ಗುಂಡ್ಲುಪೇಟೆ: ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಕೇರಳ ಲಾಟರಿಯನ್ನು ಸಾಗಣೆ ಮಾಡುತ್ತಿದ್ದ ಆರೋಪಿಯನ್ನು ಪಟ್ಟಣ ಪೊಲೀಸರು ಬಂಧಿಸಿ, ಆತನಿಂದ ಲಕ್ಷಾಂತರ ರೂ. ಮೌಲ್ಯದ ಲಾಟರಿ ಟಿಕೆಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಕೇರಳ ಮೂಲದ ಶಿಹಾಬುದ್ದೀನ್ ಬಂಧಿತ ಆರೋಪಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಮಾರ್ಗದರ್ಶನದಲ್ಲಿ ಸಬ್ ಇನ್‌ಸ್ಪೆಕ್ಟರ್ ಸಾಹೇಬಗೌಡ ಹಾಗೂ ಸಿಬ್ಬಂದಿ ಗುರುವಾರ ಬೆಳಗ್ಗೆ ಮದ್ದೂರು ಚೆಕ್‌ಪೋಸ್ಟ್ ಸಮೀಪ ಕೇರಳದಿಂದ ಬರುತ್ತಿದ್ದ ಕಾರನ್ನು ತಪಾಸಣೆ ಮಾಡಿದಾಗ ಅದರಲ್ಲಿ 2.24 ಲಕ್ಷ ರೂ. ಮೌಲ್ಯದ 4,978 ಕೇರಳದ ಲಾಟರಿ ಟಿಕೆಟ್ ಪತ್ತೆಯಾಗಿದೆ. ಆರೋಪಿ ಶಿಹಾಬುದ್ದೀನ್ ಎಂಬಾತನನ್ನು ಬಂಧಿಸಿ, ಲಾಟರಿ ಮಾರಾಟ ಮಾಡಿ ಸಂಗ್ರಹಿಸಿದ್ದ 12 ಸಾವಿರ ರೂ. ನಗದನ್ನು ವಶಪಡಿಸಿಕೊಂಡರು.
ಪೊಲೀಸರು ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಎ.ಮಹೇಶ್, ಸಿಬ್ಬಂದಿ ಮಹೇಶ್, ಬಸವರಾಜೇಂದ್ರ ಇತರರು ಇದ್ದರು.
