ವಿದೇಶಿ ಮಹಿಳೆ ಡಿಸ್ಚಾರ್ಜ್

ಉಡುಪಿ: ಮಂಗನಕಾಯಿಲೆ ಕಾಯಿಲೆ ಸೋಂಕಿನಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ನೇಪಾಳ ಮೂಲದ ಫ್ರಾನ್ಸ್‌ನ ಮಹಿಳಾ ಪ್ರಜೆ ಮಂಗಳವಾರ ಡಿಸ್ಚಾರ್ಜ್ ಆಗಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಪ್ರವಾಸಕ್ಕೆ ಬಂದಿದ್ದ ವಿದೇಶದ ಒಂದು ತಂಡದಲ್ಲಿ ಈಕೆ ಒಬ್ಬರಾಗಿದ್ದರು. ಉತ್ತರ ಕನ್ನಡ ಜಿಲ್ಲೆ ಗೋಕರ್ಣ, ಯಾಣಕ್ಕೆ ಭೇಟಿ ನೀಡಿದ್ದರು. ಜ್ವರ ಉಲ್ಬಣಗೊಂಡ ಬಳಿಕ ಮಣಿಪಾಲಕ್ಕೆ ಆಗಮಿಸಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಬಳಿಕ ಚೇತರಿಕೆ ಕಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ, ಸಾಗರ ತಾಲೂಕಿನ 25 ಮಂದಿಗೆ ಚಿಕಿತ್ಸೆ ಮುಂದುವರಿಯುತ್ತಿದೆ.

ಮುಂದುವರಿದ ಮಂಗಗಳ ಸಾವು: ಜಿಲ್ಲೆಯಲ್ಲಿ ಮಂಗಗಳ ಸಾವಿನ ಸರಣಿ ಮುಂದುವರಿದಿದ್ದು, ಸಾವಿನ ಸಂಖ್ಯೆ 131ಕ್ಕೆ ಏರಿಕೆಯಾಗಿದೆ. ಮಂಗಳವಾರ ನಂದಳಿಕೆ, ಕಾಡುಹೊಳೆ, ಕೊಡ್ಲಾಡಿ, ಮಂಡಲ್ಲಿ, ಶಿರಾಲು, ವಂಡ್ಸೆಯಲ್ಲಿ 6 ಮಂಗಗಳು ಸಾವಿಗೀಡಾಗಿವೆ. ಮಂಡಳ್ಳಿ, ವಂಡ್ಸೆಯಲ್ಲಿ ಮೃತಪಟ್ಟ ಮಂಗಗಳ ಶವ ಪರೀಕ್ಷೆ ನಡೆಸಿ ಅಂಗಾಂಗ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದುವರೆಗೆ 46 ಮಂಗಗಳ ಶವಪರೀಕ್ಷೆ ನಡೆಸಲಾಗಿದ್ದು, 40 ಮಂಗಗಳ ವರದಿ ಬಂದಿದೆ. 12 ಪಾಸಿಟಿವ್, 28 ನೆಗೆಟಿವ್ ವರದಿ ಬಂದಿದೆ.