ಕುಡಿಯುವ ನೀರಿಗೆ ಆಗ್ರಹಿಸಿ ಪಪಂಗೆ ಮಹಿಳೆಯರ ಮುತ್ತಿಗೆ

ಕೆರೂರ: ಸಮರ್ಪಕ ಕುಡಿವ ನೀರು ಪೂರೈಸಲು ಆಗ್ರಹಿಸಿ ಪಟ್ಟಣದ ಹರಣಶಿಕಾರಿ ಗಲ್ಲಿಯ ಮಹಿಳೆಯರು ಖಾಲಿ ಕೊಡಗಳೊಂದಿಗೆ ಪಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

15 ದಿನಗಳಿಂದ ಗಲ್ಲಿಯಲ್ಲಿ ಕುಡಿವ ನೀರಿನ ಸರಬರಾಜು ನಿಂತಿದ್ದು, ಇದ್ದ ಕೊಳವೆ ಬಾವಿ ದುರಸ್ತಿಯಲ್ಲಿದ್ದು, ನೀರೂ ಕಲುಷಿತಗೊಂಡಿದೆ. ಈ ಕುರಿತು ಪಟ್ಟಣ ಪಂಚಾಯಿತಿಗೆ ಹಲವಾರು ಬಾರಿ ತಿಳಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಪಪಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಚಳಿಗಾಲ ಆರಂಭದ ದಿನ ಗಳಲ್ಲಿಯೇ ನೀರಿನ ಅಭಾವ ಕಂಡು ಬಂದಿದ್ದು, ಬರುವ ಬೇಸಿಗೆಯಲ್ಲಿ ಪರಿಸ್ಥಿತಿ ಉಲ್ಬಣಿಸುವ ಸಂಭವವಿದೆ. ಮುಖ್ಯಾಧಿಕಾರಿಗಳು ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

800ಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಕಾಲನಿಯಲ್ಲಿ ಶುದ್ಧ ಕುಡಿವ ನೀರಿನ ಘಟಕ ಇಲ್ಲ. ಕೂಡಲೇ ಘಟಕ ನಿರ್ವಿುಸಲು ಮುದಾಗಬೇಕೆಂದು ಆಗ್ರಹಿಸಿದರು. ಒಂದು ಗಂಟೆ ಠಿಕಾಣಿ: ನೀರಿಗಾಗಿ ಮಹಿಳೆಯರು ಪಪಂ ದ್ವಾರದ ಮುಂದೆ ಒಂದು ಗಂಟೆ ಕಾಲ ಠಿಕಾಣಿ ಹಾಕಿದ್ದರಿಂದ ಕಾರ್ಯ ಕಲಾಪಗಳಿಗೆ ಅಡ್ಡಿಯಾಗಿತ್ತು.

ಪಪಂ ಮಾಜಿ ಸದಸ್ಯೆ ಶಾರವ್ವ ಹರಣಶಿಕಾರಿ, ರುಕ್ಮವ್ವ ಹರಣಶಿಕಾರಿ, ಯಲ್ಲವ್ವ ಹರಣಶಿಕಾರಿ, ರೇಣವ್ವ ಹರಣಶಿಕಾರಿ, ಬಸವ್ವ, ಲಕ್ಷ್ಮೀ, ಚನ್ನವ್ವ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

ಕೊಳವೆಬಾವಿ ದುರಸ್ತಿ

ಮಹಿಳೆಯರ ಪ್ರತಿಭಟನೆಯಿಂದ ಎಚ್ಚರಗೊಂಡ ಪಪಂ ಇಂಜಿನಿಯರ್ ಯಲ್ಲಪ್ಪ ಜೋಗಿ ಹರಣಶಿಕಾರಿ ಗಲ್ಲಿಯಲ್ಲಿನ ಕೊಳವೆ ಬಾವಿ ದುರಸ್ತಿಗೊಳಿಸಿ ನೀರು ಹೊರ ಚೆಲ್ಲಿಸಿದ ನಂತರ ಮಹಿಳೆಯರು ಪ್ರತಿಭಟನೆ ಹಿಂಪಡೆದರು.