ಲೋಕಸಭೆಗೆ ಸ್ಪರ್ಧಿಸಲು ನಿರಾಕರಿಸಿದ ವಿಜಯನ್

ತ್ರಿಶೂರ್: ರಾಷ್ಟ್ರೀಯ ತಂಡದ ಮಾಜಿ ನಾಯಕ ಹಾಗೂ 10ಕ್ಕೂ ಅಧಿಕ ಕ್ಲಬ್​ಗಳ ಪರ ಆಡಿರುವ ಭಾರತೀಯ ಫುಟ್​ಬಾಲ್​ನ ದಿಗ್ಗಜ ಆಟಗಾರ ಐಎಂ ವಿಜಯನ್, ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಬಂದ ಆಹ್ವಾನವನ್ನು ತಿರಸ್ಕರಿಸಿದ್ದಾರೆ. ಕಾಂಗ್ರೆಸ್ ಪರವಾಗಿ ಕೇರಳದಲ್ಲಿ ಚುನಾವಣೆಗೆ ನಿಲ್ಲುವಂತೆ ವಿಜಯನ್​ಗೆ ಆಹ್ವಾನ ಬಂದಿತ್ತು. ಆದರೆ, ಸದ್ಯಕ್ಕೆ ಚುನಾವಣೆಯಲ್ಲಿ ಆಸಕ್ತಿ ಇಲ್ಲ ಹಾಗೂ ಚುನಾವಣೆಗೆ ನಿಲ್ಲುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಪ್ರಸ್ತುತ ಕೇರಳ ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ 49 ವರ್ಷದ ವಿಜಯನ್​ಗೆ, ಅವರ ಸ್ನೇಹಿತ ಹಾಗೂ ಸ್ಥಳೀಯ ಕಾಂಗ್ರೆಸ್ ಶಾಸಕ ಅನಿಲ್ ಅಕ್ಕಾರದಿಂದ ಕೇರಳದ ಅಲಥೂರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಆಹ್ವಾನ ಬಂದಿತ್ತು. ‘ಮಾಜಿ ಮುಖ್ಯಮಂತ್ರಿ ಕರುಣಾಕರನ್​ರಿಂದ ಕೇರಳ ಪೊಲೀಸ್​ನಲ್ಲಿ ನನಗೆ ಮೊದಲು ಉದ್ಯೋಗ ದೊರೆತಿತ್ತು. ಈ ಕಾರಣಕ್ಕಾಗಿಯೇ ನಾನು ಕಾಂಗ್ರೆಸ್ ನಾಯಕರಿಗೆ ಆಭಾರಿಯಾಗಿದ್ದೇನೆ. ಆ ಬಳಿಕ ನಾನು ಕೇರಳವನ್ನು ತೊರೆದು, ಕೋಲ್ಕತ ಹಾಗೂ ಪಂಜಾಬ್​ನಲ್ಲಿ ಫುಟ್​ಬಾಲ್ ಆಡಿದೆ. ಫುಟ್​ಬಾಲ್ ಜೀವನ ಮುಗಿದ ಬಳಿಕ, ಕೊಡಿಯೇರಿ ಬಾಲಕೃಷ್ಣನ್ (ಪ್ರಸ್ತುತ ಕೇರಳ ರಾಜ್ಯ ಸಿಪಿಐ-ಎಂ ಕಾರ್ಯದರ್ಶಿ) ಮತ್ತೊಮ್ಮೆ ನನಗೆ ಕೇರಳ ಪೊಲೀಸ್ ಇಲಾಖೆಯಲ್ಲಿ ಕೆಲಸ ಕೊಡಿಸುವಲ್ಲಿ ನೆರವಾದರು. ಕೆಲಸದಿಂದ ನಿವೃತ್ತಿಯಾಗುವುದಕ್ಕೆ ಇನ್ನೂ 6 ವರ್ಷಗಳಿವೆ. ಆ ಬಳಿಕವೇ ಚುನಾವಣೆಯ ಬಗ್ಗೆ ಯೋಚನೆ ಮಾಡುತ್ತೇನೆ’ ಎಂದು ತಿಳಿಸಿದ್ದಾರೆ. ಸದ್ಯಕ್ಕಂತೂ ಯಾವುದೇ ಕಾರಣಕ್ಕೂ ಚುನಾವಣೆಗೆ ನಿಲ್ಲುವ ಯೋಚನೆಯಿಲ್ಲ ಎಂದಿದ್ದಾರೆ.

ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿರುವ ಕೇರಳದ ತ್ರಿಶೂರಿನ ವಿಜಯನ್, 1989ರಿಂದ 2004ರ ಅವಧಿಯಲ್ಲಿ ಭಾರತ ತಂಡದ ಪರವಾಗಿ 66 ಅಂತಾರಾಷ್ಟ್ರೀಯ ಪಂದ್ಯವಾಡಿ 29 ಗೋಲು ಬಾರಿಸಿದ್ದಾರೆ. 1993, 1997 ಹಾಗೂ 1999ರಲ್ಲಿ ಭಾರತದ ವರ್ಷದ ಫುಟ್​ಬಾಲ್ ಆಟಗಾರ ಎನ್ನುವ ಗೌರವವನ್ನೂ ಪಡೆದುಕೊಂಡಿದ್ದರು. ಈ ಪ್ರಶಸ್ತಿಯನ್ನು ಮೂರು ಬಾರಿ ಗೆದ್ದ ಏಕೈಕ ಆಟಗಾರ ವಿಜಯನ್. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಲಥೂರ್ ಕ್ಷೇತ್ರವನ್ನು ಮರಳಿ ಗೆಲ್ಲುವ ನಿಟ್ಟಿನಲ್ಲಿ ಕಾಂಗ್ರೆಸ್ ಎಲ್ಲ ನಿಟ್ಟಿನಲ್ಲೂ ಪ್ರಯತ್ನ ಮಾಡುತ್ತಿದೆ. ಸಿಪಿಐ-ಎಂನ ಪ್ರಾಬಲ್ಯ ಹೊಂದಿರುವ ಈ ಕ್ಷೇತ್ರದಲ್ಲಿ ಪಿಕೆ ಬಿಜು ಹಾಲಿ ಸಂಸದರಾಗಿದ್ದಾರೆ. –ಏಜೆನ್ಸೀಸ್