ವೈಭವದ ಶ್ರೀಲಕ್ಷ್ಮೀಕಾಂತಸ್ವಾಮಿ ರಥೋತ್ಸವ

ನಂಜನಗೂಡು: ವೇಣುಪುರಿ ಎಂದೇ ಪುರಾಣ ಪ್ರಸಿದ್ಧಿ ಹೊಂದಿರುವ ತಾಲೂಕಿನ ಕಳಲೆ ಗ್ರಾಮದ ಶ್ರೀಲಕ್ಷ್ಮೀಕಾಂತಸ್ವಾಮಿಯ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಉತ್ಸವಮೂರ್ತಿಯ ವಿಜೃಂಭಣೆಯ ರಥೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.

ಬೆಳಗ್ಗೆ 7.47 ರಿಂದ 8.10ವರೆಗೆ ಸಲ್ಲುವ ಶುಭ ಮೇಷ ಲಗ್ನದಲ್ಲಿ ಧಾರ್ಮಿಕ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಬಗೆಬಗೆಯ ಪುಷ್ಪಾಲಂಕಾರದಿಂದ ಸಿಂಗರಿಸಲಾಗಿದ್ದ ಅರವಿಂದನಾಯಕಿ ಅಮ್ಮ ಹಾಗೂ ಆಂಡಾಳಮ್ಮ ಜತೆಗಿನ ಲಕ್ಷ್ಮೀಕಾಂತಸ್ವಾಮಿಯ ಉತ್ಸವಮೂರ್ತಿಗೆ ಪಾರುಪತ್ತೇಗಾರ್ ಜಯರಾಂ ನೇತೃತ್ವದಲ್ಲಿ ಧಾರ್ಮಿಕ ಪೂಜಾ ಕಾರ್ಯಗಳು ಸಾಂಗವಾಗಿ ಜರುಗಿದವು.

ನಂತರ ಮಂಗಳ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆಯಲ್ಲಿ ಉತ್ಸವಮೂರ್ತಿಯನ್ನು ಕರೆತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ರಥದ ಚಕ್ರಗಳಿಗೆ ಪೂಜೆ ಸಲ್ಲಿಸಿ ಈಡುಗಾಯಿ ಒಡೆಯುವ ಮೂಲಕ ವಿಧ್ಯುಕ್ತ ಚಾಲನೆ ನೀಡಲಾಯಿತು.

ದೇಗುಲದ ಅರ್ಚಕರು ಮಂತ್ರ ಘೋಷಗಳೊಂದಿಗೆ ರಥದ ಹಿಂದೆ ಸಾಗಿದರೆ, ಮುಂಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತ ಸಮೂಹ ರಥವನ್ನು ಎಳೆಯುವ ಮೂಲಕ ಹರ್ಷೋದ್ಘಾರ ಮೊಳಗಿಸಿತು.
ರಥವು ಅಗ್ರಹಾರ ಬೀದಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸರ್ಕಾರಿ ಪ್ರೌಢಶಾಲೆ ಮುಂಭಾಗದಲ್ಲಿ ನಿಂತಿತು. ಮತ್ತೆ ಸಂಜೆ ವೇಳೆ ಗ್ರಾಮದ ಹಲವು ಬೀದಿಗಳಲ್ಲಿ ರಥ ಸಂಚರಿಸಿ ದೇವಾಲಯದ ಮುಂಭಾಗದಲ್ಲಿರುವ ಸ್ವಸ್ಥಾನಕ್ಕೆ ಮರಳಿತು.

ರಥೋತ್ಸವದ ವೇಳೆ ನವ ದಂಪತಿಗಳು, ಭಕ್ತರು ಹಣ್ಣು ದವನ ಎಸೆದು ಭಕ್ತಿ ಮೆರೆದರು. ನಾನಾ ಕಡೆಯಿಂದ ಆಗಮಿಸಿದ್ದ ಭಕ್ತರು ಲಕ್ಷ್ಮೀಕಾಂತಸ್ವಾಮಿಯ ಉತ್ಸವಮೂರ್ತಿಯನ್ನು ಕಣ್ತುಂಬಿಕೊಂಡರು. ರಥೋತ್ಸದ ಸಂದರ್ಭದಲ್ಲಿ ಗಾರುಡಿ ಗೊಂಬೆ, ಕಂಸಾಳೆ ತಂಡಗಳ ಕಲಾ ಪ್ರದರ್ಶನ ಗಮನ ಸೆಳೆಯಿತು. ದೇವಾಲಯದಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು. ಸಂಘ ಸಂಸ್ಥೆಗಳು ಪಾನಕ, ಮಜ್ಜಿಗೆ ವಿತರಿಸಿ ದಣಿವು ನಿವಾರಿಸಿದರು. ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಎಚ್.ಎಂ.ಕುಮಾರಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಸರ್ಕಲ್ ಇನ್ಸ್‌ಪೆಕ್ಟರ್ ಶೇಖರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.