ಮಗನಿಂದಲೇ ಕಿಕಿ ಚಾಲೆಂಜ್​ ಮಾಡಿಸಿದ ಇನ್ಸ್​ಪೆಕ್ಟರ್​; ನಿವೇದಿತಾ ವಿರುದ್ಧವೂ ದೂರು

ಬೆಂಗಳೂರು: ದೇಶಾದ್ಯಂತ ವೈರಲ್​ ಆಗುತ್ತಿರುವ ಅಪಾಯಕಾರಿ ಕಿಕಿ ಚಾಲೆಂಜ್​​ಗೆ ಪೊಲೀಸರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ, ಚಿಕ್ಕಮಗಳೂರಿನಲ್ಲಿ ಇನ್ಸ್​ಪೆಕ್ಟರ್ ಒಬ್ಬರು ತಮ್ಮ ಮಗನಿಂದ ಕಿಕಿ ಚಾಲೆಂಜ್​ ಮಾಡಿಸಿ ಟೀಕೆಗೆ ಗುರಿಯಾಗಿದ್ದಾರೆ.

ಇದನ್ನೂ ಓದಿ: ಕಿಕಿ ಚಾಲೆಂಜ್​ ಸ್ವೀಕರಿಸಿ ಮತ್ತೊಂದು ಸಾಮಾಜಿಕ ಕಿರಿಕಿರಿ ಆರಂಭಿಸಿದ ಸೆಲೆಬ್ರಿಟಿಗಳು

ಚಿಕ್ಕಮಗಳೂರು ಗ್ರಾಮಾಂತರ ‌ಠಾಣೆಯ ಇನ್ಸ್​ಪೆಕ್ಟರ್​ ಸಲೀಂ ಝೋಹಾರ್​ ಅಬ್ಬಾಸ್​ ವಾಳಲ್​ ಅವರು ತಮ್ಮ 10 ವರ್ಷದ ಮಗ ಆರ್ಯನ್ ಅಬ್ಬಾಸ್​ನಿಂದ ಕಿಕಿ ಚಾಲೆಂಜ್​ ಮಾಡಿಸಿದ್ದಾರೆ. ನಂತರ ಅದನ್ನು ತಮ್ಮ ಫೇಸ್​​​ಬುಕ್​​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದು, ವೈರಲ್​ ಆಗುತ್ತಿದ್ದಂತೆಯೇ ಎಚ್ಚೆತ್ತು ಅದನ್ನು ಡಿಲಿಟ್​ ಮಾಡಿದ್ದಾರೆ.

ನಿವೇದಿತಾ ವಿರುದ್ಧ ದೂರು
ಮಂಗಳವಾರ ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಅವರು ಕಿಕಿ ಚಾಲೆಂಜ್​ ಸ್ವೀಕರಿಸಿ ವಿಡಿಯೋ ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿ ಭಾರೀ ಟೀಕೆಗೆ ಗುರಿಯಾಗಿದ್ದರು. ಇಂದು ಆಕೆಯ ವಿರುದ್ಧ ಸಂಚಾರಿ ನಿಯಮ ಉಲ್ಲಂಘನೆ ಆರೋಪದ ಅಡಿಯಲ್ಲಿ ಕನ್ನಡ ಸಂಘಟನೆಗಳ ಒಕ್ಕೂಟ ಸಂಘದಿಂದ ಹಲಸೂರು ಗೇಟ್ ಠಾಣೆಯಲ್ಲಿ ದೂರು ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)