ಅಭಿವೃದ್ಧಿ ಕಾಣದ ಖೈಬರ್ ಪಾಸ್

< ಈ ಕಾಲುದಾರಿಯಲ್ಲಿ ಅಡ್ಡಾಡಲು ಭಯ >

ಪಿ.ಬಿ.ಹರೀಶ್ ರೈ ಮಂಗಳೂರು

ಒಂದೆಡೆ ಕಸದ ರಾಶಿ…ಇನ್ನೊಂದೆಡೆ ಪಾಳು ಬಿದ್ದಿರುವ ನಿರ್ಮಾಣ ಹಂತದ ಕಟ್ಟಡ… ವಾಹನ ಸಂಚರಿಸದಂತೆ ಅಡ್ಡವಾಗಿ ಕಲ್ಲಿನ ತಡೆ… ದುರಸ್ತಿಯಾಗದ ರಸ್ತೆ, ದ್ವಿಚಕ್ರ ಸಂಚಾರಕ್ಕೂ ಯೋಗ್ಯವಾಗಿಲ್ಲ. ಜನ ನಡೆದಾಡಲು ಕೂಡ ಸಂಕಷ್ಟ..

ಇದು ಮಂಗಳೂರು ನಗರದ ಕೊಡಿಯಾಲ್‌ಬೈಲ್‌ನ ಖೈಬರ್ ಪಾಸ್‌ನ ದುಃಸ್ಥಿತಿ!
ನಗರದ ಪಿವಿಎಸ್ ಸರ್ಕಲ್‌ನಿಂದ ಕೆ.ಎಸ್.ರಾವ್ ರಸ್ತೆ ಸಂಪರ್ಕಿಸಲು ಪಾದಚಾರಿಗಳು ನವಭಾರತ ಸರ್ಕಲ್ ಸುತ್ತಿ ಬರುವ ಬದಲು, ನೇರ ಖೈಬರ್ ಪಾಸ್ ಮೂಲಕ ಬರಬಹುದು. ದಶಕಗಳ ಹಿಂದೆ ಕಿರು ದಾರಿಯಾಗಿದ್ದ ಖೈಬರ್ ಪಾಸ್ ಈಗ ಅಗಲವಾಗಿದೆ. ಆದರೆ ಇದರ ಸ್ಥಿತಿಯನ್ನು ಗಮನಿಸಿದರೆ ಈ ರಸ್ತೆ ಮಂಗಳೂರು ಮಹಾನಗರ ಪಾಲಿಕೆ ಅಧೀನದಲ್ಲಿ ಇದೆಯಾ ಎನ್ನುವ ಪ್ರಶ್ನೆ ಮೂಡುತ್ತದೆ.

 ಕೇಳುವವರಿಲ್ಲ: ಖೈಬರ್ ಪಾಸ್ ಚತುಷ್ಚಕ್ರ ವಾಹನ ಸಂಚರಿಸುವಷ್ಟು ಅಗಲವಿದೆ. ಆದರೆ ಟ್ರಾಫಿಕ್ ವ್ಯವಸ್ಥೆಗೆ ತೊಂದರೆಯಾಗಬಹುದೆಂದು ಈ ರಸ್ತೆ ಮೂಲಕ ವಾಹನ ಸಂಚಾರಕ್ಕೆ ಅವಕಾಶ ನೀಡಿಲ್ಲ. ದ್ವಿಚಕ್ರ ವಾಹನ ಸಂಚರಿಸುವುದನ್ನು ತಡೆಯಲು ಮಧ್ಯೆ ತಡೆಗೋಡೆ ನಿರ್ಮಿಸಲಾಗಿತ್ತು. ಈಗ ತಡೆಗೋಡೆ ಅರ್ಧ ಒಡೆದು ತೆಗೆಯಲಾಗಿದೆ. ಅದೇ ಗೋಡೆಯ ಕಲ್ಲುಗಳನ್ನು ರಸ್ತೆ ಅಡ್ಡವಾಗಿ ಇಡಲಾಗುತ್ತದೆ. ದೊಡ್ಡ ಗಾತ್ರದ ಒಣಗಿದ ಮರ ಕೂಡ ರಸ್ತೆಗೆ ಅಡ್ಡವಾಗಿ ಬಿದ್ದಿದೆ. ದ್ವಿಚಕ್ರ ಸವಾರರು ಈ ಕಲ್ಲುಗಳನ್ನು ಸರಿಸಿ ಆ ಬದಿಗೆ ಸಂಚರಿಸುವ ದೃಶ್ಯ ಸಾಮಾನ್ಯವಾಗಿದೆ. ಇಷ್ಟಕ್ಕೂ ಇಲ್ಲಿ ಗೋಡೆ ಒಡೆದವರು ಯಾರು? ರಸ್ತೆಗೆ ಅಡ್ಡವಾಗಿ ಕಲ್ಲು ಇಡುವವರು ಯಾರು? ಎಂದು ನಗರ ಪಾಲಿಕೆ ಆಡಳಿತವನ್ನು ಪ್ರಶ್ನಿಸಿದರೆ ಅವರಲ್ಲಿ ಉತ್ತರ ಇಲ್ಲ.

ಅನೈತಿಕ ಚಟುವಟಿಕೆಯ ತಾಣ: ಖೈಬರ್ ಪಾಸ್‌ನ ಒಂದು ಬದಿಯಲ್ಲಿ ನಿರ್ಮಾಣ ಹಂತದ ಒಂದು ಕಟ್ಟಡ ದಶಕಗಳಿಂದ ಪಾಳುಬಿದ್ದಿದೆ. ಖಾಸಗಿಯವರು ನಿರ್ಮಿಸಿದ ಈ ಕಟ್ಟಡದ ಜಾಗದ ಬಗ್ಗೆ ವಿವಾದ ಎನ್ನಲಾಗಿದೆ. ಹಾಗಾಗಿ ಕಟ್ಟಡವನ್ನು ತೆರವುಗೊಳಿಸುವುದು ಸಾಧ್ಯವಿಲ್ಲ. ಈ ಕಟ್ಟಡ ಈಗ ಅನೈತಿಕ ಚಟುವಟಿಕೆಯ ತಾಣವಾಗಿದೆ ಎನ್ನುತ್ತಾರೆ ಸ್ಥಳೀಯರು. ಕಟ್ಟಡದ ಶಟರ್‌ಗಳು ತೆರೆದಿದ್ದು, ಅದರ ಮೂಲಕ ಕೆಲವರು ಒಳ ಪ್ರವೇಶಿಸುತ್ತಾರೆ. ಕುಡುಕರೂ ಈ ಕಟ್ಟಡವವನ್ನು ಬಳಸುತ್ತಿದ್ದಾರೆ. ರಾತ್ರಿ ವೇಳೆ ಖೈಬರ ಪಾಸ್‌ನಲ್ಲಿ ನಡೆದಾಡುವುದೇ ಅಪಾಯಕಾರಿ ಎನ್ನುವ ಸ್ಥಿತಿ ಇದೆ.

ಮನಪಾ ನಿರ್ಲಕ್ಷೃ: ಖೈಬರ್ ಪಾಸ್ ನಗರ ಪಾಲಿಕೆಯ ಪೋರ್ಟ್ ವಾರ್ಡ್ ಮತ್ತು ಸೆಂಟ್ರಲ್ ಮಾರ್ಕೆಟ್ ವಾರ್ಡ್‌ಗಳ ಗಡಿ ಭಾಗವಾಗಿದೆ. ಇದರಿಂದ ಅಭಿವೃದ್ಧಿ ಕಾರ್ಯಕ್ಕೆ ತೊಡಕು ಉಂಟಾಗಿದೆ ಎನ್ನಲಾಗಿದೆ. ಖೈಬರ್ ಪಾಸ್ ಅಭಿವೃದ್ಧಿಗೆಂದು ಪಾಲಿಕೆ ಒಂದಷ್ಟು ಹಣ ಸುರಿದಿದೆ. ಆದರೆ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಈಗ 15 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸುವ ಪ್ರಸ್ತಾವನೆ ಪಾಲಿಕೆ ಮುಂದಿದೆ. ಅದು ಕಾರ್ಯಗತವಾಗುವ ತನಕ ರಸ್ತೆ ಇದೇ ಸ್ಥಿತಿಯಲ್ಲಿ ಇರಲಿದೆ.

ಖೈಬರ್ ಪಾಸ್‌ನ ಎರಡು ಬದಿ ಗಾರ್ಡನ್ ಸಹಿತ ವಿಶಾಲ ಫುಟ್‌ಪಾತ್ ನಿರ್ಮಿಸಿ ಪಾದಚಾರಿಗಳಿಗೆ ಉತ್ತಮ ವ್ಯವಸ್ಥೆ ಕಲ್ಪಿಸಬೇಕು. ರಸ್ತೆ ಎರಡು ತುದಿ ಸುಸಜ್ಜಿತ ಆಟೋ ಪಾರ್ಕ್ ನಿರ್ಮಿಸಬಹುದು. ನಿರ್ಮಾಣ ಹಂತದಲ್ಲಿರುವ ಹಳೇ ಕಟ್ಟಡವನ್ನು ತೆರವುಗೊಳಿಸಿ ಈ ಪ್ರದೇಶವನ್ನು ಜನ ಸಂಚಾರಕ್ಕೆ ಸಹ್ಯವಾಗಿಸಬೇಕು.
ಕಿಶೋರ್, ಖಾಸಗಿ ಸಂಸ್ಥೆಯ ಉದ್ಯೋಗಿ