ಖಿಲಾರಿ ತಳಿ ಹಸುಗಳು ಅವಸಾನದತ್ತ

ಬಂಕಾಪುರ: ಕರುಣೆ ಇಲ್ಲದ ಅಧಿಕಾರಿಗಳು ಗೋವುಗಳ ಪ್ರಾಣ ಹಿಂಡುತ್ತಿರುವ ಚಿತ್ರಣ ಬಂಕಾಪುರ ಖಿಲಾರಿ ತಳಿ ಗೋವು ಸಂವರ್ಧನಾ ಕೇಂದ್ರದಲ್ಲಿ ನಿತ್ಯ ನೋಡಲು ಸಿಗುತ್ತದೆ.

ಸುಮಾರು 139 ಎಕರೆ ವಿಸ್ತೀರ್ಣದಲ್ಲಿರುವ ರಾಜ್ಯದ ಏಕೈಕ ಖಿಲಾರಿ ತಳಿ ಗೋವು ಸಂವರ್ಧನಾ ಕೇಂದ್ರ ಬಂಕಾಪುರದಲ್ಲಿದೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಇಂತಹ ವಿಶೇಷ ಗೋ ತಳಿಯ ಕೇಂದ್ರ ಎಲ್ಲಿಯೂ ಇಲ್ಲ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದ ಇಂದು ಈ ಗೋವಿನ ತಳಿ ಅವಸಾನದತ್ತ ಸಾಗುತ್ತಿದೆ.

ಕೆಲ ವರ್ಷಗಳ ಹಿಂದೆ ಕೇಂದ್ರದಲ್ಲಿ 500ಕ್ಕೂ ಅಧಿಕ ಗೋವುಗಳಿದ್ದವು. ಆದರೆ, ಸರಿಯಾದ ನಿರ್ವಹಣೆ ಇಲ್ಲದೆ ಗೋವುಗಳ ಸಂಖ್ಯೆ ಈಗ 170ಕ್ಕೆ ಇಳಿದಿದೆ. ಫಲವತ್ತಾದ ಭೂಮಿ ಮತ್ತು 9ಕ್ಕೂ ಅಧಿಕ ಕೊಳವೆ ಬಾವಿ ಇರುವ ಕೇಂದ್ರದ ಜಮೀನಿನಲ್ಲಿ ಮೇವಿನ ಬೆಳೆ ಬೆಳೆದು ಹೆಚ್ಚಾದ ಮೇವು ಮಾರಾಟ ಮಾಡಲಾಗುತ್ತಿತ್ತು. ಆದರೆ, ಕಳೆದ ಎರಡು ವರ್ಷಗಳಿಂದ ಕೇಂದ್ರದ ಪ್ರಭಾರಿ ಉಪನಿರ್ದೇಶಕರಾಗಿ ನೇಮಕಗೊಂಡ ವೈದ್ಯ ಬಸವರಾಜ ಹಿರೇಮಠ ಅವರ ಹಿಟ್ಲರ್ ನೀತಿಯಿಂದ ಗೋವುಗಳ ಸಂತತಿ ಕಡಿಮೆ ಆಗುತ್ತಿದೆ.

ಕೇಂದ್ರದಲ್ಲಿಯೇ 100 ಮೆಟ್ರಿಕ್ ಟನ್ ರಸಮೇವು ಸಂಗ್ರಹವಿದ್ದರೂ, ಹೊರಗಡೆಯಿಂದ 70 ಟನ್ ಒಣ ಮೇವು ಖರೀದಿಸಲಾಗಿದೆ. ಇದಲ್ಲದೆ, ಅಂಕಿ-ಅಂಶಗಳ ಪ್ರಕಾರ ಪ್ರತಿ ತಿಂಗಳು ಚಿತ್ರದುರ್ಗ ಜಿಲ್ಲೆ ಚಳಕೇರಿಯ ವಿಜಯ ರತ್ನ ಕಂಪನಿಯಿಂದ 70 ಟನ್ ಪೌಷ್ಟಿಕ ಆಹಾರ ಖರೀದಿಸಲಾಗುತ್ತಿದೆ. ಆದರೆ, 170 ಆಕಳು ಮತ್ತು ಕರುಗಳಿಗೆ ಪ್ರತಿ ದಿನಕ್ಕೆ 150 ಕೆಜಿ ಪೌಷ್ಟಿಕ ಆಹಾರ ಮತ್ತು ಒಂದಿಷ್ಟು ಒಣ ಮೇವು ಮಾತ್ರ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಅರೆಹೊಟ್ಟೆಯಲ್ಲಿರುವ ಕರುಗಳ ಮುಂದೆ ಯಾರಾದರೂ ಹಿಡಿಮೇವು ಹಿಡಿದು ಹತ್ತಿರ ಹೋದರೆ ಸಾಕು, ಮೇವಿನ ಆಸೆಗೆ ಕರುಗಳ ಮುಗಿಬೀಳುವ ದೃಶ್ಯ ಎಂಥವರ ಮನಸ್ಸನ್ನೂ ಕರಗಿಸುತ್ತದೆ. ಅಧಿಕಾರಿಗಳ ನಿರ್ಲಕ್ಷ್ಯ್ಕೆ ಇದು ಕೈಗನ್ನಡಿಯಂತಿದೆ.

ಸಮರ್ಪಕ ಚಿಕಿತ್ಸೆ ನೀಡದ ವೈದ್ಯ: ವೈದ್ಯ ಬಸವರಾಜ ಹಿರೇಮಠ ಜಾನುವಾರುಗಳಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ. ಇವರ ನಿರ್ಲಕ್ಷ್ಯಂದಲೇ ಕಳೆದ ಐದಾರು ತಿಂಗಳಲ್ಲಿ 7 ಜಾನುವಾರುಗಳು ಸಾವಿಗೀಡಾಗಿವೆ ಎನ್ನಲಾಗಿದೆ. ಇತ್ತೀಚೆಗೆ ಪ್ರಸವ ವೇದನೆಯಿಂದ ಬಳಲುತ್ತಿದ್ದ ಗೋವಿನ ಹೊಟ್ಟೆಯಲ್ಲಿ ಕರು ಅಡ್ಡವಾಗಿದ್ದಾಗ ಸರಿಯಾದ ಚಿಕಿತ್ಸಾ ಕ್ರಮ ಅನುಸರಿಸದೇ ಕರುವಿನ ಕುತ್ತಿಗೆಗೆ ಹಗ್ಗ ಬಿಗಿದು ಏಳು ಕಾರ್ವಿುಕರಿಂದ ಎಳಿಯಿಸಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಕರು ಸಮೇತ ಆಕಳು ಸ್ಥಳದಲ್ಲಿಯೇ ಮೃತಪಟ್ಟಿದೆ. ಆದ್ದರಿಂದ ವೈದ್ಯ ಹಿರೇಮಠ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಅಪರೂಪದ ಗೋವು ತಳಿ ಸಂರಕ್ಷಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಉಡಾಫೆ ಉತ್ತರ: ಆಕಳ ಸಾವಿನ ಕುರಿತು ವೈದ್ಯರನ್ನು ಪ್ರಶ್ನಿಸಿದರೆ, ‘ಆಕಳನ್ನು ಉಳಿಸುವುದಕ್ಕಾಗಿ ಅನುಸರಿಸಿದ ಮಾರ್ಗ ವೈಜ್ಞಾನಿಕವಾಗಿಯೇ ಇದೆ. ಈ ಬಗ್ಗೆ ನೀವು ನಮಗೆ ಪಾಠ ಮಾಡುವ ಅವಶ್ಯಕತೆ ಇಲ್ಲ. ನಾನು ಪಶು ವೈದ್ಯಕೀಯ ಪದವಿ ಪಡೆದುಕೊಂಡಿದ್ದೇನೆ. ನನಗೆ ಆಕಳುಗಳ ರಕ್ಷಣೆ ಮಾಡುವುದು ಗೊತ್ತು’ ಎಂದು ಉಡಾಫೆಯಿಂದ ಉತ್ತರಿಸುತ್ತಾರೆ.

ಕೇಂದ್ರದಲ್ಲಿ ವೈದ್ಯರಿಗೆ ವಸತಿ ಗೃಹಗಳ ಸೌಲಭ್ಯವಿದ್ದರೂ ರಾತ್ರಿ ಯಾರೂ ಇಲ್ಲಿ ಉಳಿದುಕೊಳ್ಳುವುದಿಲ್ಲ. ಇದರಿಂದ ರಾತ್ರಿ ಒಂದೇ ಕಡೆ ಇರುವ ಗೋವುಗಳು ಬಡಿದಾಡಿಕೊಂಡು ಗಾಯಗೊಳ್ಳುತ್ತವೆ. ಇದರಿಂದ ಸಾವು ನೋವಿನ ಸಂಖ್ಯೆ ಹೆಚ್ಚಾಗುತ್ತಿದೆ. ಮೇಲಧಿಕಾರಿಗಳು ಈ ಬಗೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು.

| ಹೊನ್ನಪ್ಪ ಹೂಗಾರ, ಪುರಸಭೆ ಸದಸ್ಯ

ಕೇಂದ್ರದಲ್ಲಿ ಸೇವೆಗೆ ಬಂದಾಗಿನಿಂದ ಒಂದಿಲ್ಲೊಂದು ವಿವಾದದಲ್ಲಿರುವ ವೈದ್ಯನ ಮೇಲೆ ಸಮಗ್ರ ತನಿಖೆಯಾಗಬೇಕು. ಪಶು ಸಂಗೋಪನೆ ಮೇಲಧಿಕಾರಿಗಳು ವಸ್ತುಸ್ಥಿತಿ ಗಮನಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು.

| ಶಿವಪ್ಪ ಅಂಗಡಿ ಪುರಸಭೆ ಮಾಜಿ ಸದಸ್ಯ