ಅಮ್ಮನ ಪುನರ್‌ ವಿವಾಹಕ್ಕೆ ಭಾವನಾತ್ಮಕವಾಗಿ ಶುಭಕೋರಿದ ಮಗ, ಪೋಸ್ಟ್‌ ವೈರಲ್‌, ನೆಟ್ಟಿಗರಿಂದ ಭಾರಿ ಮೆಚ್ಚುಗೆ!

ನವದೆಹಲಿ: ಎರಡನೇ ವಿವಾಹ ಎಂದಾಕ್ಷಣ ಮೂಗು ಮುರಿಯುವ ಕಾಲಘಟ್ಟದಲ್ಲಿದ್ದೇವೆ ನಾವು. ಆದರೆ ಇಲ್ಲೊಬ್ಬ ಕೇರಳದ ಯುವಕ ಮಾತ್ರ ತನ್ನ ತಾಯಿಯ ಎರಡನೇ ಮದುವೆಗೆ ಭಾವನಾತ್ಮಕವಾಗಿ ಶುಭ ಕೋರಿದ್ದು, ಬೆಂಬಲವಾಗಿ ನಿಂತಿರುವುದು ಇದೀಗ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ಕೇರಳದ ಕೊಲ್ಲಂನ ಇಂಜಿನಿಯರಿಂಗ್ ವಿದ್ಯಾರ್ಥಿ ಗೋಕುಲ್ ಶ್ರೀಧರ್‌ ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದು, ನನಗಾಗಿ ತ್ಯಾಗ ಮಾಡಿದ ಅಮ್ಮನಿಗೆ ಹ್ಯಾಪಿ ಮ್ಯಾರಿಡ್‌ ಲೈಫ್‌ ಎಂದು ಶುಭ ಕೋರಿದ್ದಾರೆ.

ಮಲಯಾಳಂನಲ್ಲಿ ಬರೆದಿರುವ ಆತ ತಾಯಿಯ ಫೋಟೊ ಶೇರ್‌ ಮಾಡಿದ್ದು, ನನ್ನ ತಾಯಿಯ ವಿವಾಹ ಮುಗಿದಿದೆ. ಈ ರೀತಿಯದ್ದೊಂದು ಪೋಸ್ಟ್‌ ಬರೆಯಲು ನಾನು ತುಂಬ ಯೋಚಿಸಿದೆ. ಏಕೆಂದರೆ ಮರು ಮದುವೆ ಎಂದರೆ ಅನೇಕರು ತಪ್ಪು ಎಂದೇ ಭಾವಿಸುತ್ತಾರೆ. ನನ್ನ ತಂದೆಯೊಂದಿಗಿನ ಮದುವೆ ನನ್ನ ತಾಯಿಗೆ ನೋವನ್ನೇ ತಂದುಕೊಟ್ಟಿತು ಎಂದು ಹಳೆಯ ಜೀವನವನ್ನು ನೆನಪಿಸಿಕೊಂಡಿದ್ದಾರೆ.

അമ്മയുടെ വിവാഹമായിരുന്നു.ഇങ്ങനെ ഒരു കുറിപ്പ് വേണോ എന്ന് ഒരുപാട് ആലോചിച്ചതാണ്, രണ്ടാം വിവാഹം ഇപ്പോഴും അംഗീകരിക്കാൻ…

Gokul Sreedhar ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಜೂನ್ 11, 2019

ತಂದೆಯಿಂದ ಹೊಡೆತ ತಿಂದಿದ್ದ ನನ್ನ ತಾಯಿಯ ಹಣೆಯಲ್ಲಿ ಒಮ್ಮೆ ರಕ್ತ ಸುರಿಯುತ್ತಿರುವುದನ್ನು ನೋಡಿದೆ. ಏಕೆ ಇದನ್ನೆಲ್ಲ ಸಹಿಸಿಕೊಳ್ಳುತ್ತಿದ್ದೀಯ ಎಂದು ಕೇಳಿದ್ದೆ. ನನಗಿನ್ನು ನೆನಪಿದೆ ಅದಕ್ಕವಳು ನಾನು ನಿನಗಾಗಿ ಬದುಕುತ್ತಿದ್ದೇನೆ ಮತ್ತು ಏನನ್ನು ಬೇಕಾದರೂ ಸಹಿಸಿಕೊಳ್ಳುತ್ತೇನೆ ಎಂದು ಹೇಳಿದ್ದಳು.

ಅಂದು ನಾನು ಅಮ್ಮನ ಕೈಹಿಡಿದು ಹೊರ ನಡೆಯುತ್ತಿದ್ದಾಗ ಆಕೆಯ ಜೀವನದಲ್ಲಿ ಪುನರ್ವಿವಾಹವನ್ನು ಮಾಡಬೇಕೆಂದು ನಾನು ಅಂದೇ ನಿರ್ಧರಿಸಿದ್ದೆ. ನನಗಾಗಿ ತನ್ನ ಯೌವನವನ್ನು ತ್ಯಾಗಮಾಡಿರುವ ಆಕೆಯ ಹಲವು ಕನಸುಗಳ ಸಾಧಿಸುವುದು ಮತ್ತು ಎತ್ತರಕ್ಕೇರಬೇಕಾಗಿದೆ. ಹೆಚ್ಚಿಗೆ ನಾನು ಏನನ್ನು ಹೇಳುವುದಿಲ್ಲ. ಇದನ್ನು ನಾನು ರಹಸ್ಯವಾಗಿಡಲು ಬಯಸಲಿಲ್ಲ. ಅದಕ್ಕೆ ಬರೆದೆ. ಹ್ಯಾಪಿ ಮ್ಯಾರೀಡ್‌ ಲೈಫ್‌, ಅಮ್ಮ ಎಂದು ಬರೆದುಕೊಂಡಿದ್ದಾರೆ.

ಇದಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗೆ 31 ಸಾವಿರಕ್ಕೂ ಅಧಿಕ ಲೈಕ್ಸ್‌ ಬಂದಿದ್ದು, 3 ಸಾವಿರಕ್ಕೂ ಅಧಿಕ ಜನ ಶೇರ್‌ ಮಾಡಿಕೊಂಡಿದ್ದಾರೆ. ಗೋಕುಲ್ ಮತ್ತು ಅವರ ತಾಯಿಯನ್ನು ಅವರ ಸಾಮರ್ಥ್ಯಕ್ಕಾಗಿ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)