ಮುನ್ನಾರ್​ನ ರೆಸಾರ್ಟ್​ನಲ್ಲಿ ಸಿಲುಕಿದ 57 ಪ್ರವಾಸಿಗರ ರಕ್ಷಣೆ

ಮುನ್ನಾರ್​: ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮುನ್ನಾರ್​ನ ರೆಸಾರ್ಟ್‌ನಲ್ಲಿ ಸಿಲುಕಿಕೊಂಡಿದ್ದ ರಷ್ಯಾ, ಅಮೆರಿಕ, ಸೌದಿ ಅರೇಬಿಯಾದ ಸುಮಾರು 20 ವಿದೇಶಿ ಪ್ರವಾಸಿಗರು ಸೇರಿ ಒಟ್ಟು 57 ಪ್ರವಾಸಿಗರನ್ನು ರಕ್ಷಿಸಲಾಗಿದೆ.

ರೆಸಾರ್ಟ್​ಗೆ ಸಂಪರ್ಕಿಸುವ ರಸ್ತೆಗಳು ಭೂಕುಸಿತದಿಂದಾಗಿ ಸಂಪೂರ್ಣವಾಗಿ ಮುಚ್ಚಿಹೋಗಿರುವುದರಿಂದ ರೆಸಾರ್ಟ್​ ದ್ವೀಪದಂತಾಗಿದ್ದು, ಅಲ್ಲಿರುವ ಪ್ರವಾಸಿಗರು ಹೊರಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡಿದ್ದರು. ಈ ವೇಳೆ ಕಾರ್ಯಾಚರಣೆ ಕೈಗೊಂಡ ಭಾರತೀಯ ಸೇನೆ ಪ್ರವಾಸಿಗರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

ಕಳೆದ 26 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಡುಕ್ಕಿ ಜಲಾಶಯದ ಗೇಟ್‌ಗಳನ್ನು ತೆರೆದಿದ್ದು, ನೀರನ್ನು ಹೊರ ಬಿಡಲಾಗುತ್ತಿದೆ. ರಾಜ್ಯದ ಸುಮಾರು 25 ಡ್ಯಾಮ್‌ಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಲೇ ಸಾಗಿದ್ದು, ನೀರನ್ನು ಹೊರಬಿಡಲಾಗುತ್ತಿದೆ. ವಿವಿಧೆಡೆ ರಸ್ತೆ ಕುಸಿದಿದ್ದು, ಕಳೆದ 48 ಗಂಟೆಗಳಲ್ಲಿ ಸತ್ತವರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ.

ಸದ್ಯ ನೆರೆ ಪೀಡಿತ ಪ್ರದೇಶಗಳಲ್ಲಿ 439 ನಿರಾಶ್ರಿತ ಶಿಬಿರಗಳನ್ನು ತೆರೆಯಲಾಗಿದ್ದು, 53,502 ಜನರಿಗೆ ಆಶ್ರಯ ನೀಡಲಾಗಿದೆ.
ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ರಾಜ್ಯದ ವಯನಾಡ್‌, ಇಡುಕ್ಕಿ, ಅಲಪ್ಪುಝಾ, ಕೊಟ್ಟಾಯಂ, ಎರ್ನಾಕುಲಂ, ಪಲಕ್ಕಾಡ್‌, ಮಲ್ಲಾಪುರಂ ಮತ್ತು ಕೋಯಿಕೋಡ್‌ ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. (ಏಜೆನ್ಸೀಸ್​)