ಅಭಿನಯ ಚಕ್ರವರ್ತಿಯಿಂದ ಅಭಿಮಾನಿಗಳಿಗೆ ಸಂಕ್ರಾಂತಿಯ ಉಡುಗೊರೆ!

ಬೆಂಗಳೂರು: ಸ್ಯಾಂಡಲ್​ವುಡ್​ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅವರು ಅಭಿಮಾನಿಗಳಿಗೆ ಹೊಸ ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿ ದಿನದಂದು ಉಡುಗೊರೆಯೊಂದನ್ನು ನೀಡಲಿದ್ದಾರೆ.

ಚಂದನವನದ ಬಹುಕೋಟಿ ವೆಚ್ಚ ಹಾಗೂ ವಿಶ್ವಾದ್ಯಂತ ಸಾಕಷ್ಟು ಕುತೂಹಲ ಸೃಷ್ಟಿಸಿರುವ “ಪೈಲ್ವಾನ್​” ಚಿತ್ರದ ಮೊದಲ ಟೀಸರ್​ ಅನ್ನು ಬಿಡುಗಡೆ ಮಾಡುವ ಕುರಿತು ಸುದೀಪ್​ ಟ್ವೀಟ್ ಮಾಡಿದ್ದು, ಜನವರಿ 15 ರಂದು ಸಂಜೆ 4.45ಕ್ಕೆ ಚಿತ್ರದ ಮೊದಲ ಕನ್ನಡ ವರ್ಷನ್​ ಟೀಸರ್​ ಅನ್ನು ಬಿಡುಗಡೆ ಮಾಡುವುದಾಗಿ ತಿಳಿಸಿರುವ ಸುದೀಪ್​, ಇಡೀ ಚಿತ್ರತಂಡಕ್ಕೆ ಶುಭಕೋರಿದ್ದಾರೆ.

ಹೆಬ್ಬುಲಿಯಲ್ಲಿ ಕಮಾಲ್​ ಮಾಡಿದ್ದ ನಿರ್ದೇಶಕ ಕೃಷ್ಣ ಹಾಗೂ ನಟ ಸುದೀಪ್​ ಜೋಡಿ ಮತ್ತೆ ಪೈಲ್ವಾನ್​ ಮೂಲಕ ಒಂದಾಗಿದೆ. ಇದೇ ಮೊದಲ ಬಾರಿಗೆ ಚಿತ್ರಕ್ಕಾಗಿ ತಮ್ಮ ದೇಹವನ್ನು ಸಾಕಷ್ಟು ಹುರಿಗೊಳಿಸಿರುವ ಸುದೀಪ್​ ತೆರೆಯ ಮೇಲೆ ತಮ್ಮ ಕಟ್ಟುಮಸ್ತಾದ ದೇಹವನ್ನು ಪ್ರದರ್ಶಿಸಲಿದ್ದಾರೆ. ಇದೇ ಮೊದಲ ಬಾರಿಗೆ ಅವರು ಪೈಲ್ವಾನ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರವೂ ಸುಮಾರು 8 ಭಾಷೆಯಲ್ಲಿ ತೆರೆಕಾಣಲಿದ್ದು, ಚಿತ್ರಕ್ಕೆ ನಿರ್ದೇಶಕ ಕೃಷ್ಣ ಅವರು ಬಂಡವಾಳ ಹೂಡಿದ್ದಾರೆ. (ದಿಗ್ವಿಜಯ ನ್ಯೂಸ್​)