ಅಪಹರಣಗೊಂಡಿದ್ದ ಬಾಲಕ ಪತ್ತೆ

ಬೆಳಗಾವಿ: ನಗರದ ಹೃದಯ ಭಾಗದಲ್ಲಿರುವ ಖಡೇಬಜಾರ್ ಮಾರುಕಟ್ಟೆ ಪ್ರದೇಶದಲ್ಲಿ ಹಾಡಹಗಲೇ ಅಪಹರಣಗೊಂಡಿದ್ದ ಬಾಲಕನನ್ನು ಪೊಲೀಸರು ಮಂಗಳವಾರ ಅನಗೋಳದಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.

ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪೂರದ ನಾಗಪ್ಪ ನಾಯಿಕ(5) ಕಾಣೆಯಾಗಿದ್ದ ಬಾಲಕ. ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮೊಹಮ್ಮದ್ ಉದಗಟ್ಟಿ ಎಂಬುವವನು ಬಾಲಕನನ್ನು ಅಪಹರಿಸಿಕೊಂಡು ಹೋಗಿದ್ದ.

ಅಂಗನವಾಡಿ ಭಾನುವಾರ ರಜೆಯಿರುವ ಹಿನ್ನೆಲೆಯಲ್ಲಿ ಬಾಲಕ ಪಾಲಕರೊಂದಿಗೆ ಬೆಳಗಾವಿ ನಗರಕ್ಕೆ ಬಂದಿದ್ದನು. ಈ ವೇಳೆ ಪಾಲಕರು ಬಾಲಕನನ್ನು ತರಕಾರಿ ಮುಂದೆ ನಿಲ್ಲಿಸಿ ಪಕ್ಕದ ಅಂಗಡಿಗೆ ಹೋಗಿ ಬರುವುದರೊಳಗೆ ಬಾಲಕ ನಾಪತ್ತೆಯಾಗಿದ್ದ. ತಕ್ಷಣ ಪಾಲಕರು ಪೊಲೀಸರಿಗೆ ದೂರು ನೀಡಿದ್ದರು. ತಕ್ಷಣ ಕಾರ್ಯ ಪ್ರವತ್ತರಾದ ಪೊಲೀಸರು ಕ್ಯಾಮರಾ ಪರಿಶೀಲಿಸಿದಾಗ ಬಾಲಕನನ್ನು ಬೈಕ್ ಮೇಲೆ ಕರೆದೊಯ್ಯುತ್ತಿರುವ ದೃಶ್ಯ ಮಾರ್ಕೆಟ್ ಪೊಲೀಸ್ ಠಾಣೆ ಆವರಣದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಬಳಿಕ ನಗರದ ಎಲ್ಲ ಸಿಸಿಟಿವಿ ಪುಟೇಜ್‌ಗಳನ್ನು ಪರಿಶೀಲಿಸಿದ ಪೊಲೀಸರು ಅನಗೋಳದ ಮನೆಯಲ್ಲಿ ಬಾಲಕನನ್ನು ಪತ್ತೆ ಮಾಡಿದ್ದಾರೆ. ಮಂಗಳವಾರ ಬೆಳಗ್ಗೆ ಮನೆಯಲ್ಲಿ ಗೃಹಿಣಿಯ ಜತೆ ಬಾಲಕ ಇದ್ದನು. ಈ ಕುರಿತು ಗೃಹಿಣಿಯನ್ನು ವಿಚಾರಣೆ ನಡೆಸಿದಾಗ ಭಾನುವಾರ ಮಾರುಕಟ್ಟೆಯಲ್ಲಿ ಪೋಷಕರಿಲ್ಲದೆ ಅನಾಥವಾಗಿ ನಿಂತಿದ್ದ ಬಾಲಕನ್ನು ತಂದಿರುವುದಾಗಿ ಪತಿ ಹೇಳಿದ್ದಾರೆ.ಆತ ಬಸ್ ಚಾಲಕನಾಗಿದ್ದು, ಕರ್ತವ್ಯದ ಮೇಲೆ ಹೈದರಾಬಾದ್‌ಗೆ ತೆರಳಿದ್ದಾನೆ. ನಗರಕ್ಕೆ ಬುಧವಾರ ಬೆಳಗ್ಗೆ ವಾಪಸ್ ಬಂದ ಬಳಿಕ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಆತನಿಗೆ ಮಕ್ಕಳಾಗಿರಲಿಲ್ಲ

ಎರಡು ಮದುವೆಯಾದರೂ ಆತನಿಗೆ ಮಕ್ಕಳಾಗಿರಲಿಲ್ಲ. ಮಾರುಕಟ್ಟೆ ಪ್ರದೇಶದಲ್ಲಿ ಬೈಕ್ ಮೇಲೆ ಹೋಗುವಾಗ ಬಾಲಕ ಅಡ್ಡ ಬಂದಿದ್ದಾನೆ. ಮಕ್ಕಳನ್ನು ಯಾರೋ ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ ಎಂದುಕೊಂಡ ಆತ ಬಾಲಕರನನ್ನು ಬೈಕ್ ಮೇಲೆ ಕೂಡ್ರಿಸಿಕೊಂಡು ಮನೆಗೆ ಕರೆದುಕೊಂಡು ಹೋಗಿದ್ದಾನೆ. ಆತ ಮಗುವನ್ನು ಅಪಹರಿಸಿಕೊಂಡು ಹೋಗಿಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.ಬುಧವಾರ ಆತ ವಾಪಸ್ ಬಂದ ನಂತರರ ಹೆಚ್ಚಿನ ಮಾಹಿತಿ ಗೊತ್ತಾಗಲಿದೆ ಎಂದು ಮಾರ್ಕೆಟ್ ಠಾಣೆ ಎಸಿಸಿ ನಾರಾಯಣ ಭರಮನಿ ತಿಳಿಸಿದ್ದಾರೆ.