ಕೇರಳದಲ್ಲಿ ಜಲಪ್ರಳಯ ರಾಜ್ಯದಲ್ಲೂ ಅಪಾಯ

ಬೆಂಗಳೂರು/ಕೊಚ್ಚಿ: ಅತ್ತ ಕೇರಳದಲ್ಲಿ ಜಲಪ್ರಳಯ ಮುಂದುವರಿದಿದ್ದರೆ, ಇತ್ತ ರಾಜ್ಯದ ಮೇಲೂ ಪ್ರವಾಹದ ಅಪಾಯವನ್ನು ಸೃಷ್ಟಿಸಿದೆ. ಕೇರಳದ 11 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಈಗಾಗಲೇ 30ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಕೇಂದ್ರ ಸರ್ಕಾರ ತುರ್ತು ನೆರವಿಗೆ ಧಾವಿಸಿದೆ. ಇದು ಕಳೆದ 50 ವರ್ಷದಲ್ಲೇ ಹೆಚ್ಚು ಮಳೆ ಎಂದು ಹೇಳಲಾಗಿದೆ. ಇತ್ತ ಕಬಿನಿಯಿಂದಲೂ 80,000 ಕ್ಯೂಸೆಕ್ ನೀರನ್ನು ಬಿಟ್ಟಿದ್ದು, ನದಿಪಾತ್ರದಲ್ಲಿ ನೆರೆ ಆವರಿಸಿದೆ.

ಕೇರಳದ ವೈನಾಡು, ಇಡುಕ್ಕಿ, ಅಲಪ್ಪುಝಾ, ಕೊಟ್ಟಾಯಂ, ಎರ್ಣಾಕುಲಂ, ಪಾಲಕ್ಕಡ್, ಮಲ್ಲಪುರಂ, ಕೋಳಿಕೋಡ್, ಕೊಲ್ಲಂ, ಪತ್ತಾನಮ್ತಿಟ್ಟಾ ಹಾಗೂ ತಿರುವನಂತಪುರಂ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಮಳೆಯಾಗುತ್ತಿದೆ. ಈ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಪ್ರವಾಸಕ್ಕೆ ನಿರ್ಬಂಧ: ಗುಡ್ಡಗಾಡು ಪ್ರದೇಶಗಳಲ್ಲಿ ಮಣ್ಣು ಕುಸಿತ ಹಿನ್ನೆಲೆಯಲ್ಲಿ ಕೇರಳದ ಪ್ರವಾಸೋದ್ಯಮ ತಾಣಗಳಿಗೂ ಪ್ರವೇಶ ನಿರ್ಬಂಧಿಸಲಾಗಿದೆ. ಏತನ್ಮಧ್ಯೆ ಸುಮಾರು 69 ಪ್ರವಾಸಿಗರು ಇಡುಕ್ಕಿ ಜಿಲ್ಲೆಯ ಕೆಲ ಭಾಗಗಳಲ್ಲಿ ಸಿಲುಕಿಕೊಂಡಿದ್ದು, ಅವರಲ್ಲಿ 24 ವಿದೇಶಿ ಪ್ರವಾಸಿಗರಿದ್ದಾರೆ. ಅಮೆರಿಕವು ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದ್ದು, ಮುಂದಿನ 1 ತಿಂಗಳವರೆಗೆ ಕೇರಳಕ್ಕೆ ಭೇಟಿ ನೀಡದಂತೆ ಸೂಚಿಸಿದೆ.

ಪ್ರಧಾನಿ, ಗೃಹ ಸಚಿವರ ಜತೆ ಚರ್ಚೆ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ದೂರವಾಣಿಯಲ್ಲಿ ರ್ಚಚಿಸಿದ್ದು, ತುರ್ತು ನೆರವಿಗೆ ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಈಗಾಗಲೇ ಕೇಂದ್ರದಿಂದ ಹೆಚ್ಚುವರಿ ಭದ್ರತಾ ಪಡೆ, ಎನ್​ಡಿಆರ್​ಎಫ್ ತಂಡ ಹಾಗೂ ನೌಕಾದಳದ ಸಿಬ್ಬಂದಿಯನ್ನು ಕಳುಹಿಸಿಕೊಡಲಾಗಿದೆ. ಹಾಗೆಯೇ ಸೇನೆಯಿಂದ ಹೆಚ್ಚುವರಿ ನಿರಾಶ್ರಿತರ ಕ್ಯಾಂಪ್​ಗಳನ್ನು ತೆರೆಯಲಾಗಿದೆ. ಪ್ರಾಥಮಿಕ ಹಂತದಲ್ಲಿ 1 ಸಾವಿರ ಕೋಟಿ ರೂ. ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕೇರಳ ಸರ್ಕಾರ ಮನವಿ ಮಾಡಿದೆ. ಹೀಗಾಗಿ ಅತಿವೃಷ್ಟಿ ಪೀಡಿತ ಪ್ರದೇಶಗಳಲ್ಲಿ ಪಿಣರಾಯಿ ಜತೆ ರಾಜನಾಥ್ ಸಿಂಗ್ ಭಾನುವಾರ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.

ಅಣೆಕಟ್ಟೆಗೆ ಅಪಾಯವಿಲ್ಲ

ಕಬಿನಿ ಜಲಾಶಯದಿಂದ ಏಕಕಾಲಕ್ಕೆ 1.95 ಲಕ್ಷ ಕ್ಯೂಸೆಕ್​ವರೆಗೆ ನೀರು ಹರಿಸಲು ಅವಕಾಶ ಇರುವ ಹಿನ್ನೆಲೆಯಲ್ಲಿ ಅಣೆಕಟ್ಟೆಯ ಭದ್ರತೆಗೆ ಯಾವುದೇ ಧಕ್ಕೆ ಇಲ್ಲ. ಆದರೆ, ಭಾರಿ ಪ್ರಮಾಣದಲ್ಲಿ ನೀರನ್ನು ಏಕಾಏಕಿ ಬಿಟ್ಟರೆ ನದಿಪಾತ್ರದ ಹಲವು ಪ್ರದೇಶಗಳು ಮುಳುಗಡೆಯಾಗುವ ಆತಂಕ ಎದುರಾಗಿದೆ. ವೈನಾಡು ಭಾಗದಲ್ಲಿ ಇದೇ ರೀತಿ ಮಳೆ ಮುಂದುವರಿದರೆ ಇಲ್ಲಿ ಪರಿಸ್ಥಿತಿ ಬಿಗಡಾಯಿಸಲಿದ್ದು, ನದಿಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಜಿಲ್ಲಾಡಳಿತ ಎಚ್ಚರಿಸಿದೆ. ಅಲ್ಲದೆ, ಕೆಆರ್​ಎಸ್ ಜಲಾಶಯದ ಅಣೆಕಟ್ಟೆಯಿಂದ +103 ಮಟ್ಟದ 27 ಗೇಟುಗಳಿಂದ 63,222 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಕಬಿನಿಗೆ ಹೆದರಿದ ಕಪಿಲೆ!

ಕೇರಳದ ವೈನಾಡು ಭಾಗದಲ್ಲಿನ ಭಾರಿ ಮಳೆಗೆ ಕಬಿನಿ ಜಲಾಶಯಕ್ಕೆ ಶುಕ್ರವಾರವೂ ಭಾರಿ ಪ್ರಮಾಣದಲ್ಲಿ ನೀರು ಬಂದಿದ್ದು, ಜಲಾಶಯದಿಂದ 80,000 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಪರಿಣಾಮ ಕಪಿಲಾ ನದಿ ಉಕ್ಕಿ ನಂಜನಗೂಡು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ನಂಜನಗೂಡು ತಾಲೂಕಿನ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮೈಸೂರು-ನಂಜನಗೂಡು ರಸ್ತೆ (ಬೆಂಗಳೂರು-ಊಟಿ ರಾಷ್ಟ್ರೀಯ ಹೆದ್ದಾರಿ) ಮಲ್ಲನಮೂಲೆ ಮಠದ ಬಳಿ ಜಲಾವೃತಗೊಂಡಿದ್ದರಿಂದ ದಿನವಿಡಿ ಸಂಚಾರ ಇರಲಿಲ್ಲ. ಮಠದ ಆವರಣ, ದೇವರ ಗುಡಿಗಳಿಗೆ ನೀರು ನುಗ್ಗಿದೆ. ಸುತ್ತೂರು ಗ್ರಾಮದ ಮುಖ್ಯ ಸೇತುವೆ ಹಾಗೂ ಹರದನಹಳ್ಳಿ ಗ್ರಾಮದ ಸೇತುವೆಯೂ ಮುಳುಗಡೆಯಾಗಿದೆ. ಸಂಗಮ ಸುಕ್ಷೇತ್ರದಲ್ಲಿರುವ ಸದ್ಗುರು ಮಹದೇವ ತಾತಾ ಸನ್ನಿಧಿ ಆವರಣ, ನಗರದ ಅಯ್ಯಪ್ಪಸ್ವಾಮಿ ದೇವಾಲಯ, ದತ್ತಾತ್ರೇಯ ಗುಡಿ, ಕಾಶಿ ವಿಶ್ವೇಶ್ವರನಾಥ ದೇವಾಲಯ, ಲಿಂಗಭಟ್ಟರ ಗುಡಿ, ಪರುಶುರಾಮ ದೇವಾಲಯ ಸೇರಿ ಅನೇಕ ದೇವಾಲಯಗಳು ಜಲಾವೃತಗೊಂಡಿವೆ. ನಗರದ ಹಳ್ಳದಕೇರಿ ಬಡಾವಣೆಯಲ್ಲಿ ಹಲವು ಮನೆಗಳು ಭಾಗಶಃ ಮುಳುಗಡೆಯಾಗಿವೆ.

13ರಿಂದ ರಾಜ್ಯ ಅಲರ್ಟ್!

ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಮಲೆನಾಡಿನ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಹಾಸನ ಜಿಲ್ಲೆಗಳಲ್ಲಿ ಆ.13ರಿಂದ ಮತ್ತೆ ಮಳೆಯಬ್ಬರದ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಲರ್ಟ್ ಘೋಷಿಸಿದೆ.

ಕೊಚ್ಚಿ ಹೋಗುತ್ತಿದ್ದ ಬುದ್ಧಿಮಾಂದ್ಯನ ರಕ್ಷಣೆ

ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ಗ್ರಾಮದಲ್ಲಿ ಜಲಾವೃತಗೊಂಡಿದ್ದ ಸ್ಮಶಾನದ ತಿಟ್ಟಿನಲ್ಲಿ ಶುಕ್ರವಾರ ಬೆಳಗ್ಗೆ ಸಿಲುಕಿದ್ದ ಬುದ್ಧಿಮಾಂದ್ಯ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದಾಗ ಪೊಲೀಸರು ರಕ್ಷಿಸಿದ್ದಾರೆ. ಮಳವಳ್ಳಿ ತಾಲೂಕು ಮೂಲದ ಮಹದೇವ ಬದುಕುಳಿದವ.

20 ಸಾವಿರ ಜನರ ರಕ್ಷಣೆ

ಇಡುಕ್ಕಿ ಸೇರಿ ಕೇರಳದ ಕೆಲವೆಡೆ 20 ಸಾವಿರಕ್ಕೂ ಅಧಿಕ ಜನರನ್ನು ಪ್ರವಾಹದಿಂದ ರಕ್ಷಿಸಲಾಗಿದೆ. ಸಂತ್ರಸ್ತರಿಗೆ ತಾತ್ಕಾಲಿಕ ನೆಲೆ ಕಲ್ಪಿಸುವ ಉದ್ದೇಶದಿಂದ 500ಕ್ಕೂ ಅಧಿಕ ಶಿಬಿರಗಳನ್ನು ರಾಜ್ಯ ಸರ್ಕಾರ ತೆರೆದಿದೆ. ಇಡುಕ್ಕಿ ಅಣೆಕಟ್ಟಿನ ಎಲ್ಲ ಗೇಟ್​ಗಳನ್ನು ಶುಕ್ರವಾರ ತೆರೆಯಲಾಗಿದ್ದು, ನದಿ ತೀರದ ಜನರಿಗೆ ಪ್ರವಾಹದ ಕಟ್ಟೆಚ್ಚರ ನೀಡಲಾಗಿದೆ. ಇದಲ್ಲದೆ ಕೇರಳದ 24 ಅಣೆಕಟ್ಟುಗಳಲ್ಲಿಯೂ ನೀರಿನ ಪ್ರಮಾಣ ಹೆಚ್ಚುತ್ತಿದ್ದು ಗೇಟ್​ಗಳನ್ನು ತೆರೆಯಲಾಗಿದೆ.

ದ.ಕ.ಜಿಲ್ಲೆಯಲ್ಲಿ ರಜೆ

ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲಾದ್ಯಂತ ಶುಕ್ರವಾರ ಧಾರಾಕಾರ ಮಳೆಯಾಗಿದ್ದು, ಕೆಲವೆಡೆ ಜಲಾವೃತಗೊಂಡಿದೆ. ಆ.11ರಂದು ದಕ್ಷಿಣ ಕನ್ನಡದ ಎಲ್ಲ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೊಷಿಸಿ ಜಿಲ್ಲಾಧಿಕಾರಿ ಡಾ.ಶಶಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.

ಕೇರಳ ಮಳೆ ಸಂತ್ರಸ್ತರಿಗೆ ರಾಜ್ಯದಿಂದ 10 ಕೋಟಿ ರೂ. ನೆರವು ನೀಡಲಾಗುವುದು. ರಾಜ್ಯದಿಂದ ಅಗತ್ಯ ನೆರವು ನೀಡಲು ಕೇರಳ ಮುಖ್ಯಮಂತ್ರಿಯೊಂದಿಗೆ ರ್ಚಚಿಸಲಾಗಿದೆ. ಅಗತ್ಯವಿದ್ದಲ್ಲಿ ವೈದ್ಯರು ಮತ್ತು ರಕ್ಷಣಾ ತಂಡವನ್ನು ಕಳುಹಿಸಲಾಗುವುದು.

| ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ

Leave a Reply

Your email address will not be published. Required fields are marked *