ಕೇರಳದಲ್ಲಿ ಮಳೆಯಬ್ಬರಕ್ಕೆ 20 ಸಾವು: ಸಹಾಯಕ್ಕಾಗಿ ಕೇಂದ್ರಕ್ಕೆ ಮೊರೆಯಿಟ್ಟ ಸಿಎಂ

ತಿರುವನಂತಪುರಂ: ಕೇರಳದಾದ್ಯಂತ ಮುಂಗಾರು ಮಳೆಯ ಅಬ್ಬರ ತೀವ್ರವಾಗಿದ್ದು, ಪ್ರವಾಹದ ಪರಿಸ್ಥಿತಿ ಸೃಷ್ಟಿಯಾಗಿದೆ. ಕಳೆದ 24 ಗಂಟೆಗಳಲ್ಲಿ ಮಳೆಯಿಂದಾದ ಅವಘಡಗಳಿಗೆ ಕನಿಷ್ಠ 20 ಜನರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳ ಸಿಎಂ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಮಳೆಯಬ್ಬರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗುರುವಾರ ಮುಖ್ಯಮಂತ್ರಿ ಪಿಣಿರಾಯಿ ವಿಜಯನ್​ ಅವರು ತುರ್ತು ಸಚಿವ ಸಂಪುಟ ಸಭೆ ನಡೆಸಿದರು. ಆ ನಂತರ ಪತ್ರಿಕಾಗೋಷ್ಠಿ ನಡೆಸಿದ ಅವರು ರಾಜ್ಯದಲ್ಲಿ ಮಳೆಯ ಅಬ್ಬರ ಹೆಚ್ಚಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಮಳೆಯಿಂದಾಗಿ ರಾಜ್ಯದ 22 ಅಣೆಕಟ್ಟುಗಳು ಸಂಪೂರ್ಣವಾಗಿ ಭರ್ತಿಯಾಗಿದ್ದು, ನೀರು ನದಿಗೆ ಹರಿಸುತ್ತಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ಇಂತಹ ಪ್ರವಾಹ ಪರಿಸ್ಥಿತಿ ಉದ್ಛವಿಸಿರಲಿಲ್ಲ. ಹಾಗಾಗಿ ನಾವು ಸೇನೆ, ನೌಕಾಪಡೆ ಮತ್ತು ವಾಯುಪಡೆಯ, ಎನ್​ಡಿಆರ್​ಎಫ್​ ತಂಡಗಳ ನೆರವನ್ನು ಕೋರಿದ್ದೇವೆ. ಮಳೆಯಿಂದಾಗಿ ತೀವ್ರ ಹಾನಿಗೀಡಾಗಿರುವ 6 ಜಿಲ್ಲೆಗಳಲ್ಲಿ ಕಂಟ್ರೋಲ್​ ರೂಂ.ಗಳನ್ನು ತೆರೆದಿದ್ದೇವೆ ಎಂದು ತಿಳಿಸಿದ್ದಾರೆ.

ವಯನಾಡು ಜಿಲ್ಲೆಯಲ್ಲಿ ಮಳೆಯ ಅಬ್ಬರದಿಂದಾಗಿ ಭೂಕುಸಿತದಿಂದಾಗಿ ರಸ್ತೆ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ತೀವ್ರ ಮಳೆಯಿಂದಾಗಿ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಂದ್​ ಮಾಡಲಾಗಿದೆ. ಜತೆಗೆ ಅಲಪುಳಾದಲ್ಲಿ ಪ್ರತಿ ವರ್ಷ ಆಯೋಜಿಸಲಾಗುವ ಪ್ರಸಿದ್ಧ ನೆಹರೂ ಟ್ರೋಫೀ ಬೋಟ್​ ರೇಸ್​ ಅನ್ನು ರದ್ದುಗೊಳಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

ಇಡುಕ್ಕಿ ಡ್ಯಾಮ್​ನಿಂದ ನೀರು ಬಿಡುಗಡೆ

26 ವರ್ಷಗಳ ನಂತರ ಇದೇ ಮೊದ ಬಾರಿಗೆ ಇಡುಕ್ಕಿ ಅಣೆಕಟ್ಟು ತುಂಬಿದ್ದು, ಹೆಚ್ಚುವರಿ ನೀರನ್ನು ನಾಲ್ಕು ಗೇಟ್​ಗಳ ಮೂಲಕ ನದಿಗೆ ಹರಿಸಲಾಗುತ್ತಿದೆ. (ಏಜೆನ್ಸೀಸ್​)