ದಾವಣಗೆರೆ: ಸ್ತ್ರೀಯರು ಆರ್ಥಿಕವಾಗಿ ಸಶಕ್ತರಾದರೆ ಸಮಾನತೆಯ ದಾರಿ ಸುಗಮವಾಗಲಿದೆ ಎಂದು ದಾವಣಗೆರೆ- ಹರಿಹರ ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ ಕೆ.ಶಟ್ಟಿ ಅಭಿಪ್ರಾಯ ಪಟ್ಟರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸುವತ್ತ ಹೆಚ್ಚಿನ ನಿಗಾ ವಹಿಸಬೇಕು ಎಂದರು.
ಪುರುಷರಿಗಿರುವ ಎಲ್ಲ ಸೌಲಭ್ಯ, ಸ್ವಾತಂತ್ರ್ಯನ್ನು ಮಹಿಳೆಯರಿಗೂ ನೀಡಬೇಕು.ಇದಕ್ಕಾಗಿ ಮಹಿಳೆಯರು ಹೋರಾಟಕ್ಕೆ ಧುಮಕಬೇಕು. ಯಾವುದೇ ಕೆಲಸಕ್ಕೆ ಇಂತಿಷ್ಟು ವೇತನ ನಿಗದಿ ಪಡಿಸಲಾಗಿರುತ್ತದೆ. ಆದರೆ ಬೆಳಗ್ಗೆಯಿಂದ ರಾತ್ರಿ ಮಲಗುವ ತನಕ ಮಕ್ಕಳ ಪಾಲನೆ, ಪೋಷಣೆ, ಊಟ, ಉಪಾಹಾರದ ಕಾಳಜಿ ಮಾಡುವ ಮಹಿಳೆಗೆ ಯಾವ ವೇತನವೂ ಇಲ್ಲ. ಇವರಿಗೆ ಕೋಟಿ ಕೊಟ್ಟರೂ ಸಾಲದು ಎಂದರು.
ಜಿಪಂ ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 2023-24 ನೇ ಸಾಲಿನಲ್ಲಿ ಸಾಧನೆ ಮಾಡಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾ ದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಬಾರ್ಡ್ ಸಂಸ್ಥೆಯ ರಶ್ಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಜಾನಾಯ್ಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ, ಅಂಗನವಾಡಿ ಕಾರ್ಯ ಕರ್ತೆಯರು ಉಪಸ್ಥಿತರಿದ್ದರು.
ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ನಬಾರ್ಡ್ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.