ಯುವಸಮೂಹಕ್ಕೂ ಕಿಡ್ನಿ ಸಮಸ್ಯೆ

|ವರುಣ ಹೆಗಡೆ

ಬೆಂಗಳೂರು: ದೇಹದಲ್ಲಿ ನೀರಿನ ಕೊರತೆ, ಬದಲಾದ ಜೀವನಶೈಲಿ, ರಕ್ತದೊತ್ತಡ ಸೇರಿ ವಿವಿಧ ಕಾರಣದಿಂದ ಮೂತ್ರಪಿಂಡ (ಕಿಡ್ನಿ) ಸಮಸ್ಯೆ ಯುವಸಮೂಹವನ್ನು ಕಾಡಲಾರಂಭಿಸಿದೆ. ಈಗ ಹೆಚ್ಚುತ್ತಿರುವ ಬಿಸಿಲಿನ ಬೇಗೆಗೆ ಕಿಡ್ನಿಗೆ ಹಾನಿ ಆಗುವ ಆತಂಕ ಸೃಷ್ಟಿಸಿದೆ.

ದೇಹದಲ್ಲಿ ರಕ್ತದ ಶುದ್ಧೀಕರಣ, ವಿಷಯುಕ್ತ ವಸ್ತುಗಳ ಬೇರ್ಪಡಿಸುವಿಕೆ, ರಕ್ತದ ಒತ್ತಡ ಕಾಪಾಡುವುದು, ಹಾಮೋನ್​ಗಳ ಬಿಡುಗಡೆಯಂಥ ಕೆಲಸ ಕಿಡ್ನಿ ಮಾಡುವುದರಿಂದ ಅದರ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡಬೇಕಾಗುತ್ತದೆ. ಆದರೆ, ಕಳಪೆ ಆಹಾರ ಪದ್ಧತಿ, ಕಡಿಮೆ ನೀರು ಸೇವನೆ ಹಾಗೂ ಬದಲಾದ ಜೀವನ ವಿಧಾನದಿಂದ 20-40 ವಯಸ್ಸಿನವರಿಗೆ ಹೆಚ್ಚಾಗಿ ಕಿಡ್ನಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ವಿಶ್ವದಲ್ಲಿ 85 ಕೋಟಿ ಜನ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ದೇಶದಲ್ಲಿ ಪ್ರತಿ 2 ಗಂಟೆಗೆ ಕನಿಷ್ಠ ಇಬ್ಬರು ಕಿಡ್ನಿ ಕಸಿ ಮಾಡಿಸಿಕೊಳ್ಳಲಾಗದೆ ಸಾಯುತ್ತಿದ್ದಾರೆ. ಕಿಡ್ನಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆ ಪ್ರತಿವರ್ಷ ವಿಶ್ವ ಕಿಡ್ನಿ ದಿನ ಆಚರಿಸುತ್ತಿದ್ದು, ಈ ವರ್ಷ ‘ಎಲ್ಲರಿಗೂ ಎಲ್ಲೆಡೆ ಕಿಡ್ನಿ ಆರೋಗ್ಯ’ ಎಂಬ ಘೋಷಣೆಯೊಂದಿಗೆ ಅರಿವು ಮೂಡಿಸುತ್ತಿದೆ.

ಬಡವರಿಗೆ ಉಚಿತ ಕಸಿ

ಕಿಡ್ನಿ ಸಮಸ್ಯೆಯನ್ನು 5 ಹಂತದಲ್ಲಿ ಗುರುತಿಸಲಾಗುತ್ತದೆ. ಕೊನೆಯ ಹಂತದಲ್ಲಿ ಕಿಡ್ನಿ ಕಸಿಯಿಂದ ಮಾತ್ರ ರೋಗಿಯನ್ನು ಉಳಿಸಿಕೊಳ್ಳಲು ಸಾಧ್ಯ. ರೋಗಿಗಳಿಗೆ ಡಯಾಲಿಸಿಸ್​ಗೆ ಒಂದು ತಿಂಗಳಿಗೆ 10ರಿಂದ 15 ಸಾವಿರ ರೂ. ಬೇಕು. ದಾನಿಯಿಂದ ಪಡೆದ ಹೊಸ ಕಿಡ್ನಿ ಅಳವಡಿಕೆಗೆ 5 ಲಕ್ಷ ರೂ.ವರೆಗೂ ನೀಡಬೇಕಾಗುತ್ತದೆ. ಇದರಿಂದಾಗಿ ರಾಜ್ಯದಲ್ಲಿ ಸಾವಿರಾರು ಬಡ ರೋಗಿಗಳು ಕಿಡ್ನಿ ಕಸಿಯಿಂದ ವಂಚಿತರಾಗುತ್ತಿದ್ದರು. ಹೀಗಾಗಿ ಬಿಪಿಎಲ್ ಕಾರ್ಡ್​ದಾರರಿಗೆ ರಾಜ್ಯ ಸರ್ಕಾರ ಸುವರ್ಣ ಆರೋಗ್ಯ ಟ್ರಸ್ಟ್ ನಡಿ ಉಚಿತ ಅಂಗಾಂಗ ಕಸಿ ಕರುಣಿಸಿದ್ದು, ಇದಕ್ಕಾಗಿ 30 ಕೋಟಿ ರೂ. ಮೀಸಲಿಟ್ಟಿದೆ.

ಮೂತ್ರಪಿಂಡ ಸಮಸ್ಯೆಗೆ ಆಹ್ವಾನ ನೀಡಿದ ಬೇಸಿಗೆ

ರಾಜ್ಯದಲ್ಲಿ ತಾಪಮಾನ ಏರಿಕೆಯಾಗುತ್ತಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ 40ಡಿಗ್ರಿ ಸೆಲ್ಸಿಯಸ್ ತಲುಪಿದೆ. ಹೀಗಾಗಿ ಕಿಡ್ನಿ ಸಮಸ್ಯೆ ಹೆಚ್ಚಳವಾಗುವ ಭೀತಿ ಎದುರಾಗಿದೆ. ರಾಜ್ಯದ ಆಸ್ಪತ್ರೆಗಳಲ್ಲಿ ಈ ಕಾಯಿಲೆಗಾಗಿ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗಿದ್ದು, ದೇಹದ ನಿರ್ಜಲೀಕರಣ ಹಾಗೂ ಬೆವರುವಿಕೆ ಕಿಡ್ನಿ ಸಮಸ್ಯೆಗೆ ಕಾರಣವಾಗುತ್ತಿದೆ. ಇವರಲ್ಲಿ ರೈತರು, ಕೂಲಿ ಕಾರ್ವಿುಕರು ಹಾಗೂ ಹೋಟೆಲ್​ಗಳಲ್ಲಿ ಅಡುಗೆ ಮಾಡುವವರೇ ಹೆಚ್ಚಿದ್ದಾರೆ. ಹೀಗಾಗಿ ಮಾರ್ಚ್​ನಿಂದ ಮೇ ಅವಧಿಯಲ್ಲಿ ಅಧಿಕ ನೀರನ್ನು ಸೇವಿಸಬೇಕು ಎಂಬುದು ವೈದ್ಯರ ಸಲಹೆ.

ಕಿಡ್ನಿ ಸಮಸ್ಯೆಗೆ ಒಳಪಡುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಅಧಿಕ ರಕ್ತದೊತ್ತಡ, ಮಧುಮೇಹ ಸೇರಿ ವಿವಿಧ ಕಾರಣದಿಂದ ಕಿಡ್ನಿ ಸಮಸ್ಯೆ ಬರಲಿದೆ. ಮುಂದುವರಿದ ವೈದ್ಯಕೀಯ ಚಿಕಿತ್ಸಾ ವಿಧಾನದಿಂದ ಗುಣಮುಖ ಮಾಡುತ್ತಿದ್ದೇವೆ.

| ಡಾ. ಅನಿಲ್ ಕುಮಾರ್, ನರರೋಗ ತಜ್ಞ, ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್

ಹೆಚ್ಚಾಗಿ ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆಯಿಂದ ಕಿಡ್ನಿ ಸಮಸ್ಯೆ ಬರುತ್ತದೆ. ನೋವು ನಿವಾರಕ ಮಾತ್ರೆ ನಿರಂತರ ಸೇವನೆ ಅಪಾಯ. ಸಕ್ಕರೆ ಕಾಯಿಲೆಯವರು ಆಗಾಗ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುತ್ತಿರಬೇಕು.

| ಡಾ.ಎಂ.ಎಂ. ಸತೀಶ್ ಕುಮಾರ್, ಹಿರಿಯ ನರರೋಗ ತಜ್ಞ, ವಿಕ್ರಮ್ ಆಸ್ಪತ್ರೆ