ತಪ್ಪಿದ್ದಾಗ ಮಾತ್ರ ಐಟಿ ಅಧಿಕಾರಿಗಳು ಬರುತ್ತಾರೆ ಹೊರತು ಆಮಂತ್ರಣ ನೀಡಲು ಅಲ್ಲ: ನಟ ಸುದೀಪ್​

ಬೆಂಗಳೂರು: ಐಟಿ ಅಧಿಕಾರಿಗಳು ರೈಡ್​ ಮಾಡಿದ್ದಲ್ಲ, ಅವರು ಸರ್ಚ್ ಮಾಡಿದ್ದಾರೆ. ನನಗೆ ನೀಡಿದ ನೋಟಿಸ್​ನ ಹಿನ್ನಲೆಯಲ್ಲಿ ಇಂದು ರೀ ಕನ್ಫರ್ಮೇಷನ್​ಗೆ ಬಂದಿದ್ದೆ ಎಂದು ನಟ ಸುದೀಪ್​ ಹೇಳಿದರು.

ಐಟಿ ವಿಚಾರಣೆಗೆ ಹಾಜರಾಗಿದ್ದ ಅವರು ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ದಾಖಲೆಗಳಲ್ಲಿ ಮಾಡಿರುವ ಸಹಿ ನನ್ನದೋ, ಅಲ್ಲವೋ ಎಂದು ಖಚಿತ ಪಡಿಸಿಕೊಳ್ಳುವ ಸಲುವಾಗಿ ಇಂದು ವಿಚಾರಣೆ ನಡೆಸಿದ್ದಾರೆ. ಈಗಷ್ಟೇ ಪ್ರಾರಂಭವಾಗಿದೆ. ಮುಂದಿನ ವಿಚಾರಣೆ ಯಾವತ್ತೆಂದು ಅಧಿಕಾರಿಗಳು ತಿಳಿಸುತ್ತಾರೆ. ಅಂದು ಬರುತ್ತೇನೆ ಎಂದು ತಿಳಿಸಿದರು.

ನಮ್ಮ ವ್ಯವಹಾರದಲ್ಲಿ ಏನಾದರೂ ತಪ್ಪಿದೆ ಎಂದಾದಾಗ ಮಾತ್ರ ಐಟಿ ಅಧಿಕಾರಿಗಳು ಬರುತ್ತಾರೆ ಹೊರತು ಯಾವುದೇ ಕಾರ್ಯಕ್ರಮಕ್ಕೆ ಆಮಂತ್ರಣ ನೀಡಲು ಅಲ್ಲ. ಕೆಲವು ಸಲ ಲೆಕ್ಕದಲ್ಲಿ ತಪ್ಪಾಗಬಹುದು. ಕೆಲವು ಕಡೆ ದೊಡ್ಡ ತಪ್ಪಿರಬಹುದು, ಮತ್ತೊಂದೆಡೆ ಸಣ್ಣ ತಪ್ಪಿರುತ್ತದೆ. ನನ್ನದೂ ತಪ್ಪಿದೆ. ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಲು ಒಂದು ಪಾಠವಾಯಿತು ಎಂದು ಹೇಳಿದರು.

ನಾನು ಪೈಲ್ವಾನ್​ ಶೂಟಿಂಗ್​ನಲ್ಲಿದ್ದ ಕಾರಣ ವಿಚಾರಣೆಗೆ ಸಮಯ ಕೇಳಿದ್ದೆ. ಈಗಲೂ ಕೂಡ ಸೈರಾ ಶೂಟಿಂಗ್​ನಲ್ಲಿದ್ದೆ ಎಂದರು.​

ಬೇರೆ ನಟರು ಐಟಿ ದಾಳಿ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಲು ಹಿಂಜರಿಯುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸುದೀಪ್​, ಅವರ ಸ್ಥಾನದಲ್ಲಿ ನಿಂತು ನಾನು ಹೇಳುವುದಿಲ್ಲ ಅವರಿಗೆ ಅವರದ್ದೇ ಆದ ಸಮಸ್ಯೆಗಳು ಇರುತ್ತವೆ. ಅದನ್ನು ಅವರೇ ತಿಳಿಸಬೇಕು. ನಾನು ನನ್ನ ಮನೆಯ ವಿಚಾರ ಮಾತ್ರ ಮಾತನಾಡಬಲ್ಲೆ ಎಂದರು.