ಡಾನ್ ಸಹಚರರ ಮೇಲೆ ಖಾಕಿ ಕಣ್ಣು

<ಆರ್‌ಎಸ್‌ಎಸ್ ಮುಖಂಡರ ಕೊಲೆಗೆ ಸಂಚು ಪ್ರಕರಣ>

ಕಾಸರಗೋಡು/ಬಂಟ್ವಾಳ: ಡಾ.ಕಲ್ಲಡ್ಕ ಪ್ರಭಾಕರ ಭಟ್ ಸೇರಿದಂತೆ, ಆರ್‌ಎಸ್‌ಎಸ್ ಮುಖಂಡರ ಹತ್ಯೆಗೆ ಸಂಚು ರೂಪಿಸಿರುವ ಶಂಕೆಯಲ್ಲಿ ದೆಹಲಿ ಪೊಲೀಸರು ಬಂಧಿಸಿದ ಚೆಮ್ನಾಡ್ ಪಂಚಾಯಿತಿ ವ್ಯಾಪ್ತಿಯ ಚೆಂಬರಿಕ ನಿವಾಸಿ, ಸಿ.ಎಂ ಮುಹತಾಸಿಂ ಅಲಿಯಾಸ್ ತಾಸಿಂ, ಯಾನೆ ಡಾನ್(41)ಸಹಚರರ ಮೇಲೆ ಪೊಲೀಸರು ನಿಗಾ ಇರಿಸಿದ್ದಾರೆ.

ಜಿಲ್ಲೆಯ ಹಲವರ ಚಲನವಲನ ಗಮನಿಸುತ್ತಿರುವ ಪೊಲೀಸರು, ಮುಹತಾಸಿಂ ಸಂಪರ್ಕವನ್ನು ಜಾಲಾಡುತ್ತಿದ್ದಾರೆ. ಕೇರಳ, ಕರ್ನಾಟಕದ ವಿವಿಧೆಡೆ ಮುಹತಾಸಿಂ ಸಂಪರ್ಕ ಹೊಂದಿದ್ದ ಎಂದು ಗುಪ್ತಚರ ವಿಭಾಗ ಪೊಲೀಸರಿಗೆ ಮಾಹಿತಿ ನೀಡಿದೆ. ಮುಹತಾಸಿಂ ಬಂಧನದಿಂದ ಉಗ್ರ ಸಂಘಟನೆ ಐಸಿಸ್, ಕೇರಳ ಹಾಗೂ ಕರ್ನಾಟಕದಲ್ಲಿ ತನ್ನ ಬೇರು ವಿಸ್ತರಿಸಿಕೊಳ್ಳುತ್ತಿರುವುದು ಖಚಿತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಲ್ಲಡ್ಕಕ್ಕೆ ಬಂದು ವಾಪಸಾದ ಭಟ್: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್ ಸೋಮವಾರ ಪೊಲೀಸ್ ಭದ್ರತೆಯೊಂದಿಗೆ ಕಲ್ಲಡ್ಕಕ್ಕೆ ಆಗಮಿಸಿ, ಶ್ರೀರಾಮ ಮಂದಿರದಲ್ಲಿ 43ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲಿ ಭಾಗವಹಿಸಿ ರಾತ್ರಿ ಬೆಂಗಳೂರಿಗೆ ಮರಳಿದ್ದಾರೆ.

ಹತ್ಯೆ ಸಂಚು ಹಿನ್ನೆಲೆಯಲ್ಲಿ ಗುರುವಾರ ಅವರನ್ನು ಪೊಲೀಸರು ಬೆಂಗಳೂರಿಗೆ ಕರೆದೊಯ್ದು ಭದ್ರತೆ ಒದಗಿಸಿದ್ದರು. ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಪ್ರತಿ ವರ್ಷವೂ ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ಸತ್ಯನಾರಾಯಣ ಪೂಜೆ ಡಾ.ಭಟ್ ನೇತೃತ್ವದಲ್ಲೇ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಬಿಗು ಭದ್ರತೆಯೊಂದಿಗೆ ಸೋಮವಾರ ಮಧ್ಯಾಹ್ನ ಆಗಮಿಸಿದ ಕಲ್ಲಡ್ಕ ಭಟ್, ಸತ್ಯನಾರಾಯಣ ಪೂಜೆ ಮತ್ತು ಮಂದಿರದ ಮುಂಭಾಗ ನೂತನವಾಗಿ ಅಳವಡಿಸಿರುವ ಹೈಮಾಸ್ಟ್ ದೀಪ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮಂದಿರದ ಲಿಫ್ಟ್‌ಅನ್ನೂ ಉದ್ಘಾಟನೆಯೂ ನಡೆಯಿತು. ನಂತರ ಧಾರ್ಮಿಕ ಸಭೆಯಲ್ಲಿ , ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.

ಮನೆಯಲ್ಲಿ ಯಾರೂ ಇಲ್ಲ: ಡಾ.ಪ್ರಭಾಕರ ಭಟ್ ಅವರ ಕಲ್ಲಡ್ಕ ನಿವಾಸದಲ್ಲಿ ಪ್ರಸ್ತುತ ಯಾರೂ ವಾಸವಿಲ್ಲ. ಪತ್ನಿ ಕಮಲಾ ಭಟ್ ಮಂಗಳೂರಿನಲ್ಲಿದ್ದಾರೆ. ಮನೆ ಬಳಿ ಒಬ್ಬ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ರಾಮಭಕ್ತಿ ಹನುಮ ಶಕ್ತಿ ಇದ್ದರೆ ದೇಶ ಸುಭಿಕ್ಷವಾಗಿರುತ್ತದೆ. ಪ್ರಭಾಕರ ಎಂಬ ಪದಕ್ಕೆ ಬೆಳಕು ನೀಡುವವರು ಎಂದು ಅರ್ಥ. ಕಲ್ಲಡ್ಕ ಪ್ರಭಾಕರ ಭಟ್ ಸಮಾಜಕ್ಕೆ ಬೆಳಕು ನೀಡುವ ಕಾರ್ಯ ಮಾಡುತ್ತಿದ್ದಾರೆ. ಅವರಿಗೆ ಯಾವುದೇ ಆಪತ್ತು ಬಾರದಿರಲಿ.
– ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ

ರಾಮಮಂದಿರ ಆಗದೆ ವಿಶ್ರಾಂತಿ ಇಲ್ಲ: ಪೇಜಾವರ ಶ್ರೀ
ಬಂಟ್ವಾಳ: ರಾಮಮಂದಿರ ಆಗದೆ ವಿಶ್ರಾಂತಿ ಇಲ್ಲ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ 43ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ರಾಮನ ಸೇವೆ ಮಾಡಲು ಕಟಿಬದ್ಧರಾಗಿ, ವಿಶೇಷ ಪ್ರಾರ್ಥನೆ ಮಾಡಿರಿ. ರಾಮ ಸೇವಕರಾಗಿ ಹನುಮಂತನಂತೆ ಸದಾ ದುಡಿಯಿರಿ ಎಂದು ಭಕ್ತರಿಗೆ ಕರೆ ನೀಡಿದರು.

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಅಧ್ಯಕ್ಷ ನಾರಾಯಣ ಸೋಮಯಾಜಿ, ಮಂದಿರದ ಅಧ್ಯಕ್ಷ ಚೆನ್ನಪ್ಪ ಆರ್. ಕೋಟ್ಯಾನ್, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಜಿಪಂ ಸದಸ್ಯೆ ಕಮಲಾಕ್ಷಿ ಪೂಜಾರಿ, ಕ.ಕೃಷ್ಣಪ್ಪ, ದಿನೇಶ್ ಅಮ್ಟೂರು, ಸುಜಿತ್ ಕೊಟ್ಟಾರಿ ಮತ್ತಿತರರು ಉಪಸ್ಥಿತರಿದ್ದರು. ಕಶೆಕೋಡಿ ಸೂರ್ಯನಾರಾಯಣ ಭಟ್ ನೇತೃತ್ವದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು.