ಸುಳ್ಯದ ಸುಧಾಮರಿಗೆ ಹೊಡೆಯಿತು 4 ಕೋಟಿ ರೂಪಾಯಿಗಳ ಲಾಟರಿ

<<ಮುಳ್ಳೇರಿಯದಲ್ಲಿ ಖರೀದಿಸಿದ್ದ ಲಾಟರಿಯಲ್ಲಿ 4 ಕೋಟಿ ರೂ. ಬಂಪರ್ ಬಹುಮಾನ>>

ಸುಳ್ಯ: ಮಾವನ ಮನೆಗೆ ಹೋಗಿ ಹಿಂದಿರುಗುವಾಗ ಕೊಂಡಿದ್ದ ಲಾಟರಿಗೆ ಬರೋಬ್ಬರಿ 4 ಕೋಟಿ ರೂ. ಬಹುಮಾನ ದಕ್ಕಿದೆ!

ಹೌದು, ಗುರುವಾರ ಪ್ರಕಟವಾದ ಕೇರಳ ರಾಜ್ಯ ಲಾಟರಿಯ ಸಮ್ಮರ್ ಬಂಪರ್‌ನ ಪ್ರಥಮ ಬಹುಮಾನ ಕೋಟಿ ರೂ. ಸುಳ್ಯದ ನಿತೀಶ್ ಹೋಟೆಲ್ ಮಾಲೀಕ ಬಿ.ಸುಧಾಮ ಅವರು ಖರೀದಿಸಿದ ಎಸ್‌ಬಿ 131399 ಲಾಟರಿ ಟಿಕೆಟ್‌ಗೆ ಬಂದಿದೆ.

ಕಳೆದ ನಾಲ್ಕು ವರ್ಷಗಳಿಂದ ಕಾಸರಗೋಡು ಕಡೆಗೆ ಹೋದರೆ ಒಂದು ಕೇರಳ ರಾಜ್ಯ ಲಾಟರಿ ಟಿಕೆಟ್ ಪಡೆಯುವ ಅಭ್ಯಾಸ ಸುಧಾಮ ಬೆಳೆಸಿಕೊಂಡಿದ್ದರು. ಕಳೆದ ತಿಂಗಳ ಕೊನೆಯಲ್ಲಿ ತನ್ನ ಪತ್ನಿಯ ಮನೆಯಾದ ಕಾಸರಗೋಡು ಮಲ್ಲಕ್ಕೆ ಹೋಗಿ ಹಿಂತಿರುಗುವಾಗ ಮುಳ್ಳೇರಿಯದಿಂದ 450 ರೂ. ನೀಡಿ 150 ರೂ. ಮುಖಬೆಲೆಯ ಸಮ್ಮರ್ ಬಂಪರ್‌ನ ಮೂರು ಟಿಕೆಟ್ ಖರೀದಿಸಿದ್ದರು. ಅದರಲ್ಲಿ ಒಂದು ಟಿಕೆಟ್‌ಗೆ ಅದೃಷ್ಟ ಒಲಿದು ಬಂದಿದೆ.

ಸುಳ್ಯ ಕಾಂತಮಂಗಲ ಬೂಡುಮಕ್ಕಿಯ ಅಚ್ಚುತ ಮಣಿಯಾಣಿ-ಸರಸ್ವತಿ ದಂಪತಿ ಪುತ್ರ ಸುಧಾಮ ಕಳೆದ 19 ವರ್ಷಗಳಿಂದ ಸುಳ್ಯ ನಗರದಲ್ಲಿ ಹೋಟೆಲ್ ನಡೆಸುತ್ತಿದ್ದಾರೆ. ಅದಕ್ಕಿಂತಲೂ ಮುನ್ನ ಗಡಿಪ್ರದೇಶವಾದ ಅಡ್ಯನಡ್ಕದಲ್ಲಿ ಐದು ವರ್ಷ ಹೋಟೆಲ್ ನಡೆಸಿದ್ದರು. ಪತ್ನಿ ಪ್ರಭಾವತಿ ಕಾಸರಗೋಡು ಮಲ್ಲದವರು. ನಿತೀಶ್, ಶರತ್ ಮತ್ತು ಮನ್ವಿತ್ ಮಕ್ಕಳು.

ಕಾಸರಗೋಡು ಕೆಎಸ್‌ಆರ್‌ಟಿಸಿ ಕಾಂಪ್ಲೆಕ್ಸ್‌ನಲ್ಲಿನ ಮಧು ಲಾಟರಿ ಏಜೆನ್ಸಿಯಿಂದ ಮುಳ್ಳೇರಿಯದ ಸಬ್ ಏಜೆಂಟ್ ಕುಂಞಿಕಣ್ಣನ್ ಪಡೆದು ಮಾರಾಟ ಮಾಡಿದ್ದ ಟಿಕೇಟನ್ನು ಸುಧಾಮ ಖರೀದಿಸಿದ್ದರು.

ಮಕ್ಕಳ ಶಿಕ್ಷಣಕ್ಕೆ ಆದ್ಯತೆ: ಲಾಟರಿ ಅದೃಷ್ಟ ಒಲಿದು ಬಂದಿರುವುದು ತಿಳಿದು ಹಲವು ಮಂದಿ ಹೋಟೆಲ್‌ಗೆ ಬಂದು ಅಭಿನಂದಿಸಿದರೆ, ದೂರವಾಣಿ ಮೂಲಕ ಅಭಿನಂದನೆಗಳ ಪ್ರವಾಹವೇ ಹರಿದು ಬಂದಿತ್ತು. ಲಾಟರಿ ಅದೃಷ್ಟ ಸಂತಸದ ನಡುವೆಯೂ ಸುಧಾಮ ಎಂದಿನಂತೆ ತನ್ನ ಹೋಟೆಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಲಾಟರಿ ಹಣ ದೊರೆತ ಮೇಲೆ ಏನು ಮಾಡುವ ಯೋಜನೆ ಇದೆ ಎಂದು ಕೇಳಿದರೆ, ಈಗ ಆ ಕುರಿತು ಏನೂ ಚಿಂತಿಸಿಲ್ಲ, ಮೂವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂಬ ಕನಸಿದೆ ಎನ್ನುತ್ತಾರೆ ಸುಧಾಮ.