಿಕೆ ನೀಡಿದ್ದಾರೆ. ಆದರೂ ಸೆಲೆಬ್ರೆಟಿಗಳೆನ್ನದೇ ಅನೇಕರು ಈ ವಿದೇಶಿ ಸಂಸ್ಕೃತಿಗೆ ಮರಳಾಗಿದ್ದಾರೆ.

ಏನಿದು ಕಿಕಿ ಚಾಲೆಂಜ್?​
ಚಲಿಸುತ್ತಿರುವ ಕಾರಿನಿಂದ ಇಳಿದು, ಅದರ ವೇಗಕ್ಕೆ ತಕ್ಕಂತೆ ಇಂಗ್ಲಿಷ್​ ಹಾಡಿಗೆ ಡಾನ್ಸ್​ ಮಾಡಿ, ಮತ್ತೆ ಕಾರಿನಲ್ಲಿ ಕುಳಿತುಕೊಳ್ಳಬೇಕು. ಇದನ್ನು ಮೈ ಫೀಲಿಂಗ್ಸ್ ಸವಾಲು ಎಂಬ ಹೆಸರಿನಿಂದಲೂ ಕರೆಯಲಾಗುತ್ತಿದೆ.

ಕಿಕಿ ಚಾಲೆಂಜ್​ ವಿರುದ್ಧ ಅಭಿಯಾನ
ವೇದಿಕೆ ಮೇಲೆ ನೃತ್ಯ ಮಾಡಿ ರಸ್ತೆ ಮೇಲಲ್ಲ ಎಂದು ದೆಹಲಿ ಪೊಲೀಸ್​ ಅರಿವು ಮೂಡಿಸುತ್ತಿದ್ದರೆ, ತೊಂದರೆಯನ್ನು ಉಂಟುಮಾಡುವ ಇಂತಹ ಸವಾಲನ್ನು ಸ್ವೀಕರಿಸಿ ಬೇಡಿ. ರಸ್ತೆ ಮೇಲೆ ಮ್ಯೂಸಿಕ್​ ಹಾಕಿಕೊಂಡು ಡ್ಯಾನ್ಸ್​ ಮಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆ ಕೊಡಬೇಡಿ ಎಂದು ಮುಂಬೈ ಪೊಲೀಸರು ತಿಳಿಹೇಳಿದ್ದು, ಇಂತಹ ಸವಾಲನ್ನು ಸ್ವೀಕರಿಸದ ಹಾಗೇ ನಿಮ್ಮ ಮಕ್ಕಳನ್ನು ತಡೆಯಿರಿ ಎಂದು ಉತ್ತರ ಪ್ರದೇಶ ಪೊಲೀಸರು ಮನವಿ ಮಾಡಿದ್ದಾರೆ.

ಬೆಂಗಳೂರು ಪೊಲೀಸರಿಂದಲೂ ಎಚ್ಚರಿಕೆ
ನಾವು ಪ್ರಬಲವಾಗಿ ಈ ಸವಾಲನ್ನು ವಿರೋಧಿಸುತ್ತೇವೆ ಎಂದು ಬೆಂಗಳೂರು ಪೋಲಿಸರು ಈ ಅಭಿಯಾನಕ್ಕೆ ಕೈ ಜೋಡಿಸಿದ್ದು, #InMySafetyFeelingsChallenge ಎಂಬ ಹ್ಯಾಸ್​​ಟ್ಯಾಗ್​ ಅಡಿಯಲ್ಲಿ ಎಲ್ಲ ರಾಜ್ಯದ ಪೊಲೀಸರು ಅಭಿಯಾನ ಶುರು ಮಾಡಿದ್ದಾರೆ.

ಈ ಸವಾಲಿಗೆ ಕಲಾವಿದರೂ ಫಿದಾ
ಸೆಲೆಬ್ರಿಟಿಗಳಾದ ನಿಯಾ ಶರ್ಮಾ, ನೋರಾ ಫಾತೆಯೀ, ಆದಾ ಶರ್ಮಾ, ಪ್ರಿಯಾಂಕ ಶರ್ಮಾ, ಕುಶಾಲ್​ ಟಂಡನ್​, ಭೂಮಿಕಾ ಗುರುಂಗು ಮತ್ತು ಕರಿಷ್ಮಾ ಶರ್ಮಾ ಅವರು ಕೂಡ ಸವಾಲು ಸ್ವೀಕರಿಸಿ ವಿಡಿಯೋ ಮಾಡಿ ತಮ್ಮ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಸವಾಲು ಸ್ವೀಕರಿಸಿದ ಕನ್ನಡತಿ ನಿವೇದಿತಾ
ಬಿಗ್​ಬಾಸ್​ ಖ್ಯಾತಿಯ ಮೈಸೂರಿನ ನಿವೇದಿತಾ ಗೌಡ ಕಿಕಿ ಚಾಲೆಂಜ್​ ಸ್ವೀಕರಿಸಿ ಇಂಗ್ಲಿಷ್​ ಹಾಡಿಗೆ ಹೆಜ್ಜೆ ಹಾಕಿದ್ದು, ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಭಾರಿ ಟೀಕೆ
ಸೆಲೆಬ್ರಿಟಿಗಳಾಗಿ ಇತರರಿಗೆ ಮಾದರಿಯಾಗಬೇಕಿದ್ದ ನೀವೇ ಈ ವಿದೇಶಿ ಸಂಸ್ಕೃತಿಗೆ ಮರುಳಾದರೆ ಹೇಗೆ ಎಂದು ನೆಟ್ಟಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಹೇಗೆ ಪ್ರಾರಂಭ ಆಯ್ತು ಕಿಕಿ ಚಾಲೆಂಜ್​
ಹಾಲಿವುಡ್​ನ ಹಾಸ್ಯಗಾರ್ತಿ ಶಿಗ್ಗಿ ಮೊದಲಿಗೆ ”ಕೆಕೆ ಡಿ ಯೂ ಲವ್​ ಮೀ” ಎಂಬ ಇಂಗ್ಲಿಷ್​ ಹಾಡಿಗೆ ಚಲಿಸುವ ಕಾರಿನಿಂದ ಇಳಿದು ಹೆಜ್ಜೆ ಹಾಕಿ, ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದರು. ಈ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಅನೇಕ ಮಂದಿ ಇದನ್ನೇ ಹಿಂಬಾಲಿಸ ತೊಡಗಿ, ಇಂದು ಇದರ ವಿರುದ್ಧ ಅಭಿಯಾನ ಪ್ರಾರಂಭಿಸುವ ಮಟ್ಟಕ್ಕೆ ಬಂದಿದೆ.