ಚಲಿಸುವ ಕಾರಿನ ಮುಂದೆ ವ್ಯಕ್ತಿಯನ್ನು ನೂಕಿ ಕೊಲೆಗೈದ ಆರೋಪಿ ಡಿವೈಎಸ್​ಪಿ ಅಮಾನತು

ತಿರುವನಂತಪುರ(ಕೇರಳ): ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಚಲಿಸುತ್ತಿರುವ ಕಾರಿನ ಮುಂದೆ ವ್ಯಕ್ತಿಯೊಬ್ಬನನ್ನು ನೂಕಿ ಕೊಲೆ ಮಾಡಿದ್ದಾರೆ ಎಂದು ಹೇಳಲಾದ ಘಟನೆ ಕೇರಳದ ನೆಯ್ಯಾಟಿಂಕರಾ ಬಳಿ ಮಂಗಳವಾರ ನಡೆದಿದೆ.

ಡೆಪ್ಯೂಟಿ ಸೂಪರಿಂಟೆಂಡೆಂಟ್​ ಆಫ್​ ಪೊಲೀಸ್​ ಬಿ. ಹರಿಕುಮಾರ್​ ಎಂಬುವವರನ್ನು ಅಮಾನತುಗೊಳಿಸಲಾಗಿದ್ದು, ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್​ 302 ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.​

ಸಂತ್ರಸ್ತ ಸನಾಲ್​ ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲೇ ಅಸುನೀಗಿದ್ದಾರೆ.

ಸೋಮವಾರ ರಾತ್ರಿ ಹರಿಕುಮಾರ್​, ಸನಾಲ್​ನನ್ನು ರಸ್ತೆ ಬದಿ ಪಾರ್ಕ್​ ಮಾಡಿದ್ದ ಕಾರನ್ನು ತೆಗೆಯುವಂತೆ ಕೇಳಿದ್ದಾರೆ. ಇದೇ ವಿಚಾರದಲ್ಲಿ ಇಬ್ಬರ ನಡುವೆ ಜಗಳ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಈ ವೇಳೆ ಹರಿಕುಮಾರ್​, ಸನಾಲ್​ನನ್ನು ಚಲಿಸುತ್ತಿದ್ದ ಕಾರಿನ ಮುಂದೆ ತಳ್ಳಿದರು ಎಂದು ಸ್ಥಳೀಯರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಪ್ರಕರಣದ ಗಂಭೀರತೆ ಪರಿಗಣಿಸಿ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಅಸಿಸ್ಟೆಂಟ್ ಸೂಪರಿಂಟೆಂಡೆಂಟ್​ ಆಫ್​ ಪೊಲೀಸ್​ ಪ್ರಕರಣದ ತನಿಖೆಯನ್ನು ನಡೆಸಲಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೋಳಿಕ್ಕೋಡ್​ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. (ಏಜೆನ್ಸೀಸ್​)