ಕಿಕಿ ಡ್ಯಾನ್ಸ್​ ಮಾಡಿ ಟೀಕೆಗೆ ಗುರಿಯಾದ ನಗರಸಭೆ ಸದಸ್ಯೆ ಮಗಳು ಹೇಳಿದ್ದೇನು?

ಕೊಪ್ಪಳ: ಅಪಾಯಕಾರಿ ಕಿಕಿಡ್ಯಾನ್ಸ್​ಗೆ ಸಾಮಾಜಿಕವಾಗಿ ಭಾರಿ ವಿರೋಧ ವ್ಯಕ್ತವಾಗಿದ್ದರೂ ಸಹ ಇಲ್ಲಿನ ನಗರದಸಭೆ ಸದಸ್ಯೆ ಪುತ್ರಿ ಕಿಕಿ ಡ್ಯಾನ್ಸ್​ ಮಾಡುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ.

ಎಕ್ಸ್​ಕ್ಯೂಸ್ ಮೀ ಚಿತ್ರದ ಹಾಡೊಂದಕ್ಕೆ ಕಿಕಿ ಡ್ಯಾನ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡುವ ಮೂಲಕ ಕೊಪ್ಪಳ ನಗರಸಭೆ ಸದಸ್ಯೆ ವಿಜಯಾ ಹಿರೇಮಠ ಅವರ ಪುತ್ರಿ ಸುರಭಿ ಹಿರೇಮಠ ಅವರು ಚರ್ಚೆಗೆ ಗ್ರಾಸರಾಗಿದ್ದಾರೆ.

ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಸುರಭಿ, ಮುಂಜಾಗ್ರತಾ ಕ್ರಮದೊಂದಿಗೆ ಕಿಕಿ ಡ್ಯಾನ್ಸ್ ಮಾಡಲಾಗಿದೆ. ಇದನ್ನು ಒಂದು ಚಾಲೆಂಜಿಂಗ್ ಕ್ರೀಡೆಯಂತೆ ಪರಿಗಣಿಸಿ. ನಮಗೂ ಮತ್ತು ಕುಟುಂಬಕ್ಕೂ ನಮ್ಮ ಪ್ರಾಣದ ಬಗ್ಗೆ ಕಾಳಜಿ ಇರುತ್ತದೆ. ಕೆಲವರು ಇದನ್ನು ವಿನಾಃ ಕಾರಣ ದೊಡ್ಡ ವಿಷಯ ಮಾಡುತ್ತಿದ್ದಾರೆ ಎಂದಿದ್ದಾರೆ.

ಸುರಭಿ ತಾಯಿ ವಿಜಯಾ ಮಾತನಾಡಿ, ನನ್ನ ಮಗಳಿಗೆ ಮುಂಚಿನಿಂದಲೂ ಮ್ಯೂಸಿಕಲಿ ಡಬ್​ಸ್ಮ್ಯಾಶ್​ ಮಾಡುವುದರ ಬಗ್ಗೆ ಕ್ರೇಜ್​ ಇದೆ. ಕಿಕಿಡ್ಯಾನ್ಸ್​ ಮಾಡುವಂತೆ ಚಾಲೆಂಜ್​ ಬಂದಿತ್ತು. ಹಾಗಾಗಿ ನಮ್ಮ ಎದುರೇ ನಿಧಾನವಾಗಿ ಕಾರು ಚಾಲನೆ ಮಾಡಿ ಈ ವಿಡಿಯೋ ಮಾಡಿದ್ದೇವೆ. ಇದರಿಂದ ಜನರಿಗೆ ಯಾವುದೇ ತೊಂದರೆಯಾಗಿಲ್ಲ ಎಂದರು.

ಒಂದುವೇಳೆ ಇದು ತಪ್ಪು ಎಂದಾದಲ್ಲಿ ಅಥವಾ ಜನರಿಗೆ ತಪ್ಪು ಸಂದೇಶ ಹೋಗುತ್ತದೆ ಎನ್ನುವುದಾದರೆ ನಗರಸಭೆ ಸದಸ್ಯಳಾಗಿ ನಾನು ಅದನ್ನು ಡಿಲಿಟ್​ ಮಾಡಿಸುತ್ತೇನೆ. ಜನರಲ್ಲಿ ಕ್ಷಮೆ ಯಾಚಿಸುತ್ತೇನೆ ಎಂದರು. (ದಿಗ್ವಿಜಯ ನ್ಯೂಸ್​)