ಕಿಡ್ನಾಪರ್ಸ್‌ ಬಂಧನಕ್ಕೆ ಪೊಲೀಸರೇ ಪ್ರೇಮಿಗಳಾದ್ರು, ಕೊನೆಗೂ ಆರೋಪಿಗಳು ಅಂದರ್‌!

ಬೆಂಗಳೂರು: ಕಳ್ಳರು ಚಾಪೆ ಕೆಳಗೆ ನುಸುಳಿದರೆ ಪೊಲೀಸರು ರಂಗೋಲಿ ಕೆಳಗೆ ನುಸಿಯುತ್ತಾರೆ ಎನ್ನುವ ಮಾತಿದೆ. ಅದರಂತೆ ಅಪಹರಣಕಾರರ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರು ರಂಗೋಲಿ ಕೆಳಗೆ ನುಸುಳಿಯೇ ಅವರನ್ನು ಬಂಧಿಸಿದ್ದಾರೆ.

ಹೌದು, ಬೆಂಗಳೂರಿನ ಶಿವಾಜಿನಗರ ಪೊಲೀಸರು ಪ್ರೇಮಿಗಳಂತೆ ನಟಿಸಿ ಅಪಹರಣಕಾರರನ್ನು ಆಂಧ್ರಪ್ರದೇಶದಲ್ಲಿ ಬಂಧಿಸಿದ್ದಾರೆ.
ಡಿ.9ರಂದು ನಗರದ ಕ್ವೀನ್ಸ್ ರಸ್ತೆಯಲ್ಲಿನ ಡೈರೆಕ್ಟ್ ಸೆಲ್ಲಿಂಗ್ ಟೂರ್ಸ್ & ಟ್ರಾವೆಲ್ಸ್ ಸಿಬ್ಬಂದಿ ಕಾರ್ತಿಕ್‌ ಎಂಬವರನ್ನು ಅಪಹರಿಸಲಾಗಿತ್ತು. ಈ ಸಂಬಂಧ ಹಫೀಜ್, ಗೌಸ್​​ಫೀರ್​, ಫಯಾಜ್, ಶೇಕ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಟೂರ್ ಪ್ಯಾಕೇಜ್ ಬುಕ್ ಮಾಡಿದ್ದ ಆರೋಪಿಗಳು, ಪ್ಯಾಕೇಜ್ ಇಷ್ಟವಿಲ್ಲ ಎಂದು ಹಣ ನೀಡಿ, ಇಲ್ಲವಾದಲ್ಲಿ ಕಿಡ್ನಾಪ್ ಮಾಡಿ ಕೊಲೆಗೈಯುವುದಾಗಿ ಮಾಲೀಕರಿಗೆ ಬೆದರಿಕೆ ಒಡ್ಡಿದ್ದಾರೆ. ಅದರಂತೆ ಡಿ.9ರಂದು ಟೂರ್ಸ್ & ಟ್ರಾವೆಲ್ಸ್ ಮಾಲೀಕ ಸಂಜೀವ್​ಗೆ ಕರೆ ಮಾಡಿ ಬೆದರಿಸಿದ್ದಾರೆ. ನಂತರ ಸಂಜೀವ್‌ ಶಿವಾಜಿನಗರ ಪೊಲೀಸರಿಗೆ ದೂರು ನೀಡಿದ್ದರು.

ದೂರಿನ ಮೇರೆಗೆ ಆರೋಪಿಗಳ ಪತ್ತೆಗೆ ಇನ್​​ಸ್ಪೆಕ್ಟರ್​ ತಬ್ರೇಜ್ ಮತ್ತು ಎಸ್‌ಐ ಶೀಲಾ​ ಗೌಡ ನೇತೃತ್ವದ ಪ್ರತ್ಯೇಕ ತಂಡ ರಚಿಸಿ ಆಂಧ್ರಪ್ರದೇಶಕ್ಕೆ ತೆರಳಿದ್ದಾರೆ. ಆರೋಪಿಗಳಿದ್ದ ಸ್ಥಳಕ್ಕೆ ತೆರಳಿ ಪೊಲೀಸರೇ ಪ್ರೇಮಿಗಳಂತೆ ತೆರಳಿ ಆರೋಪಿಗಳನ್ನು ಬಂಧಿಸಿ ಕರೆತಂದಿದ್ದಾರೆ. (ದಿಗ್ವಿಜಯ ನ್ಯೂಸ್)