ಬೆಂಗಳೂರು: ಖಾದಿ ಉತ್ಪನ್ನಗಳನ್ನು ಜನರಿಗೆ ತಲುಪಿಸುವುದು ಮತ್ತು ಖಾದಿ ಉದ್ಯಮಕ್ಕೆ ಪ್ರೋತ್ಸಾಹ ನೀಡಲು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿರುವ 1 ತಿಂಗಳ ‘ಖಾದಿ ಉತ್ಸವ 2020’ಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುವಾರ ಚಾಲನೆ ನೀಡಿದರು.
ಗ್ರಾಮೀಣ ಭಾಗದಲ್ಲಿ ಉದ್ಯೋಗಾವಕಾಶ ಸೃಷ್ಟಿಸುವ ಖಾದಿ ಉದ್ಯಮವನ್ನು ಪ್ರೋತ್ಸಾಹಿಸಲು ಪ್ರತಿವರ್ಷ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಖಾದಿ ಉತ್ಸವ ಆಯೋಜಿಸುತ್ತಿದೆ. ಈ ಬಾರಿಯ ಉತ್ಸವ ಫೆ.14ರವರೆಗೆ ನಡೆಯಲಿದೆ. ಉತ್ಸವದಲ್ಲಿ 200ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ. ಅವುಗಳಲ್ಲಿ ಖಾದಿ, ರೇಷ್ಮೆ, ಚನ್ನಪಟ್ಟಣದ ಗೊಂಬೆಗಳು, ಸಾವಯವ ಉತ್ಪನ್ನಗಳು ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ. 250 ರೂ.ನಿಂದ 10 ಸಾವಿರ ರೂ.ವರೆಗಿನ ಖಾದಿ, ರೇಷ್ಮೆ ಉತ್ಪನ್ನಗಳು ಮಾರಾಟಕ್ಕಿವೆ. ಶರ್ಟ್ಗಳು, ಬಂಡಿ ಕೋಟ್ ಹೀಗೆ ಹಲವು ಖಾದಿ ಉತ್ಪನ್ನಗಳು ಜನರನ್ನು ಸೆಳೆಯುತ್ತಿವೆ.
ಚರಕ, ಕೈಮಗ್ಗ ಪ್ರದರ್ಶನ: ಉತ್ಸವದಲ್ಲಿ ಗಾಂಧಿ ಬಳಸುತ್ತಿದ್ದ ಚರಕದ ಮಾದರಿ ಇರಿಸಲಾಗಿದೆ. ತನ್ಮೂಲಕ ನೂಲು ಉತ್ಪಾದಿಸುವ ಬಗೆಯನ್ನು ಜನರಿಗೆ ತಿಳಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಡಿಸಿಎಂ ಗೋವಿಂದ ಕಾರಜೋಳ, ಸಚಿವರಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಎಂ. ಮಹೇಶ್ವರರಾವ್, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ನಿರ್ದೇಶನಾಲಯ ಎಸ್. ಜಿಯಾವುಲ್ಲಾ ಉಪಸ್ಥಿತರಿದ್ದರು.
ಖಾದಿ ಉದ್ಯಮ ಉಳಿಸಿ
ಖಾದಿ ಉದ್ಯಮ ಕಷ್ಟದಲ್ಲಿದೆ. ಸರ್ಕಾರ ಕೊಡುತ್ತಿರುವ ಅನುದಾನ ಯಾವುದಕ್ಕೂ ಸಾಲುತ್ತಿಲ್ಲ. ಹೀಗಾಗಿ ಉದ್ಯಮ ಉಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಮನವಿ ಮಾಡಿದರು. ಖಾದಿ ಉತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರಲ್ಲಿ ಸ್ವದೇಶಿ ಭಾವನೆ ಬಂದಾಗ ಮಾತ್ರ ಖಾದಿ ಉತ್ಪನ್ನಗಳ ಮಾರಾಟ ಹೆಚ್ಚುತ್ತದೆ. ಡಿಎಂಕೆ, ಎಐಎಡಿಎಂಕೆ ಕಾರ್ಯಕರ್ತರು ಖಾದಿ ಉತ್ಪನ್ನಗಳನ್ನೇ ಕೊಳ್ಳುತ್ತಾರೆ. ಅದನ್ನೇ ಇತರ ಪಕ್ಷಗಳ ಕಾರ್ಯಕರ್ತರು ಅನುಸರಿಸಬೇಕು ಎಂದರು.
ರಾಜ್ಯದಲ್ಲಿ 179 ಖಾದಿ ಸಂಘ
ರಾಜ್ಯದಲ್ಲಿ 179 ಖಾದಿ ಸಂಘ-ಸಂಸ್ಥೆಗಳಿವೆ. ಅವುಗಳಿಗೆ 2018-19ನೇ ಸಾಲಿಗೆ 17 ಕೋಟಿ ರೂ. ಅಭಿವೃದ್ಧಿ ಸಹಾಯಧನ ನೀಡಲಾಗಿದೆ. ಪ್ರೋತ್ಸಾಹ ಮಜೂರಿಯಡಿ ನೂಲುಗಾರರಿಗೆ ಅಡಿಗೆ 3 ರೂ., ನೇಕಾರರಿಗೆ ಪ್ರತಿ ಮೀಟರ್ಗೆ 6-7 ರೂ., ಇತರ ಕಸುಬುದಾರರಿಗೆ ದಿನಕ್ಕೆ -ಠಿ;9.50 ಹಾಗೂ ಖಾದಿ ಕಾರ್ಯಕರ್ತರಿಗೆ ಉತ್ಪಾದನೆಯ ಮೇಲೆ ಶೇ.9 ಅನುದಾನ ನೀಡಲಾಗಿದೆ. ಒಟ್ಟು 17 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ.
ಖಾದಿ ಉದ್ಯಮವು ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಸುತ್ತದೆ. ತನ್ಮೂಲಕ ನಗರಕ್ಕೆ ವಲಸೆ ತಡೆಯುತ್ತಿದೆ. ಚರಕದ ಸದ್ದು ಕೇಳುವ ಹಳ್ಳಿಯಲ್ಲಿ ಬಡತನ ಮತ್ತು ನಿರುದ್ಯೋಗ ಇರುವುದಿಲ್ಲ ಎಂದು ಗಾಂಧೀಜಿ ಹೇಳಿದ್ದರು. ಖಾದಿ ಉದ್ಯಮದ ಅಭಿವೃದ್ಧಿಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು.
| ಬಿ.ಎಸ್. ಯಡಿಯೂರಪ್ಪ ಸಿಎಂ