ಪರಿಸರ ರಕ್ಷಣೆಗೆ ಮಾಹಿತಿ ಪುಸ್ತಕ

ಕಾಸರಗೋಡು: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಬದಿ, ಹೊಳೆಗಳು, ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವುದು ಹೆಚ್ಚಾಗುತ್ತಿದ್ದು, ಮಾಲಿನ್ಯ ನಿಯಂತ್ರಣಕ್ಕಾಗಿ ಸರ್ಕಾರ ಜನಜಾಗೃತಿಗೆ ಮುಂದಾಗಿದೆ. ಪರಿಸರ, ಜಲಮೂಲ ಕಲುಷಿತಗೊಳಿಸುವವರನ್ನು ಎಚ್ಚರಿಸುವ ಹಾಗೂ ಅವರಲ್ಲಿ ಕಾನೂನಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಮಾಹಿತಿಯನ್ನು ಅಕ್ಷರ ರೂಪಕ್ಕಿಳಿಸಿ ಹಂಚಲು ಸರ್ಕಾರ ತೀರ್ಮಾನಿಸಿದೆ.
ಜನಜಾಗೃತಿ-ಮಾಹಿತಿ: ತ್ಯಾಜ್ಯ ಮುಕ್ತ ಪರಿಸರ ನಿರ್ಮಾಣ ನಿಟ್ಟಿನಲ್ಲಿ ಪರಿಸರ ಕಲುಷಿತಗೊಳಿಸುವವರ ವಿರುದ್ಧ ಕೈಗೊಳ್ಳಲಾಗುವ ಕಾನೂನು ಕ್ರಮಗಳ ಬಗ್ಗೆ ಜನಜಾಗೃತಿ, ಹಸಿರು ಕಾಯ್ದೆ ಬಗ್ಗೆ ಮಾಹಿತಿಯನ್ನು ಈ ಪುಸ್ತಕದಲ್ಲಿ ಅಳವಡಿಸಲಾಗಿದ್ದು, ಸ್ಥಳೀಯಾಡಳಿತೆ ಸಂಸ್ಥೆ ಸಿಬ್ಬಂದಿ, ಪೊಲೀಸ್ ಪಡೆ, ಜನಪ್ರತಿನಿಧಿಗಳು, ಸಾರ್ವಜನಿಕರಿಗಾಗಿ ಈ ಪುಸ್ತಕ ಪ್ರಕಟಿಸಲಾಗಿದೆ.

ಪರಿಸರ ಮಾಲಿನ್ಯಕ್ಕೆ ಯಾವ ಶಿಕ್ಷೆ, ಯಾರಿಗೆಲ್ಲ ಕ್ರಮ ಕೈಗೊಳ್ಳುವ ಅಧಿಕಾರವಿದೆ, ಈ ಬಗ್ಗೆ ಯಾರೆಲ್ಲ ದೂರು ನೀಡಬಹುದು ಇತ್ಯಾದಿ ಮಾಹಿತಿ ಹಂಚಲು ಸರ್ಕಾರ ನಿರ್ಧೆರಿಸಿದೆ. ಜಲ ಮಾಲಿನ್ಯ (ನಿಯಂತ್ರಣ ಮತ್ತು ನಿವಾರಣೆ) ಕಾಯ್ದೆ 1974, ಪರಿಸರ (ಸಂರಕ್ಷಣೆ)ಕಾಯ್ದೆ ೆ1986, ಕೇರಳ ಪಂಚಾಯತ್ ರಾಜ್ ಕಾಯ್ದೆ 1994, ಕೇರಳ ನಗರಸಭೆ ಕಾನೂನು 1994, ಭಾರತೀಯ ದಂಡ ಸಂಹಿತೆ, ಕೇರಳ ನೀರಾವರಿ ಮತ್ತು ಜಲಸಂರಕ್ಷಣೆ ಕಾನೂನು 2003, ಆಹಾರ ಸುರಕ್ಷೆ ಗುಣಮಟ್ಟ ಕಾನೂನು 2006, ಕೇರಳ ಪಂಚಾಯಿತಿ ಕಟ್ಟಡ ನಿರ್ಮಾಣ ಸಂಹಿತೆ, ಕೇರಳ ನಗರಸಭೆ ಕಟ್ಟಡ ನಿರ್ಮಾಣ ಸಂಹಿತೆ, ಘನ ತ್ಯಾಜ್ಯ ಸಂಷ್ಕರಣೆ ಸಂಹಿತೆ, ಕೇರಳ ಪೊಲೀಸ್ ಕಾಯ್ದೆ ಸಹಿತ ಕಾನೂನು ಮಾಹಿತಿಯೊಂದಿಗೆ ಈ ಪುಸ್ತಕ ಪ್ರಕಟಿಸಲಾಗಿದೆ.

ಪುಸ್ತಕದಲ್ಲಿ ಏನೇನಿದೆ: ಸಾರ್ವಜನಿಕ ಪ್ರದೇಶಗಳಲ್ಲಿ ತ್ಯಾಜ್ಯ ಎಸೆಯುವುದು, ಅವೈಜ್ಞ್ಞನಿಕವಾಗಿ ತ್ಯಾಜ್ಯ ಉರಿಸುವುದು, ಸುರಕ್ಷಿತವಲ್ಲದ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ನಡೆಸುವುದು, ನಿರ್ಲಕ್ಷ್ಯ ಮತ್ತು ಅಪಾಯಕಾರಿಯಾಗಿ ತ್ಯಾಜ್ಯ ಹರಿಯಬಿಡುವುದು, ಮಲಿನಜಲ ನಿರ್ವಹಣೆಗೆ ವ್ಯವಸ್ಥೆ ಮಾಡಿಕೊಳ್ಳದಿರುವುದು, ಕೋಳಿಫಾರ್ಮ್, ಕಸಾಯಿಖಾನೆ ಸಹಿತ ಮಾಂಸದ ತ್ಯಾಜ್ಯ ರಸ್ತೆ ಬದಿ ಅಥವಾ ಜಲಾಶಯಗಳಿಗೆ ಎಸೆಯುವುದು, ಶೌಚಗೃಹಗಳಲ್ಲಿ ಶುಚಿತ್ವದ ಬಗ್ಗೆ ಅಗತ್ಯ ಮುಂಜಾಗ್ರತೆ ವಹಿಸದಿರುವುದು, ಆಹಾರದಲ್ಲಿ ಆರೋಗ್ಯಕ್ಕೆ ಹಾನಿಕಾರಕ ಪದಾರ್ಥಗಳನ್ನು ಬೆರೆಸುವುದು, ಇಂಥ ಆಹಾರ ಪತ್ತೆಯಾದರೆ ಅದರ ವಿರುದ್ಧ ಕೈಗೊಳ್ಳಬೇಕಾದ ಕ್ರಮ ಹೀಗೆ 29 ವಿವಿಧ ವಿಚಾರಗಳ ಕುರಿತು ಕಾನೂನು ಪರವಾದ ಸಲಹೆ ನೀಡಲಾಗಿದೆ.
ತ್ಯಾಜ್ಯ ವಿಷಯಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆಯ ಸಿಬ್ಬಂದಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರಾಜ್ಯ ಪೊಲೀಸ್ ಮುಖ್ಯಸ್ಥರು ಪ್ರಕಟಿಸಿದ ಡೈರೆಕ್ಟರಿಯಲ್ಲಿನ ಮಾಹಿತಿಗಳನ್ನೂ ಈ ಪುಸ್ತಕದಲ್ಲಿ ಸೇರ್ಪಡೆಗೊಳಿಸಲಾಗಿದೆ. ಕಾನೂನು ಉಲ್ಲಂಘನೆ ಪತ್ತೆ, ಜನಜಾಗೃತಿ ನಡೆಸುವುದು, ಮುನ್ನೆಚ್ಚರಿಕೆ ನೀಡುವುದು, ಕಾನೂನು ಕ್ರಮ ಸ್ವೀಕಾರ, ಸ್ಟೇಷನ್ ಹೌಸ್ ಆಫೀಸರ್ ಹೊಣೆಗಾರಿಕೆ, ವಿವಿಧ ಇಲಾಖೆಗಳ ಏಕೀಕರಣ, ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮೇಲಧಿಕಾರಿಗೆ ವರದಿಸಲ್ಲಿಕೆ ಇತ್ಯಾದಿ ವಿಷಯಗಳನ್ನು ಒದಗಿಸಲಾಗಿದೆ.

ಸ್ಥಳೀಯಾಡಳಿತೆ ಸಂಸ್ಥೆಗಳ ಕಾರ್ಯದರ್ಶಿಗಳು ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ತತ್ಸಂಬಂಧಿ ಪೂರಕ ವಿಚಾರಗಳ ಜತೆಗೆ ಮಾದರಿ ಅರ್ಜಿಗಳು, ದೂರು ನೀಡಿಕೆಯ ಮಾದರಿಯನ್ನೂ ಪ್ರಕಟಿಸಲಾಗಿದೆ.

ಮಾಲಿನ್ಯ ಸಂಸ್ಕರಣೆಯಲ್ಲಿ ಲೋಪ ಎಸಗುವವರ ವಿರುದ್ಧ ಸರ್ಕಾರ ಕೆಲವೊಂದು ಕಟ್ಟುನಿಟ್ಟಿನ ಕಾನೂನು ರೂಪಿಸಿದ್ದರೂ, ಈ ಬಗ್ಗೆ ಅಧಿಕಾರಿಗಳು, ಜನಸಾಮಾನ್ಯರು ಸಮಗ್ರ ಮಾಹಿತಿ ಹೊಂದಿಲ್ಲ. ತ್ಯಾಜ್ಯನಿರ್ವಹಣೆ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಕಾನೂನು ಉಲ್ಲಂಘಿಸುವವರ ವಿರುದ್ಧ ಕೈಗೊಳ್ಳುವ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಪುಸ್ತಕದಲ್ಲಿ ಒದಗಿಸಲಾಗಿದೆ. ಈ ಬಗ್ಗೆ ಕಾರ್ಯಾಗಾರ ನಡೆಸಲಾಗುವುದು.
ಎನ್.ಬಿ.ಸುಬ್ರಹ್ಮಣ್ಯ ಸಮನ್ವಯಾಧಿಕಾರಿ, ಹಸಿರು ಕೇರಳ ಪ್ರಾಜೆಕ್ಟ್, ಕಾಸರಗೋಡು