ತಿರುವನಂತಪುರ: ರಾಜ್ಯದಲ್ಲಿ ಮೂರನೇ ವಿದ್ಯಾರ್ಥಿಯಲ್ಲೂ ಕೊರೊನಾ ವೈರಸ್ ಪತ್ತೆಯಾದ ಕಾರಣ, ಈ ಕಾಯಿಲೆಯ ಸನ್ನಿವೇಶವನ್ನು ರಾಜ್ಯ ವಿಪತ್ತು ಎಂದು ಕೇರಳ ಸರ್ಕಾರ ಸೋಮವಾರ ಸಂಜೆ ಘೋಷಿಸಿದೆ.
ಮೂರನೇ ವಿದ್ಯಾರ್ಥಿಯ ತಪಾಸಣೆ ವೇಳೆ ವೈರಸ್ ಸೋಂಕು ಕುರಿತ ಪಾಸೆಟಿವ್ ಫಲಿತಾಂಶ ಕಂಡು ಬಂದಿದೆ. ಇದು ಹರಡುವ ಸೋಂಕು ಆಗಿರುವ ಕಾರಣ ರಾಜ್ಯ ಇದನ್ನು ವಿಪತ್ತು ಎಂದು ಪರಿಗಣಿಸಿದೆ. ಹೀಗಾಗಿ ಈ ಸೋಂಕು ಕಾಯಿಲೆಯನ್ನು ರಾಜ್ಯ ವಿಪತ್ತು ಎಂದು ಸರ್ಕಾರ ಘೋಷಿಸಿರುವುದಾಗಿ ರಾಜ್ಯ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಹೇಳಿದ್ದಾರೆ.
ಈ ರಾಜ್ಯ ವಿಪತ್ತಿನ ಕಾಯಿಲೆಯನ್ನು ಹಂತ ಹಂತವಾಗಿ ತಡೆಗಟ್ಟುವುದಕ್ಕೆ ಬೇಕಾದ ಎಲ್ಲ ಕ್ರಮಗಳನ್ನೂ ಸರ್ಕಾರ ಕೈಗೊಂಡಿದೆ. ಪರಿಣಾಮಕಾರಿಯಾಗಿ ಕಾಯಿಲೆಯನ್ನು ನಿಯಂತ್ರಿಸಿ, ತಡೆಗಟ್ಟಲಾಗುವುದು ಎಂದೂ ಅವರು ಆಶ್ವಾಸನೆ ನೀಡಿದರು.
ರಾಜ್ಯ ವಿಪತ್ತು ಎಂದು ಘೋಷಿಸುವುದಕ್ಕೆ ಮುನ್ನ, ಮುಖ್ಯ ಕಾರ್ಯದರ್ಶಿ ಟಾಮ್ ಜೋಸ್ ನೇತೃತ್ವದ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ಸೇರಿ ಈ ವಿಷಯವಾಗಿ ಚರ್ಚಿಸಿತ್ತು. ಅಲ್ಲಿ ಎಲ್ಲ ಸಾಧಕ-ಬಾಧಕಗಳನ್ನು ಗಮನಿಸಿ ಈ ನಿರ್ಣಯ ತೆಗೆದುಕೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಲು ತೀರ್ಮಾನಿಸಲಾಗಿತ್ತು. (ಏಜೆನ್ಸೀಸ್)