ದಚ್ಚು-ಕಿಚ್ಚನ ಜುಗಲ್​ಬಂದಿಗೆ ಅಭಿಮಾನಿಗಳು ಫಿದಾ: ನಿರೀಕ್ಷೆ ಇಮ್ಮಡಿಗೊಳಿಸಿದ ಕುಚಿಕು ಗೆಳೆಯರು

ಬೆಂಗಳೂರು: ಸ್ಯಾಂಡಲ್​ವುಡ್​ನ ಕುಚುಕು ಗೆಳೆಯರಾದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಹಾಗೂ ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಅವರು​ ಸಂಕ್ರಾಂತಿ ಹಬ್ಬದ ಸಡಗರದಲ್ಲಿದ್ದ ತಮ್ಮ ಅಭಿಮಾನಿಗಳ ಖುಷಿಯನ್ನು ಇಮ್ಮಡಿಗೊಳಿಸಿದ್ದಾರೆ.

ಸಂಕ್ರಾತಿಯ ವಿಶೇಷ ಕೊಡುಗೆಯಾಗಿ ಸುದೀಪ್​ ಅಭಿನಯದ ಪೈಲ್ವಾನ್​ ಚಿತ್ರದ ಟೀಸರ್​ ಹಾಗೂ ದರ್ಶನ್​ ಅಭಿನಯದ ಯಜಮಾನ ಚಿತ್ರದ ಲಿರಿಕಲ್​ ವಿಡಿಯೋ ಸಾಂಗ್ ಯೂಟ್ಯೂಬ್​ನಲ್ಲಿ​ ಬಿಡುಗಡೆಯಾಗಿದ್ದು, ಸಿಕ್ಕಾಪಟ್ಟೆ ಸಂಚಲನ ಉಂಟುಮಾಡಿದೆ.

ನಿನ್ನೆ 11 ಗಂಟೆಗೆ ಯಜಮಾನ ಚಿತ್ರದ ಲಿರಿಕಲ್​ ವಿಡಿಯೋ ಸಾಂಗ್​ ಬಿಡುಗಡೆಯಾದರೆ, ಸಂಜೆ 4.45ರ ವೇಳೆಗೆ ಪೈಲ್ವಾನ್​ ಚಿತ್ರದ ಟೀಸರ್​ ಬಿಡುಗಡೆ ಆಯಿತು. ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಎರಡು ವಿಡಿಯೋಗಳ ನಾಗಾಲೋಟ ಮುಂದುವರಿದಿದ್ದು ಈ ಹಿಂದಿನ ದಾಖಲೆಗಳೆಲ್ಲ ಧೂಳಿಪಟವಾಗಿದೆ. ಇದುವರೆಗೂ ಎರಡು ವಿಡಿಯೋಗಳು ಮಿಲಿಯನ್​ಗಟ್ಟಲೇ ವೀಕ್ಷಣೆ ಪಡೆದಿದೆ. ಈ ಮೂಲಕ ಕುಚುಕು ಗೆಳೆಯರ ಜುಗಲ್​ಬಂದಿ ಮುಂದುವರಿದಿದೆ.

ಶುಭಾಶಯಗಳ ಸುರಿಮಳೆ
ಪೈಲ್ವಾನ್​ ಚಿತ್ರಕ್ಕಾಗಿ ತಮ್ಮ ದೇಹವನ್ನು ಹುರಿಗೊಳಿಸಿರುವ ಸುದೀಪ್​ ಅವರ ಪರಿಶ್ರಮಕ್ಕೆ ಚಿತ್ರರಂಗದ ಗಣ್ಯರು ಸೇರಿಂದಂತೆ ಅಭಿಮಾನಿಗಳು ಅಭಿನಂದನೆ ವ್ಯಕ್ತಪಡಿಸಿದ್ದಾರೆ. ವಿಶೇಷ ಅಂದರೆ ಬಾಲಿವುಡ್​ ಸುಲ್ತಾನ್​ ಸಲ್ಮಾನ್​ ಖಾನ್​ ಟ್ವೀಟ್​ ಮೂಲಕ ಸುದೀಪ್​ ಅವರಿಗೆ ಶುಭಕೋರಿದ್ದಾರೆ. ಇತ್ತ ಯಜಮಾನ ಚಿತ್ರದ ಹೊಸ ಹಾಡಿನಲ್ಲಿ ದರ್ಶನ್​ ಅವರ ವ್ಯಕ್ತಿತ್ವಕ್ಕೆ ತಕ್ಕಂತೆ ಹಾಡಿನ ಸಾಲುಗಳಿರುವುದು ಅಭಿಮಾನಿಗಳು ತಮ್ಮ ಎದೆಯನ್ನು ತಟ್ಟಿಕೊಳ್ಳುತ್ತಿದ್ದಾರೆ. ಉಭಯ ನಟರಿಗೆ ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ.

ಎಲ್ಲರ ಬೆಂಬಲ 
ದಚ್ಚು-ಕಿಚ್ಚನ ಜುಗಲ್​ಬಂಧಿಗೆ ಸ್ಯಾಂಡಲ್​ವುಡ್​ನ ಇತರೆ ನಟರ ಅಭಿಮಾನಿಗಳು ಬೆಂಬಲ ವ್ಯಕ್ತಪಡಿಸಿರುವುದು ಖುಷಿಯ ವಿಚಾರವಾಗಿದೆ. ಪರಸ್ಪರ ಬೆಂಬಲ ನೀಡುತ್ತಾ ಯಾರಿಗೂ ನೋವನ್ನು ಉಂಟುಮಾಡದೆ ಎರಡು ವಿಡಿಯೋಗಳನ್ನು ಅಭಿಮಾನಿಗಳು ಸಮನಾಗಿ ಸ್ವೀಕರಿಸಿದ್ದಾರೆ. ಆದರೂ, ಕೆಲವರು ಮೊಸರಲ್ಲಿ ಕಲ್ಲು ಹುಡುಕುವರು ಇದ್ದಾರೆ, ಇದು ಸರ್ವೆ ಸಾಮಾನ್ಯ ಎಂದು ಹೇಳಿ ನಿರ್ಲಕ್ಷ್ಯ ವಹಿಸಿದರೆ ಒಳ್ಳೆಯದಲ್ಲವೇ? ಏನೇ ಆಗಲಿ ಕುಚುಕು ಗೆಳೆಯರ ಹೊಸ ವರ್ಷದ ಹೊಸ ಉಡುಗೊರೆ ಅಭಿಮಾನಿಗಳ ಪಾಲಿಗೆ ಸಂಕ್ರಾಂತಿಯ ಎಳ್ಳುಬೆಲ್ಲದ ಸವಿಯನ್ನು ಮತ್ತಷ್ಟು ಹೆಚ್ಚು ಮಾಡಿದೆ ಎಂದು ಹೇಳಿದರೆ ತಪ್ಪಾಗಲಾರದು.

ಹೆಬ್ಬುಲಿಯಲ್ಲಿ ಕಮಾಲ್​ ಮಾಡಿದ್ದ ನಿರ್ದೇಶಕ ಕೃಷ್ಣ ಹಾಗೂ ನಟ ಸುದೀಪ್​ ಜೋಡಿ ಮತ್ತೆ ಪೈಲ್ವಾನ್​ ಮೂಲಕ ಒಂದಾಗಿದೆ. ಇದೇ ಮೊದಲ ಬಾರಿಗೆ ಚಿತ್ರಕ್ಕಾಗಿ ತಮ್ಮ ದೇಹವನ್ನು ಸಾಕಷ್ಟು ಹುರಿಗೊಳಿಸಿರುವ ಸುದೀಪ್ ಅವರ ಪರಿಶ್ರಮ ಟೀಸರ್​ನಲ್ಲಿ ಕಾಣುತ್ತಿದೆ.​ ಚಿತ್ರವೂ ಸುಮಾರು 8 ಭಾಷೆಯಲ್ಲಿ ತೆರೆಕಾಣಲಿದ್ದು, ಚಿತ್ರಕ್ಕೆ ನಿರ್ದೇಶಕ ಕೃಷ್ಣ ಅವರು ಬಂಡವಾಳ ಹೂಡಿದ್ದಾರೆ.

ಯಜಮಾನ ಚಿತ್ರವನ್ನು ಪೋನ್​ ಕುಮಾರನ್​ ನಿರ್ದೇಶಿಸಿದ್ದು, ನಟ ದರ್ಶನ್​ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಕಿರಿಕ್​ ಬೆಡಗಿ ರಶ್ಮಿಕಾ ಮಂದಣ್ಣ ಅವರು ದರ್ಶನ್​ ಜತೆ ತೆರೆ ಹಂಚಿಕೊಳ್ಳುತ್ತಿದ್ದು, ಚಿತ್ರವು ಸಾಕಷ್ಟು ನಿರೀಕ್ಷೆಯನ್ನು ಉಂಟುಮಾಡಿದೆ. (ದಿಗ್ವಿಜಯ ನ್ಯೂಸ್​)

https://www.youtube.com/watch?v=POMumo3pS80