ಪ್ರಿಯಾ ಸುದೀಪ್​ ಕಡೆಯಿಂದ ಕಿಚ್ಚನ ಅಭಿಮಾನಿಗಳಿಗೆ ಸಿಕ್ತು ಯುಗಾದಿ ಗಿಫ್ಟ್: ವಿಡಿಯೋ ಮೂಲಕ ಪತಿಯ ಗುಣಗಾನ

ಬೆಂಗಳೂರು: ಯುಗಾದಿ ಹಬ್ಬಕ್ಕೆ ಕಿಚ್ಚ ಸುದೀಪ್​ ಅಭಿಮಾನಿಗಳು ಹಾಗೂ ಸ್ನೇಹಿತರಿಗೆ ಉಡುಗೊರೆಯೊಂದನ್ನು ನೀಡುತ್ತೇನೆ ಎಂದು ಹೇಳಿ ಕೌತುಕವನ್ನು ಸೃಷ್ಟಿಸಿದ್ದ ಸುದೀಪ್​ ಪತ್ನಿ ಪ್ರಿಯಾ ಸುದೀಪ್​ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ಟ್ವಿಟರ್​ ಮೂಲಕ ಕುತೂಹಲಕ್ಕೆ ಬ್ರೇಕ್​ ಹಾಕಿರುವ ಪ್ರಿಯಾ ಸುದೀಪ್​ ಅವರು ನಿಮ್ಮ ಪ್ರೀತಿಯ ಕಿಚ್ಚನನ್ನು ಇನ್ನಷ್ಟು ನಿಮ್ಮ ಹತ್ತಿರಕ್ಕೆ ತರುತ್ತಿದ್ದೇನೆ. ಕಿಚ್ಚ ಕ್ರಿಯೆಷನ್ಸ್​ ಎಂಬ ಅಧಿಕೃತ ಯೂಟ್ಯೂಬ್​ ಚಾನಲ್ ಬಿಡುಗಡೆ ಮಾಡಿದ್ದು ಅದನ್ನು ವೀಕ್ಷಿಸಿ ಮತ್ತು ಸಬ್​ಸ್ಕ್ರೈಬ್​​ ಆಗಿ, ನಿಮಗಾಗಿ ನನ್ನ ಪತಿಯ ಬಗ್ಗೆ ಒಂದು ವಿಡಿಯೋವನ್ನು ಪ್ರಸ್ತುತ ಪಡಿಸಿದ್ದೇನೆ. ಕಿಚ್ಚ ಅಂದರೆ ಕೃಷ್ಣ ಅಲ್ವಾ?.. ವೀಕ್ಷಿಸಿ ಹಾಗೂ ನಿಮ್ಮ ಪ್ರೀತಿಯನ್ನು ಹಂಚಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಿಚ್ಚ ಸುದೀಪ್​ ಈ ಪ್ರೀತಿ ತೋರಿದ ತಂಡದ ಎಲ್ಲರಿಗೂ ಧನ್ಯವಾದಗಳು, ವಿಡಿಯೋ ನೋಡಿದರೆ ನೀವೆಲ್ಲರೂ ಹೃದಯದಿಂದ ಕೆಲಸ ಮಾಡಿರುವುದು ಕಾಣಿಸುತ್ತಿದೆ. ಕಿಚ್ಚ ಕ್ರಿಯೇಷನ್ಸ್​ ಯೂಟ್ಯೂಬ್​ ಚಾನಲ್​ ಬಿಡುಗಡೆ ಮಾಡಿದ ಪತ್ನಿ ಪ್ರಿಯಾಳಿಗೆ ಧನ್ಯವಾದಗಳು. ಈ ಚಾನಲ್​ ಕೇವಲ ನನಗಾಗಿಯೇ ಅಲ್ಲ. ಇದು ಹೊಸ ಪ್ರತಿಭೆಗಳಿಗೆ ವೇದಿಕೆಯೂ ಆಗಿದೆ ಎಂದು ಶುಭ ಹಾರೈಸಿದ್ದಾರೆ.