ಕೆರೂರ: ಹೆರಕಲ್ ಏತ ನೀರಾವರಿಯ ದಕ್ಷಿಣ ಭಾಗದ ಯೋಜನೆಯನ್ನು 18 ತಿಂಗಳಲ್ಲಿ ಕರಾರುವಕ್ಕಾಗಿ ಪೂರ್ಣಗೊಳಿಸುವಂತೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಮೀಪದ ಬೀಳಗಿ ವಿಧಾನಸಭಾ ಮತಕ್ಷೇತ್ರದ ಕೈನಕಟ್ಟಿ ಗ್ರಾಮದಲ್ಲಿ ಕೃಷ್ಣಾ ಭಾಗ್ಯ ಜಲ ನಿಮಗದ ವತಿಯಿಂದ ಕೈಗೊಂಡಿರುವ 238 ಕೋಟಿ ರೂ. ವೆಚ್ಚದ ನೀರಾವರಿ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಹೆರಕಲ್ ಬಳಿಯಿರುವ ಚಿಕ್ಕ ಅಣೆಕಟ್ಟಿನಿಂದ ನೀರನ್ನು ಬಳಸಿಕೊಂಡು 15 ಸಾವಿರ ಎಕರೆ ಭೂಮಿಗೆ ನೀರಾವರಿ ಹಾಗೂ 7 ಕೆರೆ ತುಂಬಿಸುವ ಯೋಜನೆ ಇದಾಗಿದೆ. ರಾಜ್ಯದಲ್ಲಿ 2012-13ನೇ ಸಾಲಿನಲ್ಲಿ 6 ನೂರು ಕೋಟಿ ರೂ. ವೆಚ್ಚದಲ್ಲಿ 52 ಸಾವಿರ ಎಕರೆ ನೀರಾವರಿ ಕ್ಷೇತ್ರವನ್ನಾಗಿಸಬೇಕೆಂಬ ಗುರಿ ಹೊಂದಲಾಗಿತ್ತು. ಕಾರಣಾಂತರಗಳಿಂದ ಆ ಕಾರ್ಯ ಇಂದು ಕೈಗೂಡಿದೆ ಎಂದರು.
ಜನರಿಗೆ ಉಪಯುಕ್ತ ಯೋಜನೆ ಅನುಷ್ಠಾನಗೊಳಿಸುವಲ್ಲಿ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದು, ಮಾಜಿ ಪ್ರಧಾನಿ ದಿ.ಅಟಲ್ಬಿಹಾರಿ ವಾಜಪೇಯಿ ಅವರ ಆಡಳಿತದಲ್ಲಿ ಯೋಜನೆಗಳಿಗೆ 5.30 ಲಕ್ಷ ಕೋಟಿ ರೂ. ಅನುದಾನ ಒದಗಿಸಿ ಅನುಷ್ಠಾನಗೊಳಿಸುತ್ತಿದೆ. ಈ ನಿಟ್ಟಿನಲ್ಲಿ ವಿದ್ಯುತ್, ನೀರಾವರಿ ಹಾಗೂ ನೀರು ವ್ಯರ್ಥವಾಗಿ ಹರಿಯುವುದನ್ನು ತಡೆದು ರೈತರ ಜಮೀನುಗಳಿಗೆ ನೀರಾವರಿ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ನೀರು ಹಂಚಿಕೆ ವಿಷಯದಲ್ಲಿ ನ್ಯಾಯಮೂರ್ತಿ ಬ್ರಿಜೇಶ್ಕುಮಾರ್ ಅವರು ಆಲಮಟ್ಟಿ ಅಣೆಕಟ್ಟಿನ 173 ಟಿ.ಎಂ.ಸಿ ನೀರನ್ನು ಕರ್ನಾಟಕಕ್ಕೆ ಹಂಚಿಕೆ ಮಾಡಿ ತೀರ್ಪು ನೀಡಿದ್ದಾರೆ. ಅಣೆಕಟ್ಟು 524.256 ಮೀಟರ್ಗೆ ಎತ್ತರಿಸುವ ಮೂಲಕ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಬೀಳಗಿ ಶಾಸಕ ಮುರುಗೇಶ ನಿರಾಣಿ ಮಾತನಾಡಿ, ಜಿಲ್ಲೆಯ ನೀರಾವರಿ ವಂಚಿತ ತಾಲೂಕಾದ ಬಾದಾಮಿಗೆ ಮೊದಲನೇ ಹಂತದಲ್ಲಿ 10 ಸಾವಿರ ಎಕರೆ ನೀರಾವರಿ ಹಾಗೂ 2ನೇ ಹಂತದಲ್ಲಿ 15 ಸಾವಿರ ಎಕರೆ ಭೂಮಿಗೆ ನೀರಾವರಿ ಕಲ್ಪಿಸುವುದರ ಜತೆಗೆ ಈ ಭಾಗದ ಕೆರೆಗಳನ್ನು ತುಂಬಿಸಲಾಗುತ್ತಿದೆ. ವ್ಯವಸ್ಥಿತವಾಗಿ ನೀರಾವರಿಗೆ ಯೋಜನೆ ರೂಪಿಸಲು ನೀರಾವರಿ ತಜ್ಞರಾದ ಸಂದೀಪ ನಾಡಗೀರ ಅವರ ನೇತೃತ್ವದಲ್ಲಿ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಯೋಜನೆಯಲ್ಲಿ ಕಳಸಕೊಪ್ಪ ಕೆರೆ ಸೇರಿ ಅನೇಕ ಕೆರೆಗಳು ಹಾಗೂ ಬೀಳಗಿ ಮತಕ್ಷೇತ್ರದ ಗಲಗಲಿ, ಹಲಗಲಿ, ಸುನಗ ಸೇರಿ 16 ಕೆರೆಗಳು, ಇನ್ನೊಂದು ಭಾಗವಾಗಿ ತೆಗ್ಗಿ, ಸಿದ್ದಾಪುರ ಗ್ರಾಮಗಳಿಗೆ ನೀರಾವರಿ ಕಲ್ಪಿಸುವ ಮತ್ತು ಬಾದಾಮಿ ತಾಲೂಕಿನ ನರೇನೂರ, ಬೆಳ್ಳಿಕಿಂಡಿ ಗ್ರಾಮಗಳಿಗೆ ಕುಡಿಯುವ ನೀರಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಬಹುಗ್ರಾಮ ಯೋಜನೆ ಅಡಿಯಲ್ಲಿ ಸಿಪರಮಟ್ಟಿ, ಹನಮನೇರಿ, ನರೇನೂರ ತಾಂಡಾ, ನೀರಲಕೇರಿ ರಡ್ಡೇರ ತಿಮ್ಮಾಪುರ, ನಂದಿಹಾಳ ಹಾಗೂ ಜಂಗ್ವಾಡ ಗ್ರಾಮಗಳಿಗೆ ನೀರಾವರಿ ಕಲ್ಪಿಸಲಾಗುವುದು ಎಂದರು.
ಯೋಜನೆಯ ತಜ್ಞರಾದ ಸಂದೀಪ ನಾಡಗೀರ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ಸಂಸದ ಪಿ.ಸಿ. ಗದ್ದಿಗೌಡರ, ಮಾಜಿ ಶಾಸಕ ಪಿ.ಎಚ್. ಪೂಜಾರ ಮಾತನಾಡಿದರು. ನಿಂಗಪ್ಪ ಅಜ್ಜನವರ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಜಿಪಂ ಸದಸ್ಯರಾದ ಭೀಮನಗೌಡ ಪಾಟೀಲ, ಹೂವಪ್ಪ ರಾಠೋಡ, ಕೃಷ್ಣಾ ಓಗೇನ್ನವರ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪುರ ಇತರರು ಉಪಸ್ಥಿತರಿದ್ದರು.