ಗೊಳಸಂಗಿ: ಸಮೀಪದ ವಂದಾಲ ಗ್ರಾಮದಲ್ಲಿ ಸೋಮವಾರ ಬೀಸಿದ ಭೀಕರ ಮಳೆಗಾಳಿಗೆ ಕರ್ನಾಟಕ ಖಾದಿ ಕೇಂದ್ರದ ಮೇಲ್ಛಾವಣಿ ಸಂಪೂರ್ಣ ಕಿತ್ತುಹೋಗಿ ಹಲವಾರು ಕೈಮಗ್ಗದ ಸಲಕರಣೆಗಳು ಮುರಿದು ಲಕ್ಷಾಂತರ ರೂ. ಹಾನಿಗೊಳಗಾಗಿದೆ.
ಅಂದಾಜು 80 ಪತ್ರಾಸ್‌ಗಳು ಹಾರಿ ಹೋಗಿವೆ. ಖಾದಿ ಕೇಂದ್ರದ ಮೇಲೆ ಮತ್ತು ಅಕ್ಕಪಕ್ಕದಲ್ಲಿದ್ದ ನಾಲ್ಕೈದು ಗಿಡಮರಗಳು ಉರುಳಿ ಬಿದ್ದಿವೆ. ಕೇಂದ್ರದ ಹೊರ ಆವರಣದಲ್ಲಿದ್ದ ದುಂಡಪ್ಪ ಗುರಪ್ಪ ಗಂಜ್ಯಾಳ ಎಂಬುವವರ ಚಕ್ಕಡಿಯೂ ಸಂಪೂರ್ಣ ನುಚ್ಚು ನೂರಾಗಿದೆ.
ಕೇಂದ್ರದೊಳಗಿದ್ದ 20 ಮಗ್ಗಗಳ ಪೈಕಿ 10 ರಿಂದ 15 ಮಗ್ಗಗಳು ಮುರಿದಿವೆ. ಐದಾರು ತಿಂಗಳಿಂದ ಕಚ್ಚಾ ನೂಲು ಪೂರೈಸದೆ ಇರುವುದರಿಂದಾಗಿ ಕೇಂದ್ರ ಚಟುವಟಿಕೆಯಿಂದ ಸಂಪೂರ್ಣ ಸ್ತಬ್ಧಗೊಂಡಿದ್ದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ವ್ಯವಸ್ಥಾಪಕ ಶಂಕ್ರಪ್ಪ ಬಸರಕೋಡ ತಿಳಿಸಿದ್ದಾರೆ.