ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಪ್ರಸ್ತುತ ಹಾಲು ಉತ್ಪಾದನೆಯಲ್ಲಿ ಶೇ.20ರಷ್ಟು ಏರಿಕೆಯಾಗಿದೆ. ಆದರೆ ಒಟ್ಟು ಉತ್ಪಾದನೆಯ ಅರ್ಧದಷ್ಟು ಮಾತ್ರ ಪ್ರತಿದಿನ ಮಾರಾಟವಾಗುತ್ತಿದೆ. ಈಗ ಸರ್ಕಾರ ಪ್ರತಿ ಪ್ಯಾಕೇಟ್‌ನಲ್ಲಿ 50 ಮಿಲೀ ಹೆಚ್ಚಳ ಮಾಡಿರುವುದರಿಂದ ಪ್ರತಿ ದಿನ ಸುಮಾರು 23 ಸಾವಿರ ಲೀಟರ್ ಹಾಲು ಹೆಚ್ಚುವರಿಯಾಗಿ ಮಾರಾಟವಾಗಲಿದೆ.
ಈಗ ಶುಭ ಸಮಾರಂಭಗಳು ಕಡಿಮೆಯಾಗಿರುವುದರಿಂದ ಹಾಲಿನ ಬೇಡಿಕೆ ಕುಸಿಯುತ್ತಲೇ ಇದೆ. ಅಧಿಕಾರಿಗಳು ಹೇಳುವ ಪ್ರಕಾರ ಈಗಿರುವ ವ್ಯವಸ್ಥೆ ಮೂರ್ನಾಲ್ಕು ತಿಂಗಳು ಮುಂದುವರಿದರೂ ಶಿಮುಲ್(ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಒಕ್ಕೂಟ)ಗೆ ಸ್ವಲ್ಪ ಮಟ್ಟಿಗೆ ಲಾಭವಾಗಲಿದೆ.
ಪ್ರತಿ ಪ್ಯಾಕೇಟ್‌ಗೆ 50 ಮಿಲೀ ಹಾಲನ್ನು ಸೇರಿಸುವುದಕ್ಕೆ ಶಿಮುಲ್‌ನಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಎದುರಾಗಿಲ್ಲ. ಹಾಲು ಮಾರಾಟಗಾರರಿಗೆ ಮಾತ್ರ ಚಿಲ್ಲರೆ ಒದಗಿಸುವ ತಾಪತ್ರಯ ಉಂಟಾಗಿದೆ. ಜನರು ಸರ್ಕಾರಕ್ಕೆ ಶಾಪ ಹಾಕುತ್ತಲೇ ಹಾಲು ಖರೀದಿಸುತ್ತಿದ್ದಾರೆ. ಈ ವ್ಯವಸ್ಥೆ ತಾತ್ಕಾಲಿಕವೇ? ಅಥವಾ ಶಾಶ್ವತವೇ ಎಂಬ ಬಗ್ಗೆಯೂ ಅಧಿಕಾರಿಗಳಿಗೆ ನಿಖರತೆಯಿಲ್ಲ.
ಪರಿವರ್ತನೆಯೂ ದುಬಾರಿ:ಹೆಚ್ಚುವರಿಯಾಗಿ ಉಳಿಯುತ್ತಿರುವ ಹಾಲನ್ನು ಹಾಲಿನ ಪುಡಿ, ಇಲ್ಲವೇ ಬೆಣ್ಣೆಯಾಗಿ ಪರಿವರ್ತಿಸಿದರೆ ಕೆಲ ಸಮಯ ಸಂರಕ್ಷಿಸಿ ಇಡಬಹುದು. ಮಾರುಕಟ್ಟೆ ಲಭ್ಯವಿದ್ದಾಗ ಅದನ್ನು ಹೊರಬಿಡಲು ಅಡ್ಡಿಯಿಲ್ಲ. ಆದರೆ ಈಗ ಹಾಲನ್ನು ಬೇರೆ ರೂಪಕ್ಕೆ ಪರಿವರ್ತಿಸುವುದೂ ಶಿಮುಲ್‌ಗೆ ದುಬಾರಿಯಾಗಿ ಪರಿಣಮಿಸಿದೆ.
ಪರಿವರ್ತನೆ ಮಾಡಲು ಹಾಲನ್ನು ರಾಮನಗರ, ಚನ್ನರಾಯಪಟ್ಟಣ, ಧಾರವಾಡ ಮುಂತಾದ ಕಡೆಗೆ ಕಳಿಸಬೇಕು. ಅದರ ಸಾಗಣೆ ವೆಚ್ಚ, ಅಲ್ಲಿ ತಯಾರಾದ ಹಾಲಿನ ಪುಡಿ, ಬೆಣ್ಣೆಯನ್ನು ಇಲ್ಲಿಗೆ ತರುವ ವೆಚ್ಚ ಹೊರೆಯಾಗುವ ಅಪಾಯವಿದೆ. ಹಾಗೆಂದು ಹೆಚ್ಚುವರಿ ಹಾಲನ್ನು ವ್ಯರ್ಥ ಮಾಡುವಂತಿಲ್ಲ. ಒಂದು ವೇಳೆ ಹಾಲಿನ ಪುಡಿ, ಬೆಣ್ಣೆ, ತುಪ್ಪವನ್ನು ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಿದರೂ ಸಕಾಲದಲ್ಲಿ ಹಣ ಕೈಸೇರುವ ಗ್ಯಾರಂಟಿಯಿಲ್ಲ. ಹೀಗಾಗಿ ಸದ್ಯಕ್ಕೆ ಅಧಿಕಾರಿಗಳು ಅಡಕತ್ತರಿಗೆ ಸಿಲುಕಿದ್ದಾರೆ.
ಪ್ರೋತ್ಸಾಹ ಧನ ಬಾಕಿ:ಶಿಮುಲ್ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು ಹೈನುಗಾರರಿಗೆ ಸುಮಾರು 9 ಕೋಟಿ ರೂ. ಪ್ರೋತ್ಸಾಹ ಧನವನ್ನು ಸರ್ಕಾರ ಬಿಡುಗಡೆ ಮಾಡಬೇಕು. ಕಳೆದ ವರ್ಷ ಅಕ್ಟೋಬರ್‌ನಿಂದ ಈ ವರ್ಷ ಫೆಬ್ರವರಿವರೆಗಿನ ಪ್ರೋತ್ಸಾಹ ಧನವನ್ನು ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲ. ಇದರ ಒಟ್ಟು ಮೊತ್ತ ಸುಮಾರು 95 ಕೋಟಿ ರೂ. ಈಗ ಪ್ಯಾಕೇಟ್‌ನಲ್ಲಿ ಹಾಲಿನ ಪ್ರಮಾಣ 50 ಮಿಲೀ ಹೆಚ್ಚಳ ಮಾಡಿ ಗ್ರಾಹಕರಿಗೆ ಎರಡು ರೂ. ಹೊರೆ ಮಾಡಿದರೂ ಇದರ ಪ್ರಯೋಜನ ಹೈನುಗಾರರಿಗೆ ತಲುಪದು.
ಬರದ ಕಾರಣ ರೈತರು ಶಿಫ್ಟ್: ಕಳೆದ ವರ್ಷ ಬರವಿದ್ದ ಕಾರಣ ಹಲವು ರೈತರು ಹೈನುಗಾರಿಕೆಯತ್ತ ಮುಖ ಮಾಡಿದ್ದರ ಪರಿಣಾಮ ಹಾಲು ಉತ್ಪಾದನೆಯಲ್ಲಿ ಶೇ.20ರಷ್ಟು ಹೆಚ್ಚಳವಾಗಿದೆ. ಹೈನುಗಾರರು ನೀಡಿದ ಹಾಲಿನ ಪ್ರಮಾಣಕ್ಕೆ ತಕ್ಕನಾದ ಮೊತ್ತವನ್ನು 10 ದಿನಕ್ಕೊಮ್ಮೆ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಹೀಗಾಗಿ ಹೈನುಗಾರಿಕೆಯಲ್ಲಿ ಹಣ ಗಳಿಕೆ ಖಾತ್ರಿ ಎಂಬ ಕಾರಣದಿಂದ ಹಾಲಿನ ಪ್ರಮಾಣ ಹೆಚ್ಚಾಗಿದೆ ಎಂದು ಶಿಮುಲ್ ಎಂಡಿ ಶೇಖರ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಒಂದೆಡೆ ನಿಶ್ಚಿತ ಆದಾಯ. ತಡವಾಗಿಯಾದರೂ ಕೈಸೇರುವ ಸರ್ಕಾರದ ಪ್ರೋತ್ಸಾಹ ಧನ, ಇದರ ನಡುವೆ ಶಿಮುಲ್‌ನಿಂದ ಇತರ ಕೆಲ ಲಾಭದಾಯಕ ಯೋಜನೆಗಳೂ ಹೈನುಗಾರರಿಗೆ ಸಿಗುತ್ತವೆ. ಇದರಿಂದ ಹೈನುಗಾರಿಕೆಯತ್ತ ಆಕರ್ಷಣೆ ಹೆಚ್ಚುತ್ತಿದೆ. ಆದರೆ ಬೇಡಿಕೆಗಿಂತ ಹೆಚ್ಚು ಹಾಲು ಉತ್ಪಾದನೆಯಾಗುತ್ತಿರುವುದರಿಂದ ಅದರ ನಿರ್ವಹಣೆ ಒಕ್ಕೂಟಕ್ಕೆ ಸವಾಲಾಗಿದೆ ಎಂದು ಹೇಳಿದ್ದಾರೆ.