ಖೋ ಖೋ ವಿಶ್ವಕಪ್(Kho Kho World Cup) ಫೈನಲ್ ಪಂದ್ಯದಲ್ಲಿ ನೇಪಾಳ ತಂಡವನ್ನು 78-40 ಅಂತರದಲ್ಲಿ ಮಣಿಸಿದ ಭಾರತ ಮಹಿಳಾ ತಂಡಕ್ಕೆ ದೇಶವ್ಯಾಪಿ ಅಭಿನಂದನೆಗಳು ವ್ಯಕ್ತವಾಗುತ್ತಿವೆ. ಫೈನಲ್ ಹಣಾಹಣಿಯಲ್ಲಿ ಐದು ನಿಮಿಷಗಳ ಕಾಲ ‘ಡ್ರಿಮ್ ರನ್’ ಓಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ರಾಜ್ಯದ ಮೈಸೂರಿನ ಯುವತಿ ಬಿ. ಚೈತ್ರಾಗೆ (B Chaitra) ಭಾರತೀಯರಿಂದ ವ್ಯಾಪಕ ಪ್ರಶಂಸೆ ಹಾಗೂ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿವೆ.
ಇದೀಗ ಸಿಎಂ ಸಿದ್ದರಾಮಯ್ಯ, 2025ರ ಪುರುಷರ ಹಾಗೂ ಮಹಿಳಾ ಖೋ ಖೋ ವಿಶ್ವಕಪ್‌ನಲ್ಲಿ ಅತ್ಯುತ್ತಮ ಆಟವಾಡಿ ಎಲ್ಲರ ಗಮಸೆಳೆದ ಕರ್ನಾಟಕ ಮಂಡ್ಯ ಜಿಲ್ಲೆಯ ಡಿ.ಮಲ್ಲಿಗೆರೆ ಗ್ರಾಮದ ಎಂ.ಕೆ ಗೌತಮ್ ಹಾಗೂ ಮೈಸೂರು ನರಸೀಪುರದ ಕುರಬೂರಿನ ಚೈತ್ರಾ ಅವರನ್ನು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು.
ಭಾರತ ತಂಡವು ಎರಡೂ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆಗಲು ಅತ್ಯುತ್ತಮ ಪ್ರದರ್ಶನ ನೀಡಿದ ಇಬ್ಬರೂ ಪಟುಗಳಿಗೆ ತಲಾ 5 ಲಕ್ಷ ರೂ. ಬಹುಮಾನ ಘೋಷಿಸಿದರು.
ಸಚಿವ ಚಲುವರಾಯಸ್ವಾಮಿ ಮತ್ತು ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರು ಉಪಸ್ಥಿತರಿದ್ದರು.
ಗ್ರಾಮೀಣ ಪ್ರತಿಭೆ ಬಿ. ಚೈತ್ರಾ
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಒಂದು ಪುಟ್ಟ ಗ್ರಾಮದ ಪ್ರತಿಭೆ ಬಿ. ಚೈತ್ರಾ, ಭಾರತವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದಲ್ಲದೇ, ಅತ್ಯಂತ ಗಮನಾರ್ಹ ಪ್ರದರ್ಶನ ನೀಡಿದ್ದು ನೋಡುಗರ ಗಮನಸೆಳೆದಿದೆ. ಟಿ. ನರಸೀಪುರ ತಾಲ್ಲೂಕಿನ ಕುರುಬೂರು ಗ್ರಾಮದ ಓರ್ವ ರೈತನ ಮಗಳು ಇಡೀ ದೇಶವೇ ಕೊಂಡಾಡುವಂತ ಸಾಧನೆಗೈದಿರುವುದು ಗ್ರಾಮಸ್ಥರ ಅದ್ದೂರಿ ಸಂಭ್ರಮಾಚರಣೆಗೆ ಕಾರಣವಾಗಿದೆ. ಚೊಚ್ಚಲ ಮಹಿಳಾ ಖೋ ಖೋ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ.