ನಟ ಕಿಚ್ಚ ಸುದೀಪ್​ಗೆ ಚಿಕ್ಕಮಗಳೂರು ಜೆಎಂಎಫ್​ಸಿ ಕೋರ್ಟ್​ನಿಂದ ಸಮನ್ಸ್ ಜಾರಿ

ಚಿಕ್ಕಮಗಳೂರು: ವಾರಸ್ದಾರ ಧಾರಾವಾಹಿಯ ಚಿತ್ರೀಕರಣಕ್ಕಾಗಿ ಬಳಸಿಕೊಳ್ಳಲಾಗಿದ್ದ ಕಾಫಿ ತೋಟದ ಬಾಡಿಗೆಯನ್ನು ಪಾವತಿಸಿಲ್ಲ ಹಾಗೂ ತೋಟವನ್ನು ಹಾಳು ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಟ, ನಿರ್ಮಾಪಕ ಕಿಚ್ಚ ಸುದೀಪ್​ ಅವರಿಗೆ ಕೋರ್ಟ್​ ಮಂಗಳವಾರ ಸಮನ್ಸ್​ ಜಾರಿ ಮಾಡಿದೆ.

ಚಿಕ್ಕಮಗಳೂರಿನ 2ನೇ ಜೆಎಂಎಫ್​ಸಿ ಕೋರ್ಟ್​ನಿಂದ ಸಮನ್ಸ್ ಜಾರಿಯಾಗಿದೆ. ವಾರಸ್ದಾರ ಧಾರಾವಾಹಿಯ ನಿರ್ಮಾಪಕ ಸುದೀಪ್ ಹಾಗೂ ಕಾರ್ಯಕಾರಿ ನಿರ್ಮಾಪಕ ಮಹೇಶ್​ಗೆ ಸಮನ್ಸ್ ನೀಡಲಾಗಿದೆ. ಮಾ.26ರಂದು ಕೋರ್ಟ್​ಗೆ ಹಾಜರಾಗಲು ಸೂಚನೆ ನೀಡಲಾಗಿದೆ.

ನಟ ಸುದೀಪ್ ವಿರುದ್ಧ ಜುಲೈ 12, 2017 ರಂದು ದೀಪಕ್ ಮಯೂರ್ ಎಂಬುವರು ದೂರು ದಾಖಲಿಸಿದ್ದರು. ಮಯೂರ್​, ಚಿಕ್ಕಮಗಳೂರು ತಾಲೂಕಿನ ಬೈಗೂರು ಗ್ರಾಮದಲ್ಲಿರುವ ಕಾಫಿತೋಟದ ಮಾಲೀಕ. ಚಿತ್ರೀಕರಣದ ವೇಳೆ 95 ಲಕ್ಷ ರೂ. ಮೌಲ್ಯದ ಕಾಫಿತೋಟವನ್ನು ಹಾಳು ಮಾಡಿದ್ದಾರೆಂದು ಆರೋಪಿಸಿ ದೂರು ದಾಖಲಿಸಿದ್ದರು. ಈ ಸಂಬಂಧ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. (ದಿಗ್ವಿಜಯ ನ್ಯೂಸ್​)